Train Accident: ಹಳಿತಪ್ಪಿದ ಇಂದೋರ್-ಜಬಲ್‌ಪುರ ಎಕ್ಸ್‌ಪ್ರೆಸ್ ರೈಲು: ಕಾರವಾರದಲ್ಲಿ ರೈಲು ದುರಂತ ತಪ್ಪಿಸಿದ ನಿರ್ವಾಹಕ
ಇಂದೋರ್-ಜಬಲ್‌ಪುರ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳು ಹಳಿತಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಂದೋರ್-ಜಬಲ್‌ಪುರ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಶನಿವಾರ ಬೆಳಿಗ್ಗೆ ಜಬಲ್‌ಪುರ ನಿಲ್ದಾಣದ ಬಳಿ ತಲುಪುತ್ತಿದ್ದಾಗ ಹಳಿತಪ್ಪಿವೆ.
ಇಂದೋರ್-ಜಬಲ್‌ಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ (22191) ಎರಡು ಬೋಗಿಗಳು ಜಬಲ್‌ಪುರ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ ಆರಕ್ಕೆ ತಲುಪುತ್ತಿದ್ದಾಗ ಈ ಘಟನೆ ನಡೆದಿದ್ದು ಈ ಅಪಘಾತದಲ್ಲಿ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ ಎಂದು ತಿಳಿದು ಬಂದಿದೆ.

ಹಳಿತಪ್ಪಿದ ಕೋಚ್‌ಗಳು ಎಂಜಿನ್‌ನ ಹಿಂದೆಯೇ ಇದ್ದವು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ಲಾಟ್‌ಫಾರ್ಮ್‌ನಿಂದ ಸುಮಾರು 50 ಮೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ಹಳಿಗಳ ದುರಸ್ತಿ ಮತ್ತು ರೈಲು ಸಂಚಾರವನ್ನು ಪುನಃಸ್ಥಾಪಿಸುವ ಕೆಲಸ ನಡೆಯುತ್ತಿದೆ.
ಹಳಿ ತಪ್ಪಿದ ಎಂಜಿನ್ ಪಕ್ಕದಲ್ಲಿದ್ದ ಎರಡು ಬೋಗಿಗಳು: ಡಿಸಿಎಂ ಮಧುರ್ ವರ್ಮಾ
ಪಶ್ಚಿಮ-ಮಧ್ಯ ರೈಲ್ವೆಯ ಜಬಲ್‌ಪುರ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ (ಡಿಸಿಎಂ) ಮಧುರ್ ವರ್ಮಾ ಈ ಬಗ್ಗೆ ಮಾತನಾಡಿ, ರೈಲು ನಿಗದಿತ ಆಗಮನದ ಸಮಯ ಬೆಳಿಗ್ಗೆ 5.35 ಆಗಿತ್ತು. ಬೆಳಗ್ಗೆ 5.38ಕ್ಕೆ ರೈಲು ಜಬಲ್‌ಪುರ ನಿಲ್ದಾಣಕ್ಕೆ ಪ್ರವೇಶಿಸಲು ಮುಂದಾದಾಗ ಈ ಅಪಘಾತ ಸಂಭವಿಸಿದೆ.

