Inspiration Story: ಮಕ್ಕಳ ಶಿಕ್ಷಣಕ್ಕಾಗಿ ಬರಿಗಾಲಿನಲ್ಲಿ ಮ್ಯಾರಥಾನ್ ಓಡಿ ಗೆದ್ದ 47ರ ತಾಯಿ; ಮಗಳಿಗೆ ಸ್ಫೂರ್ತಿಯಾದ ರಮಾಬಾಯಿ
ಮಹಾರಾಷ್ಟ್ರದ ಮಹಿಳೆಯೊಬ್ಬರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಮ್ಯಾರಥಾನ್‌ನಲ್ಲಿ ಬರಿಗಾಲಿನಲ್ಲಿ ಓಡಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಮ್ಯಾರಾಥಾನ್‌ನಿಂದ ಬಂದ ಹಣದಲ್ಲಿ ತಮ್ಮ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುವುದಾಗಿ ಹೇಳಿದ್ದಾರೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ 47 ವರ್ಷದ ಮಹಿಳೆ ರಮಾಬಾಯಿ ರಣವೀರ್ ಅವರು ಮ್ಯಾರಥಾನ್‌ನಲ್ಲಿ ಬರಿಗಾಲಿನಲ್ಲಿ ಓಡಿ ಪ್ರಥಮ ಸ್ಥಾನ ಪಡೆದ್ದಾರೆ. ಇದು ಇಡೀ ದೇಶದ ಗಮನ ಸೆಳೆದಿದೆ. ಬಹುಮಾನದ ಹಣವನ್ನು ತಮ್ಮ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ವಿಶೇಷವೆಂದರೆ ರಮಾಬಾಯಿ ಅವರ ಮಗಳು ಸಹ ಈ ಮ್ಯಾರಾಥಾನ್‌ನಲ್ಲಿ ಭಾಗವಹಿಸಿದ್ದು, ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇಲ್ಲಿನ ಅಂಬಾಜೋಗೈ ನಿವಾಸಿ ರಮಾಬಾಯಿ ರಣವೀರ್ ಪಟ್ಟಣದ ಅಕಾಡೆಮಿಯಲ್ಲಿ ಅಡುಗೆ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಾರೆ. ಮುಂಬೈನಲ್ಲಿ ಸಂಭವಿಸಿದ ಅಪಘಾತದಲ್ಲಿ ಪತಿ ನಿಧನರಾದ ನಂತರ ಅವರ ಇಬ್ಬರು ಹೆಣ್ಣುಮಕ್ಕಳನ್ನು ಬೆಳೆಸುವ ಜವಾಬ್ದಾರಿ ರಮಾಬಾಯಿ ಅವರ ಮೇಲಿತ್ತು. ಆರ್ಥಿಕ ಸಂಕಷ್ಟಗಳ ಹೊರತಾಗಿಯೂ, ಇಬ್ಬರೂ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು ಎನ್ನುವ ಉದ್ದೇಶದಿಂದ ರಮಾಬಾಯಿ ಅವರು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.

ರಮಾಬಾಯಿ ಅವರು ತಮ್ಮ ಹಿರಿಯ ಮಗಳನ್ನು ಅಂಬಾಜೋಗೈನಲ್ಲಿರುವ ಅಕಾಡೆಮಿಯೊಂದಕ್ಕೆ ಸೇರಿಸಿದ್ದರು. ಅಲ್ಲೇ ಅಡುಗೆ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ರಮಾಬಾಯಿ ಅವರ ಹೆಣ್ಣು ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಮಾಡುವಾಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ಊಟ ತಯಾರಿಸುವುದಕ್ಕೂ ಅವರು ಸಹಾಯ ಮಾಡುತ್ತಿದ್ದರು ಎಂದು ಹೇಳಲಾಗಿದೆ.
Inspiration: ಮ್ಯಾರಥಾನ್‌ನಲ್ಲಿ ಭಾಗವಹಿಸಿ ಗೆದ್ದ ರಮಾಬಾಯಿ ರಣವೀರ್
ಇನ್ನು ಈ ಮಧ್ಯೆ ಸ್ಥಳೀಯ ಸಂಸ್ಥೆಯು ಅಮೃತ್ ದೌಡ್ ಮ್ಯಾರಥಾನ್ ಆಯೋಜನೆ ಮಾಡಿತ್ತು. ಈ ಮ್ಯಾರಾಥಾನ್‌ನಲ್ಲಿ ಗೆದ್ದವರಿಗೆ 3,000 ರೂಪಾಯಿ ಬಹುಮಾನ ನೀಡುವುದಾಗಿಯೂ ಘೋಷಿಸಲಾಗಿತ್ತು. ರಮಾಬಾಯಿ ರಣವೀರ್ ಅವರು ಈ ಮ್ಯಾರಾಥಾನ್‌ನಲ್ಲಿ ಭಾಗವಹಿಸಲು ನಿರ್ಧರಿಸಿದರು. ಸರಳ ಸೀರೆಯನ್ನು ಧರಿಸಿ ಟ್ರ್ಯಾಕ್‌ಸೂಟ್‌ಗಳಲ್ಲಿ ಕಿರಿಯ ಓಟಗಾರರ ನಡುವೆ ರಮಾಬಾಯಿ ಓಡಿದರು. ಮ್ಯಾರಾಥಾನ್‌ನ ಪ್ರಾರಂಭದಲ್ಲಿ ಚಪ್ಪಲಿಗಳನ್ನು ಧರಿಸಿದ್ದರು. ಆದಾಗ್ಯೂ, ಓಟ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಅವರ ಚಪ್ಪಲಿ ಜಾರಲು ಶುರುವಾಯ್ತು. ಕೂಡಲೇ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ಬರಿಗಾಲಿನಲ್ಲಿ ಓಡಲು ಪ್ರಾರಂಭಿಸಿದರು. ರಮಾಬಾಯಿ ಅಂತಿಮವಾಗಿ ಪ್ರಥಮ ಸ್ಥಾನ ಗಳಿಸಿದರು.
