ಸೆಪ್ಟೆಂಬರ್ 24: ಮಂಗಳಯಾನಕ್ಕೆ ಒಂದು ವರ್ಷದ ಸಂಭ್ರಮ
ಬೆಂಗಳೂರು, ಸೆಪ್ಟೆಂಬರ್. 23: ಭಾರತದ ಬಾಹ್ಯಾಕಾಶ ಸಾಧನೆಯನ್ನು ವಿಶ್ವಕ್ಕೆ ಪರಿಚಯ ಮಾಡಿಕೊಟ್ಟ ಮಂಗಳಯಾನಕ್ಕೆ ಸೆಪ್ಟೆಂಬರ್ 24 ಕ್ಕೆ ಒಂದು ವರ್ಷ. ಅತಿ ಕಡಿಮೆ ವೆಚ್ಚದ ಬಾಹ್ಯಾಕಾಶ ನೌಕೆ ಎಂಬ ಹಿರಿಮೆಯನ್ನು ಸಂಪಾದಿಸಿಕೊಂಡ ಮಾಮ್ ಒಂದು ವರ್ಷದ ಕಾಲದಲ್ಲಿ ಮಂಗಳನ ಸುತ್ತು ಹಾಕಿ ಸಂಶೋಧನೆಗೆ ನೆರವಾಗುವ ಅನೇಕ ಫೋಟೋಗಳನ್ನು ತೆಗೆದು ಕಳಿಸಿದೆ.
ಇಸ್ರೋದ ಹೆಮ್ಮೆಗೆ ಒಂದು ವರ್ಷವಾಗಿದ್ದು ಮಂಗಳಯಾನಕ್ಕೆ 450 ಕೋಟಿ ರೂ. ಅಥವಾ 67 ಮಿಲಿಯನ್ ಡಾಲರ್ ಡಾಲರ್ ವೆಚ್ಚವಾಗಿತ್ತು. ಭಾರತಕ್ಕಿಂತ ಮೊದಲು ಅಮೆರಿಕ, ರಷ್ಯಾ, ಯುರೋಪ್ ಖಂಡಗಳು ಮಂಗಳನ ಬಗ್ಗೆ ತಿಳಿಯಲು ಅನೇಕ ಉಪಗ್ರಹಗಳನ್ನು ಕಳಿಸಿದ್ದವು. 51 ಯೋಜನೆಗಳಲ್ಲಿ 26 ಯಶಸ್ವಿಯಾಗಿದ್ದವು. ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ 307 ದಿನಗಳಲ್ಲಿ ಮಂಗಳದ ಅಂಗಳದಲ್ಲಿ ತನ್ನ 'ಮಂಗಳಯಾನ' ನೌಕೆಯನ್ನು ಯಶಸ್ವಿಯಾಗಿ ತಲುಪಿಸಿ ಹೊಸ ಇತಿಹಾಸ ಸೃಷ್ಟಿಸಿತ್ತು.[ಮಂಗಳನಿಗೆ ಇಂದು 'ಮಾಮ್' ಸಿಕ್ಕಿದಳು : ಮೋದಿ]
2014ರ ಸೆಪ್ಟೆಂಬರ್ 24 ಬೆಳಗ್ಗೆ ನೌಕೆಯ ಇಂಜಿನ್ ವೇಗ ತಗ್ಗಿಸಿ ಮಂಗಳನ ಕಕ್ಷೆಯೊಳಗೆ ಪ್ರವೇಶಿಸಲು ಮಾಮ್ ನ್ನು ಸಜ್ಜುಗೊಳಿಸಲಾಯಿತು. ನಿಗದಿಯಂತೆ ಮಂಗಳಯಾನ ಮಂಗಳನ ಕಕ್ಷೆಗೆ ಸೇರಿಕೊಂಡು ಸಂಶೋಧನೆಗೆ ನೆರವಾಗಲು ಆರಂಭಿಸಿತು. ಮಂಗಳಯಾನ ಮಂಗಳನ ಅಂಗಳ ತಲುಪಿದ ಮೇಲೆ ಯಾವ ಯಾವ ಸಾಧನೆ ಮಾಡಿತು ಎಂಬ ಹಿನ್ನೋಟ ಇಲ್ಲಿದೆ.