ಲೊಕೊ ಪೈಲಟ್ ತಕ್ಷಣವೇ ರೈಲನ್ನು ನಿಲ್ಲಿಸಿ ಇತರ ಬೋಗಿಗಳನ್ನು ಹಳಿತಪ್ಪದಂತೆ ರಕ್ಷಿಸಿದರು. ಇಂಜಿನ್ ಪಕ್ಕದಲ್ಲಿದ್ದ ಎರಡು ಬೋಗಿಗಳು ಹಳಿತಪ್ಪಿದ್ದು, ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ. ಅಪಘಾತದ ನಂತರ ಪ್ರಯಾಣಿಕರು ರೈಲಿನಿಂದ ಕೆಳಗಿಳಿದರು. ಕೆಲ ಹೊತ್ತು ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಅಪಘಾತದ ಸಮಯದಲ್ಲಿ ರೈಲಿನ ವೇಗ ಎಷ್ಟು?
ತನಿಖೆಗಾಗಿ ಬಹು ಇಲಾಖಾ ಸಮಿತಿ ರಚಿಸಲಾಗಿದೆ ಎಂದು ಮಧುರ್ ವರ್ಮಾ ಹೇಳಿದ್ದಾರೆ. ನಿಲ್ದಾಣದ ಒಂದು ಪ್ಲಾಟ್‌ಫಾರ್ಮ್ ಅನ್ನು ಮಾತ್ರ ಕಾರ್ಯಾಚರಣೆಗಾಗಿ ಮುಚ್ಚಿದ್ದರಿಂದ ರೈಲು ಸಂಚಾರದ ಮೇಲೆ ಹೆಚ್ಚಿನ ಪರಿಣಾಮ ಬೀರಲಿಲ್ಲ. ಪಶ್ಚಿಮ-ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರ್ಷಿತ್ ಶ್ರೀವಾಸ್ತವ ಮಾತನಾಡಿ, ಈ ಘಟನೆ ಸಂಭವಿಸಿದಾಗ, ರೈಲು ಗಂಟೆಗೆ ಐದು ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ರೈಲು ಹಳಿ ತಪ್ಪಿದ ಕಾರಣ ತನಿಖೆಯ ನಂತರವಷ್ಟೇ ತಿಳಿಯಲಿದೆ. ಮಾರ್ಗದಲ್ಲಿ ರೈಲು ಸಂಚಾರ ಸಾಮಾನ್ಯವಾಗಿತ್ತು ಎಂದರು.
ಕಾರವಾರದಲ್ಲಿ ರೈಲು ದುರಂತ ತಪ್ಪಿಸಿದ ರೈಲ್ವೆ ನಿರ್ವಾಹಕ
ರೈಲ್ವೆ ನಿರ್ವಾಹಕರೊಬ್ಬರು ಹಳಿಯ ಮೇಲೆ ಐದು ನಿಮಿಷದಲ್ಲಿ 500 ಮೀಟರ್ ಓಡಿ ರೈಲ್ವೆ ದುರಂತವೊಂದನ್ನು ತಪ್ಪಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕೊಂಕಣ ರೈಲ್ವೆ ಮಾರ್ಗದಲ್ಲಿ ನಡೆದಿದೆ. ಭಟ್ಕಳದ ಮಾದವ ನಾಯ್ಕ ರೈಲು ದುರಂತ ತಪ್ಪಿಸಿದ ರೈಲ್ವೆ ನಿರ್ಮಾಪಕ. ಕೊಂಕಣ ರೈಲ್ವೆ ಮಾರ್ಗದ ಕುಮಾಟಾ ಹೊನ್ನಾವರ ನಡುವಿನ ಹಳಿಯ ವೆಲ್ಡಿಂಗ್ ಬಿಟ್ಟಿತ್ತು.
ಇದರಿಂದ ಇದೇ ಮಾರ್ಗದಲ್ಲಿ ಬರುವ ರಾಜಧಾನಿ ಎಕ್ಸ್ಪೆಸ್ ರೈಲು ಹಳಿ ತಪ್ಪಿ ದುರಂತವಾಗುವ ಸಾಧ್ಯತೆ ಇತ್ತು. ರಾತ್ರಿ ಕರ್ತವ್ಯದಲ್ಲಿದ್ದ ರೈಲ್ವೆ ನಿರ್ವಾಹಕ ಮಾಧವ ನಾಯ್ಕ, ಹಳಿ ಪರಿಶೀಲನೆ ಮಾಡುವಾಗ ಹಳಿಯೆ ವೆಲ್ಡಿಂಗ್ ಬಿಟ್ಟಿರುವುದು ಪತ್ತೆಯಾಗಿತ್ತು. ಸ್ಟೇಶನ್ ಮಾಸ್ಟರ್‌ಗೆ ಕರೆ ಮಾಡಿದ್ದರೂ ಸಂಪರ್ಕ ಸಾಧ್ಯವಾಗಿರಲಿಲ್ಲ. ಹೀಗಾಗಿ ನಿರ್ವಾಹಕ ಕೆಂಪು ದೀಪ ಹಿಡಿದು ಹಳಿ ಮೇಲೆ 500 ಮೀಟರ್ ದೂರದವರೆಗೆ ಓಡಿ ಹೊನ್ನಾವರದಿಂದ ಕಾರವರದತ್ತ ಬರುತ್ತಿದ್ದ ರೈಲಿಗೆ ಕೆಂಪು ದೀಪ ತೋರಿಸಿ ರೈಲನ್ನು ನಿಲ್ಲಿಸಿದ್ದಾರೆ.












Click it and Unblock the Notifications