ಯುವಕನ ಮನಸು ಬದಲಿಸಿದ ಲಂಡನ್‌ನ ಸಣ್ಣ ಲೇಬಲ್‌, ಭಾರತಕ್ಕೆ ಬಂದು ಬರಡು ಜಮೀನಿನಲ್ಲಿ ಕೋಟಿ.. ಕೋಟಿ ಆದಾಯ

Inspiring Story: ಹೆಚ್ಚೆಚ್ಚು ಹಣ ಸಂಪಾದನೆ ಮಾಡಲು ವಿದೇಶಕ್ಕೆ ಹೋಗಿ, ಮತ್ತೆ ಭಾರತಕ್ಕೆ ಬಂದು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿರುವವರನ್ನು ನಾವು ನೋಡಿಯೇ ಇರುತ್ತೇವೆ. ಹಾಗೆಯೇ ಇದೀಗ ಇಲ್ಲೊಬ್ಬ ಯುವಕ ವಿದೇಶದಿಂದ ದೇಶಕ್ಕೆ ಮರಳಿ ಅತ್ಯುದ್ಭುತ ಆಲೋಚನೆಯಿಂದ ಬರಡು ಭೂಮಿ ಬಳಸಿಕೊಂಡು ದಾಖಲೆಯ ಆದಾಯ ಗಳಿಸಿ ಗಮನ ಸೆಳೆದಿದ್ದಾನೆ. ಈ ಕುರಿತ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.

ಲಂಡನ್‌ನ ಸೂಪರ್ ಮಾರ್ಕೆಟ್‌ನಲ್ಲಿ ಕಂಡ ಒಂದು ಸಣ್ಣ ಲೇಬಲ್ ಭಾರತದ ಒಣ ಮಣ್ಣಿನಲ್ಲಿ ಹಸಿರು ಕ್ರಾಂತಿ ಸೃಷ್ಟಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಭೋಪಾಲ್‌ನ 22 ವರ್ಷದ ಹರ್ಷಿತ್ ಗೋಧಾ ಎಂಬ ಯುವಕ ಕೇವಲ ಒಂದು ಆಲೋಚನೆಯಿಂದ ಬರಡು ಭೂಮಿಯನ್ನು ಸಮೃದ್ಧ ಆವಕಾಡೊ (ಬಟರ್ ಫ್ರೂಟ್) ತೋಟವನ್ನಾಗಿ ಪರಿವರ್ತಿಸಿ ಇಂದು ₹1 ಕೋಟಿಗೂ ಅಧಿಕ ಮೌಲ್ಯದ ಕೃಷಿ ಸಾಮ್ರಾಜ್ಯವನ್ನು ಕಟ್ಟಿದ್ದಾನೆ. ಇಸ್ರೇಲ್‌ನ ಆಧುನಿಕ ತಂತ್ರಜ್ಞಾನವನ್ನು ಭಾರತಕ್ಕೆ ತಂದು, 'ಇಂಡೋ ಇಸ್ರೇಲ್ ಆವಕಾಡೊ' ಮೂಲಕ ದೇಶದ ರೈತರಿಗೆ ಹೊಸ ಆಶಾದೀಪವಾಗಿ ಹೊರಹೊಮ್ಮಿರುವ ಈ ಯುವ ಉದ್ಯಮಿಯ ಸ್ಪೂರ್ತಿದಾಯಕ ಯಶೋಗಾಥೆ ಇಲ್ಲಿದೆ ನೋಡಿ.

Indian Young Farmer Turns Barren Land Into 1 Crore Avocado Business Using Israeli Farming Tech

ಇಂಡೋ ಇಸ್ರೇಲ್ ಆವಕಾಡೊ ಉದ್ಯಮ ಸೃಷ್ಟಿ

ಮಧ್ಯಪ್ರದೇಶದ ಭೋಪಾಲ್ ಮೂಲದ ಯುವಕ ಹರ್ಷಿತ್ ಗೋಧಾ ಅವರು, ಇಂದು ಭಾರತದ ಕೃಷಿ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಬರಡು ಭೂಮಿಯನ್ನು ಸುಂದರ ಆವಕಾಡೊ (ಬಟರ್ ಫ್ರೂಟ್) ತೋಟವನ್ನಾಗಿ ಪರಿವರ್ತಿಸಿದ್ದಾರೆ. ಸುಮಾರು 1 ಕೋಟಿ ರೂಪಾಯಿಗೂ ಅಧಿಕ ಆದಾಯ ತರುವ 'ಇಂಡೋ ಇಸ್ರೇಲ್ ಆವಕಾಡೊ' ಉದ್ಯಮವನ್ನು ಅವರು ಸೃಷ್ಟಿಸಿದ್ದಾರೆ.

ಈ ಆಲೋಚನೆ ಹುಟ್ಟಿದ್ದು ಹೇಗೆ?

2017ರಲ್ಲಿ ಲಂಡನ್‌ನ ವಿಶ್ವವಿದ್ಯಾಲಯವೊಂದರಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಹರ್ಷಿತ್, ಸೂಪರ್ ಮಾರ್ಕೆಟ್‌ನಲ್ಲಿ ಆವಕಾಡೊ ಪೊಟ್ಟಣದ ಮೇಲಿದ್ದ "Sourced from Israel" ಎಂಬ ಸಾಲನ್ನು ಗಮನಿಸಿದರು. ಇಸ್ರೇಲ್‌ನಂತಹ ಒಣ ಮತ್ತು ಉಷ್ಣ ವಾತಾವರಣವಿರುವ ದೇಶದಲ್ಲಿ ಆವಕಾಡೊ ಬೆಳೆಯಲು ಸಾಧ್ಯವಾದರೆ, ಭಾರತದಲ್ಲೇಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ಅವರಲ್ಲಿ ಮೂಡಿತು.