Inspiration: ಮ್ಯಾರಾಥಾನ್ ಗೆಲುವಿನ ಬಗ್ಗೆ ರಮಾಬಾಯಿ ರಣವೀರ್ ಹೇಳಿದ್ದೇನು
ಮ್ಯಾರಾಥಾನ್ ಗೆಲುವಿನ ಬಗ್ಗೆ ಮಾತನಾಡಿರುವ ರಮಾಬಾಯಿ ರಣವೀರ್ ಅವರು, ಓಟದಲ್ಲಿ ಅನೇಕ ಮಹಿಳೆಯರು ಭಾಗವಹಿಸಲಿದ್ದಾರೆ ಎಂದಿದ್ದರು. ಹೆಣ್ಣು ಮಕ್ಕಳ ಭವಿಷ್ಯಕ್ಕೆ, ವಿದ್ಯಾಭ್ಯಾಸಕ್ಕೆ 3,000 ರೂ. ಬಹುಮಾನದ ಹಣ ನೆರವಾಗಬಹುದು. ಇದರಿಂದ ಪುಸ್ತಕಗಳನ್ನು ಖರೀದಿಸಬಹುದು ಎನ್ನುವ ಉದ್ದೇಶದಿಂದ ಈ ಮ್ಯಾರಾಥಾನ್‌ನಲ್ಲಿ ಭಾಗವಹಿಸಲು ನಿರ್ಧರಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ವಿಶೇಷವೆಂದರೆ ಮ್ಯಾರಾಥಾನ್‌ನಲ್ಲಿ ರಮಾಬಾಯಿ ಅವರ ಮಗಳು ಪೂಜಾ ಸಹ ಭಾಗವಹಿಸಿದ್ದರು, ಪೂಜಾ ಎರಡನೇ ಸ್ಥಾನ ಪಡೆದಿದ್ದಾರೆ. ತನ್ನ ತಾಯಿ ಭಾಗವಹಿಸಲು ಪ್ರೋತ್ಸಾಹಿಸಿದರು. ಆದರೆ ಅವರು ಪ್ರಥಮ ಸ್ಥಾನ ಪಡೆಯುತ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ ಎಂದು ಪೂಜಾ ಅವರು ಹೇಳಿದ್ದಾರೆ.
ತನ್ನ ತಾಯಿ ಕಷ್ಟದಲ್ಲೂ ಸಹೋದರಿಯರನ್ನು ಬೆಳೆಸಿದ್ದಾಳೆ ಮತ್ತು ಎಂದಿಗೂ ಬಿಟ್ಟುಕೊಡಲಿಲ್ಲ ಎಂದು ಪೂಜಾ ಹೇಳಿದರು. ಪ್ರಸ್ತುತ ಪೊಲೀಸ್ ನೇಮಕಾತಿಗೆ ತಯಾರಿ ನಡೆಸುತ್ತಿದ್ದು, ಪೊಲೀಸ್ ಅಧಿಕಾರಿಯಾಗುವ ಕನಸು ಇದೆ ಎಂದು ಪೂಜಾ ಹೇಳಿದ್ದಾರೆ. ಇನ್ನು ಆಕೆಯ ಸಹೋದರಿ ಬ್ಯಾಂಕಿಂಗ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ.
ಕುಟುಂಬವು ಮೊದಲು ಕೃಷಿ ಕೆಲಸವನ್ನು ಅವಲಂಬಿಸಿತ್ತು, ಆದರೆ ರಮಾಬಾಯಿ ತನ್ನ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಕಾಡೆಮಿಯಲ್ಲಿ ಅಡುಗೆ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಕುಟುಂಬದ ಕಷ್ಟವನ್ನು ನೋಡಿ ಅಕಾಡೆಮಿ ನಿರ್ದೇಶಕರು ಅವಳ ಕಾಲೇಜು ಶುಲ್ಕವನ್ನು ಸಹ ಮನ್ನಾ ಮಾಡಿದ್ದಾರೆ ಎನ್ನಲಾಗಿದೆ.


Click it and Unblock the Notifications
