Mpox in India: ಭಾರತದಲ್ಲೂ ಮಂಕಿಪಾಕ್ಸ್ ಸೋಂಕು ಹರಡುತ್ತಾ? ಆರೋಗ್ಯ ಸಚಿವಾಲಯ ಹೇಳಿದ್ದೇನು?
ಎಂಪಾಕ್ಸ್ (Mpox) ಅಥವಾ ಮಂಕಿಪಾಕ್ಸ್ ಸೋಂಕು ಹರಡುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಅಂತರರಾಷ್ಟ್ರೀಯ ಕಾಳಜಿಯ (PHEIC) ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಣೆ ಮಾಡಿದೆ. ಆಫ್ರಿಕಾ ಖಂಡದಲ್ಲಿ ಸೋಂಕು ತೀವ್ರ ಪ್ರಮಾಣದಲ್ಲಿ ಹರಡುತ್ತಿದ್ದು ಆತಂಕ ಮೂಡಿಸಿದೆ. ಭಾರತದಲ್ಲಿ ಕೂಡ ಮಂಕಿಪಾಕ್ಸ್ ಸೋಂಕು ಹರಡುವ ಆತಂಕ ಇದೆಯಾ ಎನ್ನುವ ಪ್ರಶ್ನೆಗೆ ಆರೋಗ್ಯ ಸಚಿವಾಲಯ ಉತ್ತರ ನೀಡಿದೆ.
ಭಾರತದಲ್ಲಿ ಕೊನೆಯದಾಗಿ ಮಂಕಿಪಾಕ್ಸ್ ಪ್ರಕರಣ 2024ರ ಮಾರ್ಚ್‌ನಲ್ಲಿ ಕೇರಳದಲ್ಲಿ ವರದಿಯಾಗಿತ್ತು. ಅದಾದ ಬಳಿಕ ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿಲ್ಲ. ಭಾರತದಲ್ಲಿ ಎಂಪಾಕ್ಸ್ ಪ್ರಕರಣಗಳು ಉಲ್ಬಣವಾಗುವ ಅಪಾಯ ತುಂಬಾ ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

2022 ರಿಂದ, ಭಾರತದಲ್ಲಿ ಎಂಪಾಕ್ಸ್ ವೈರಸ್ ಸೋಂಕಿನ 30 ಪ್ರಯೋಗಾಲಯ-ದೃಢಪಡಿಸಿದ ಪ್ರಕರಣಗಳು ದಾಖಲಾಗಿದೆ. ಭಾರತದಲ್ಲಿ ಮಂಕಿಪಾಕ್ಸ್ ಅಪಾಯವು ತುಂಬಾ ಕಡಿಮೆಯಾಗಿದ್ದು ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಪಿಟಿಐ ವರದಿಯಲ್ಲಿ ಉಲ್ಲೇಖಿಸಿದೆ.
ಜಾಗತಿಕವಾಗಿ ಎಂಪಾಕ್ಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಸಚಿವಾಲಯವು ವಿಮಾನ ನಿಲ್ದಾಣಗಳು ಮತ್ತು ಬಂದರುಗಳಂತಹ ಪ್ರದೇಶಗಳಲ್ಲಿ ತಪಾಸಣೆ ನಡೆಸುವಂತೆ ಸಲಹೆ ನೀಡಬಹುದು. ಸೋಂಕಿನ ಬಗ್ಗೆ ಜಾಗರೂಕರಾಗಿರಲು ಮತ್ತು ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಪ್ರಕಾರ ಶಂಕಿತ ಪ್ರಕರಣಗಳನ್ನು ನಿರ್ವಹಿಸಲು ಸಿದ್ಧರಾಗಲು ಸೂಚನೆ ಕೊಡಬಹುದು.
ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರು ಸದ್ಯದ ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಮುನ್ನೆಚ್ಚರಿಕೆಗಳನ್ನು ನೀಡಲು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧಿಕಾರಿಗಳೊಂದಿಗೆ ಶನಿವಾರ ನಡೆಸುವ ಸಾಧ್ಯತೆ ಇದೆ.
ಸೋಂಕು ಹರಡುವುದು ಹೇಗೆ?
2022 ರಲ್ಲಿ ಭಾರತದಲ್ಲಿ ಎಂಪಾಕ್ಸ್ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿತ್ತು. ಸೋಂಕಿತರ ಜೊತೆ ದೀರ್ಘಾವದಿಯವರೆಗೆ ನಿಕಟ ಸಂಪರ್ಕ ಹೊಂದಿದ್ದರೆ ಸೋಂಕು ಹರಡುವ ಅಪಾಯ ಹೆಚ್ಚಾಗಿದೆ. ಉಸಿರಾಟದ ಸಂಪರ್ಕಕ್ಕೆ ಬಂದರೆ, ಸೋಂಕಿತರ ಬಟ್ಟೆ ಮೂಲಕ ಕೂಡ ಹರಡುವ ಸಾಧ್ಯತೆ ಇದೆ.
ಯೂರೋಪ್‌ನಲ್ಲಿ ಕೂಡ ಸೋಂಕು
ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ (ECDC) ಸ್ವೀಡನ್‌ನಲ್ಲಿ ಸೋಂಕು ಪತ್ತೆಯಾದ ಬಳಿಕ, ಆಫ್ರಿಕಾದ ಹೊರಗೆ ಅಪಾಯದ ಸೂಚನೆ ಕೊಟ್ಟಿದೆ. ಈ ಮೂಲಕ ಯೂರೋಪ್‌ನ ಹಲವು ದೇಶಗಳು ಈಗ ಎಚ್ಚೆತ್ತುಕೊಳ್ಳುವ ಸಾಧ್ಯತೆ ಇದೆ.
ಹೆಚ್ಚುತ್ತಿರುವ ಜಾಗತಿಕ ಕಳವಳಗಳ ಹೊರತಾಗಿಯೂ, ಪ್ರಯಾಣದ ನಿರ್ಬಂಧಗಳನ್ನು ವಿಧಿಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ ಮತ್ತು ಚೀನಾ ಮತ್ತು ಪಾಕಿಸ್ತಾನದಂತಹ ದೇಶಗಳು ಒಳಬರುವ ಪ್ರಯಾಣಿಕರಿಗೆ ಮೇಲ್ವಿಚಾರಣೆಗಳನ್ನು ಮಾಡುವುದನ್ನು ಆರಂಭಿಸಿವೆ.












Click it and Unblock the Notifications