ಮೊದಲ ಚಿತ್ರ ರವಾನೆ
2014 ರ ಸೆಪ್ಟೆಂಬರ್ 30 ರಂದು ಮಂಗಳಯಾನ ತನ್ನಮೊದಲ ಚಿತ್ರಗಳನ್ನು ರವಾನೆ ಮಾಡಿತ್ತು. ಮಂಗಳನ ಉತ್ತರ ಗೋಲಾರ್ಧದ ಚಿತ್ರ ಇದಾಗಿದ್ದು ಮಂಗಳನ ಮೇಲ್ಮೈನಿಂದ ಸುಮಾರು 74 ಸಾವಿರ ಕಿಲೊಮೀಟರ್ ಅಂತರದಿಂದ ತೆಗೆಯಲಾಗಿತ್ತು.

ಸಂಶೋಧನಾ ಪ್ರಶಸ್ತಿ
ಭಾರತೀಯ ಭಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋದ ಮಂಗಳ ನೌಕೆ 'ಮಾಮ್' ಗೆ ಅಮೆರಿಕದ ನ್ಯಾಶನಲ್ ಸ್ಪೇಸ್ ಸೊಸೈಟಿಯ(ಎನ್ ಎಸ್ಎಸ್) 2015ರ ಬಾಹ್ಯಾಕಾಶ ಸಂಶೋಧನಾ ಪ್ರಶಸ್ತಿ ದೊರೆತಿತ್ತು. ಇಂಜಿನಿಯರಿಂಗ್ ಮತ್ತು ವಿಜ್ಞಾನ ವಿಭಾಗದಲ್ಲಿ ಮಾಮ್ ಗೆ ಈ ಪ್ರಶಸ್ತಿ ನೀಡುತ್ತಿರುವುದಾಗಿ ಎನ್ ಎಸ್ಎಸ್ ತಿಳಿಸಿತ್ತು.

ರಾಧಾಕೃಷ್ಣನ್ ನಿವೃತ್ತಿ
ಮಂಗಳಯಾನದಂಥ ಯಶಸ್ಸನ್ನು ಭಾರತಕ್ಕೆ ತಂದುಕೊಟ್ಟ ಡಾ.ರಾಧಾಕೃಷ್ಣನ್ ಇಸ್ರೋ ಅಧ್ಯಕ್ಷ ಸ್ಥಾನದಿಂದ ನಿವೃತ್ತರಾಗಿದ್ದಾರೆ. ಮಂಗಳಯಾನ ಯಶಸ್ಸಿನಲ್ಲಿ ಇವರು ಅಪಾರ ಕೊಡುಗೆ ಸಲ್ಲಿಸಿದ್ದರು.

ಅತ್ಯುತ್ತಮ ಆವಿಷ್ಕಾರ ಪಟ್ಟ
ಟೈಮ್ ನಿಯತಕಾಲಿಕೆ 2014ನೇ ಸಾಲಿನ ಅತ್ಯುತ್ತಮ ಆವಿಷ್ಕಾರಗಳ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತದ ಮಂಗಳಯಾನ ಯೋಜನೆಯನ್ನು ಶ್ರೇಷ್ಠ ಸಾಧನೆ ಎಂದು ಬಣ್ಣಿಸಿತ್ತು.

ಮಂಗಳಯಾನ ಕಳುಹಿಸಿದ ವಿಡಿಯೋ
ಮಾರ್ಸ್ ಮಿಷನ್ ಮಂಗಳನ ಅಂಗಳದ ವಿಡಿಯೋವೊಂದನ್ನು ವಿಜ್ಞಾನಿಗಳಿಗೆ 2014ರ ಅಕ್ಟೋಬರ್ ತಿಂಗಳಿನಲ್ಲಿ ಕಳುಹಿಸಿಕೊಟಟ್ಟಿತ್ತು. ಇದರಲ್ಲಿ ಮಂಗಳನ ಮೇಲೈ ಮೇಲೆ ಆಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬಹುದಾಗಿತ್ತು.
|
ಮಾಮ್ ಕಳಿಸಿದ ವಿಡಿಯೋ ನೋಡಿ
ಮಂಗಳಯಾನ ಮಾಡುತ್ತಿರುವ ಮಾಮ್ ಕಳಿಸಿದ್ದ ವಿಡಿಯೋವನ್ನು ಇಲ್ಲಿ ಕಾಣಬಹುದು. ಆಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬಹುದು.












Click it and Unblock the Notifications