‘ಖಲಿಸ್ತಾನಿ’ಗಳು ಹಿತ್ತಲ ಹಾವುಗಳು: ಕೆನಡಾ ಕನ್ನಡಿನ ಆಕ್ರೋಶ!
ಟೊರಾಂಟೊ: ದಿನದಿಂದ ದಿನಕ್ಕೆ 'ಖಲಿಸ್ತಾನಿ' ಹೋರಾಟಗಾರರ ಕಿರಿಕ್ ಹೆಚ್ಚಾಗುತ್ತಿರುವ ಬೆನ್ನಲ್ಲೇ ಭಾರತ ಖಡಕ್ ಎಚ್ಚರಿಕೆ ರವಾನಿಸಿದೆ. ಅದರಲ್ಲೂ ಕಳೆದ ಕೆಲ ತಿಂಗಳಿಂದ ಹೀಗೆ ಖಲಿಸ್ತಾನಿಗಳು ಹೊರ ದೇಶದಲ್ಲಿ ಭಾರತೀಯರನ್ನ & ಭಾರತದ ರಾಯಭಾರ ಕಚೇರಿಗಳನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ ಈ ಹೊತ್ತಲ್ಲೇ ಕರ್ನಾಟಕ ಮೂಲದ ಕೆನಡಾ ಸಂಸದ, ಖಲಿಸ್ತಾನಿ ಬೆಂಬಲಿಗರನ್ನು ಹಿತ್ತಲ ಹಾವುಗಳು ಎಂದಿದ್ದಾರೆ!
Khalistanis in Canada continue to reach new low in abusing our Charter of Rights and Freedom by promoting violence and hate.
— Chandra Arya (@AryaCanada) July 4, 2023
Emboldened by non-criticism from elected officials of a recent Brampton parade portraying and celebrating the assassination of Indian Prime Minister… pic.twitter.com/c4LUEXQ5kW
ಹೌದು, ಖಲಿಸ್ತಾನಿ ಬೆಂಬಲಿಗರು ಹೆಚ್ಚಾಗಿ ಇರುವ ದೇಶಗಳ ಪೈಕಿ ಕೆನಡಾ ಕೂಡ ಒಂದು. ಹೀಗಾಗಿ ಅಲ್ಲಿ ಪದೇ ಪದೆ 'ಖಲಿಸ್ತಾನಿ'ಗಳ ಕಿರಿಕ್ ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಈ ಕಿರಿಕಿರಿ ಜಾಸ್ತಿ ಆಗಿದ್ದು, ಈ ಕುರಿತು ಕೆನಡಾ ಸಂಸದ ಮತ್ತು ಕರ್ನಾಟಕ ಮೂಲದವರಾದ ಚಂದ್ರ ಆರ್ಯ ಎಚ್ಚರಿಕೆ ನೀಡಿದ್ದಾರೆ. 'ನಮ್ಮ ಮನೆ ಹಿತ್ತಲಿನ ಹಾವುಗಳು ತಲೆಯೆತ್ತುತ್ತಿವೆ & ಮತ್ತು ಬುಸುಗುಟ್ಟುತ್ತಿವೆ. ಇದೀಗ ಅವು ಯಾವ ಸಮಯದಲ್ಲಿ ನಮ್ಮನ್ನು ಕಚ್ಚಿ ಕೊಲ್ಲುತ್ತವೆ ಎಂಬುದಷ್ಟೇ ನಮ್ಮ ಮುಂದಿರುವ ಪ್ರಶ್ನೆ.' ಎಂದು ಕೆನಡಾ ಸಂಸದ ಚಂದ್ರ ಆರ್ಯ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈಗ ಚಂದ್ರ ಆರ್ಯ ಮಾತಿಗೆ ಭಾರಿ ಬೆಂಬಲ ವ್ಯಕ್ತವಾಗಿದೆ.

