ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂಗೆ ಸುಪ್ರೀಂನಿಂದ ರಿಲೀಫ್
ನವದೆಹಲಿ, ಸೆ. 02: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂಗೆ ಸೋಮವಾರದಂದು ಸುಪ್ರೀಂಕೋರ್ಟಿನಿಂದ ಶುಭ ಸುದ್ದಿ ಸಿಕ್ಕಿದೆ
ಮಾಜಿ ಗೃಹ ಸಚಿವ 74 ವರ್ಷ ವಯಸ್ಸಿನ ಪಿ ಚಿದಂಬರಂ ಜಾಮೀನು ಅರ್ಜಿ ಸಲ್ಲಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಜೊತೆಗೆ ಮುಂದಿನ ಆದೇಶದ ತನಕ ಚಿದಂಬರಂ ಬಂಧಿಸಿ, ತಿಹಾರ್ ಜೈಲಿಗೆ ಕಳಿಸುವಂತಿಲ್ಲ ಎಂದು ತನಿಖಾ ಸಂಸ್ಥೆಗೆ ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಹಾಗೂ ಆರ್ ಬಾನುಮತಿ ಅವರಿರುವ ನ್ಯಾಯಪೀಠವು ಸೂಚಿಸಿದೆ.
ಒಂದು ವೇಳೆ ವಿಚಾರಣಾ ನ್ಯಾಯಾಲಯವು ಚಿದಂಬರಂ ಅರ್ಜಿ ತಿರಸ್ಕರಿಸಿದರೆ, ಕಸ್ಟಡಿಯಲ್ಲೇ ವಿಚಾರಣೆಯನ್ನು ಗುರುವಾರದ ತನಕ ನಡೆಸಬೇಕು, ಗುರುವಾರದವರೆಗೂ ಕಸ್ಟಡಿಯಲ್ಲೇ ವಿಚಾರಣೆ ನಡೆಸಲು ಸೂಚನೆ ನೀಡಲಾಗಿದೆ.

"ಆಗಸ್ಟ್ 21ರಂದು ದೆಹಲಿ ನಿವಾಸದಲ್ಲಿದ್ದ ಚಿದಂಬರಂರನ್ನು ಸಿಬಿಐ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, 11 ದಿನಗಳ ಕಾಲ ಕಸ್ಟಡಿಯಲ್ಲಿಟ್ಟುಕೊಂಡು ವಿಚಾರಣೆ ನಡೆಸಿದ್ದಾರೆ. ಅವರಿಗೆ ಭದ್ರತೆ ಬೇಕಿದೆ, ತಿಹಾರ್ ಜೈಲಿಗೆ ಕಳಿಸದಿದ್ದರೆ ಗೃಹಬಂಧನ ವಿಧಿಸಿ' ಎಂದು ಚಿದಂಬರಂ ಪರ ವಕೀಲ ಕಪಿಲ್ ಸಿಬಾಲ್ ವಾದಿಸಿದರು.
"ಆದರೆ ಗೃಹ ಬಂಧನವನ್ನು ರಾಜಕೀಯ ಕೈದಿಗಳಿಗೆ ಬಳಸುವ ವಿಧಾನವಾಗಿದೆ, ಇದು ಭ್ರಷ್ಟಾಚಾರ ಪ್ರಕರಣವಾಗಿದ್ದು, ಚಿದಂಬರಂ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು' ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ನಿರೀಕ್ಷಣಾ ಜಾಮೀನು ರದ್ದುಪಡಿಸಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪಿ.ಚಿದಂಬರಂ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿ ಕುರಿತ ದೇಶವನ್ನು ಸೆಪ್ಟೆಂಬರ್ 5 ರಂದು ಸುಪ್ರೀಂಕೋರ್ಟ್ ನೀಡಲಿದೆ.












Click it and Unblock the Notifications