ಕೆನಡಾ ಪೂರ್ತಿ ಖಲಿಸ್ತಾನಿ ಕಿರಿಕಿರಿ!
ಅಂದಹಾಗೆ ಇತ್ತೀಚೆಗೆ ಕೆನಡಾದಲ್ಲಿ ಹರ್‌ದೀಪ್ ಸಿಂಗ್ ನಿಜ್ಜಾರ್‌ನನ್ನ ಉಗ್ರವಾದ ಆರೋಪದ ಹಿನ್ನೆಲೆ ಹತ್ಯೆ ಮಾಡಲಾಗಿತ್ತು. ಆದ್ರೆ ಸಾವಿಗೆ ಕೆನಡಾದ ಭಾರತೀಯ ರಾಯಭಾರಿ ಸಂಜಯ್ ಕುಮಾರ್ ವರ್ಮ, ಅಪೂರ್ವ ಶ್ರೀವಾತ್ಸವ ಕಾರಣ ಎಂದು ಬಿಂಬಿಸುವ ರೀತಿಯಲ್ಲಿ ಪೋಸ್ಟರ್ ಹಂಚಲಾಗಿದೆ. ಇದು ಖಲಿಸ್ತಾನಿ ಕೃತ್ಯ ಎಂಬ ಆರೋಪದ ಹಿನ್ನೆಲೆ ಈಗ ಭಾರಿ ಆಕ್ರೋಶ ವ್ಯಕ್ತವಾಗಿದೆ. ಜುಲೈ 8ರಂದು ಖಲಿಸ್ತಾನಿ ಬೆಂಬಲಿಗರು ಈ ಘಟನೆ ಖಂಡಿಸಿ 'ಖಾಲಿಸ್ತಾನ ಫ್ರೀಡಂ ರ‍್ಯಾಲಿ' ನಡೆಸಲು ಸಜ್ಜಾಗಿದ್ದಾರೆ. ಆದ್ರೆ ಭಾರತೀಯರನ್ನ ಟಾರ್ಗೆಟ್ ಮಾಡಿರುವ ಆರೋಪದ ಬೆನ್ನಲ್ಲೇ ಕೆನಡಾ ಸಂಸದ, ಕರ್ನಾಟಕ ಮೂಲದ ಚಂದ್ರ ಆರ್ಯ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದ ವಿರುದ್ಧ 'ಖಲಿಸ್ತಾನಿ' ಕುತಂತ್ರ!
'ಖಲಿಸ್ತಾನಿ'ಗಳ ಉಪಟಳದ ಬಗ್ಗೆ ಟ್ವೀಟ್ ಮಾಡಿರುವ ಕೆನಡಾ ಸಂಸದ ಚಂದ್ರ ಆರ್ಯ, 'ಕೆನಡಾದಲ್ಲಿನ ಖಾಲಿಸ್ತಾನಿ ಬೆಂಬಲಿಗರು ಹಿಂಸೆ ಹಾಗೂ ದ್ವೇಷಕ್ಕೆ ಉತ್ತೇಜನ ನೀಡುತ್ತಿದ್ದಾರೆ. ಈ ಮೂಲಕ ದೇಶದಲ್ಲಿ ನೀಡಿರುವ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಮತ್ತಷ್ಟು ಕೆಳಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಹಿತ್ತಲಿನ ಹಾವುಗಳು ಬುಸುಗುಡುತ್ತಿವೆ. ಅವು ಯಾವ ಸಮಯದಲ್ಲಿ ನಮ್ಮನ್ನ ಕಚ್ಚಿ ಕೊಲ್ಲುತ್ತವೆ ಎಂಬುದಷ್ಟೇ ನಮ್ಮ ಮುಂದಿರುವ ಪ್ರಶ್ನೆ' ಎಂದು ಆಕ್ರೋಶವನ್ನ ಹೊರಹಾಕಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ಖಲಿಸ್ತಾನಿಗಳು ಇಂದಿರಾ ಗಾಂಧಿಯವರ ಹತ್ಯೆ ಬಗ್ಗೆ ಸ್ತಬ್ಧಚಿತ್ರ ಪ್ರದರ್ಶನ ಮಾಡಿದ್ದನ್ನು ಖಂಡಿಸಿದ್ದಾರೆ ಕೆನಡಾ ಸಂಸದ ಚಂದ್ರ ಆರ್ಯ.
ಭಾರತದ ವಿರುದ್ಧ ಮುಂದುವರಿದ ಷಡ್ಯಂತ್ರ
ಹೌದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಬಲ ಹೊಂದಿರುವ ಖಲಿಸ್ತಾನಿ ಬೆಂಬಲಿಗ ಪಡೆ ಈಗ ಭಾರತದ ವಿರುದ್ಧ ಷಡ್ಯಂತ್ರ ಮಾಡಿದಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತದ ವಿರುದ್ಧ ಪದೇ ಪದೆ ಈ ರೀತಿ ಕೃತ್ಯ ನಡೆಯುತ್ತಿದೆ. ಅಮೆರಿಕ ಸೇರಿ ಕೆನಡಾದ ಬಹುಭಾಗದಲ್ಲಿ ಖಲಿಸ್ತಾನಿ ಬೆಂಬಲಿಗರು ವಾಸವಿದ್ದು, ನ್ಯೂಜಿಲ್ಯಾಂಡ್ & ಆಸ್ಟ್ರೇಲಿಯಾದ ಕೆಲ ಭಾಗಗಳಲ್ಲೂ ಖಲಿಸ್ತಾನಿ ಬೆಂಬಲಿಗರು ಭಾರತದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಆರೋಪವಿದೆ. ಆದರೆ ಈ ಮಧ್ಯೆ ಕೆನಡಾ ನೇರವಾಗಿ ಖಲಿಸ್ತಾನಿಗಳ ವಿರುದ್ಧ ಎಚ್ಚರಿಕೆ ಸಂದೇಶ ರವಾನಿಸಿದೆ.

ಒಟ್ಟಾರೆ ಕೆನಡಾ ಸರ್ಕಾರ ನೇರ ವಾರ್ನಿಂಗ್ ಕೊಟ್ಟಿದ್ದರೂ ಖಲಿಸ್ತಾನಿ ಬೆಂಬಲಿಗರು ತೆಪ್ಪಗೆ ಕೂರುತ್ತಿಲ್ಲ. ಹೀಗಾಗಿ ಭಾರತೀಯರು ಕೂಡ ಈಗ ಭಾರತದ ಪರವಾಗಿ ಬೆಂಬಲ ನೀಡುತ್ತಾ ಖಲಿಸ್ತಾನಿಗಳ ಕೃತ್ಯ ವಿರೋಧಿಸುತ್ತಿದ್ದಾರೆ. ಆದರೆ ಭಾರತದ ಶತ್ರು ದೇಶಗಳ ಬೆಂಬಲದಿಂದ ಖಲಿಸ್ತಾನಗಳು ಹೀಗೆ ವರ್ತಿಸುತ್ತಿರುವ ಆರೋಪ ಕೇಳಿಬಂದಿದೆ. ಕೇಂದ್ರ ಸರ್ಕಾರ ಕೂಡ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿದ್ದು, ಮೊನ್ನೆ ಮೊನ್ನೆ ತಾನೆ ಅಮೆರಿಕದಲ್ಲೂ ಇದೇ ರೀತಿ ಖಲಿಸ್ತಾನಿಗಳು ಭಾರತದ ರಾಯಭಾರ ಕಚೇರಿ ಮೇಲೆ ದಾಳಿ ಮಾಡಿದ್ದರು.












Click it and Unblock the Notifications