ಅಲ್ಲಿಂದಲೇ ಅವರ ಅತ್ಯದ್ಭುತ ಪ್ರಯಾಣ ಆರಂಭವಾಯಿತು. ಪ್ರವಾಸಿ ವೀಸಾದಲ್ಲಿ ಇಸ್ರೇಲ್‌ಗೆ ತೆರಳಿದ ಹರ್ಷಿತ್, ಅಲ್ಲಿನ ರೈತರೊಂದಿಗೆ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಾ ಆವಕಾಡೊ ಬೆಳೆಯುವ ತಾಂತ್ರಿಕತೆ, ನೀರಾವರಿ ಪದ್ಧತಿ, ಕಸಿ ಹಾಗೂ ಮಣ್ಣಿನ ನಿರ್ವಹಣೆಯ ಬಗ್ಗೆ ತಿಳಿದುಕೊಂಡರು.

ಬರಡು ನೆಲದಲ್ಲಿ ಹೊಸ ಪ್ರಯೋಗ, ಕೋಟಿ.. ಕೋಟಿ ಆದಾಯ

2019ರಲ್ಲಿ ಭಾರತಕ್ಕೆ ಮರಳಿದ ಅವರು, ಭೋಪಾಲ್ ಹೊರವಲಯದಲ್ಲಿದ್ದ 5 ಎಕರೆ ಬರಡು ಭೂಮಿಯನ್ನು ಆಯ್ಕೆ ಮಾಡಿಕೊಂಡರು. ಬಳಿಕ ಸುಮಾರು ₹50 ಲಕ್ಷ ಹೂಡಿಕೆ ಮಾಡಿ, ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಹನಿ ನೀರಾವರಿ ಪದ್ಧತಿ ಅಳವಡಿಸುವುದು ಹಾಗೂ ಗ್ರೀನ್‌ಹೌಸ್ ನಿರ್ಮಿಸುವ ಕೆಲಸ ಮಾಡಿದರು.

2021ರಲ್ಲಿ ಇಸ್ರೇಲ್‌ನಿಂದ ಆಮದು ಮಾಡಿಕೊಂಡ ಸುಮಾರು 1,800 ಆವಕಾಡೊ ಸಸಿಗಳನ್ನು (ಹಾಸ್, ಪಿಂಕರ್ಟನ್, ಎಟಿಂಗರ್ ಮುಂತಾದ ತಳಿಗಳು) ನೆಟ್ಟು ಬೆಳೆಸಲು ಪ್ರಾರಂಭಿಸಿದರು. ಕಡಿಮೆ ಪ್ರಮಾಣದಲ್ಲಿ ನೀರು ಬಳಸಿ, ರಾಸಾಯನಿಕ ಗೊಬ್ಬರಗಳ ಬದಲಿಗೆ ಸಾವಯವ ತಂತ್ರಜ್ಞಾನವನ್ನು ಬಳಸಿ ಗಿಡಗಳನ್ನು ಪೋಷಿಸಿದರು.

ಯುವಕ ಹರ್ಷಿತ್ ಉದ್ದೇಶ ಏನು?

ಹರ್ಷಿತ್ ಅವರ ಉದ್ದೇಶ ಕೇವಲ ತಮ್ಮ ತೋಟಕ್ಕೆ ಸೀಮಿತವಾಗಿರಲಿಲ್ಲ. 'ಇಂಡೋ ಇಸ್ರೇಲ್ ಆವಕಾಡೊ' ಸಂಸ್ಥೆಯ ಮೂಲಕ ಅವರು ಭಾರತದ ಇತರ ರಾಜ್ಯಗಳ ರೈತರಿಗೂ ಇಸ್ರೇಲಿ ತಳಿಯ ಉತ್ತಮ ಆವಕಾಡೊ ಸಸಿಗಳನ್ನು ಪೂರೈಸಲು ಆರಂಭಿಸಿದರು. ಗುಜರಾತ್, ಅಸ್ಸಾಂ, ಸಿಕ್ಕಿಂ ಸೇರಿದಂತೆ ವಿವಿಧ ರಾಜ್ಯಗಳ ರೈತರಿಗೆ ತರಬೇತಿ ಹಾಗೂ ತಾಂತ್ರಿಕ ಸಲಹೆಗಳನ್ನು ನೀಡಲು ಆರಂಭಿಸಿದರು.

ರೈತರ ಮೇಲಿನ ಹೊರೆಯನ್ನು ಕಡಿಮೆ ಮಾಡಲು 'ಬೈಬ್ಯಾಕ್ ಮಾಡೆಲ್' ಪರಿಚಯಿಸಿದರು. ರೈತರು ಬೆಳೆದ ಹಣ್ಣುಗಳನ್ನು ತಾವೇ ಮರಳಿ ಖರೀದಿಸುವ ಭರವಸೆ ನೀಡಿದರು. 2023ರ ವೇಳೆಗೆ ಅವರ ಸಂಸ್ಥೆಯು ₹1 ಕೋಟಿಗೂ ಅಧಿಕ ವಹಿವಾಟು ನಡೆಸುವ ಮೂಲಕ ಯಶಸ್ವಿ ಕೃಷಿ ಉದ್ಯಮವಾಗಿ ಹೊರಹೊಮ್ಮಿತು.

ಭಾರತದಲ್ಲಿ ಹೆಚ್ಚಾಗಿ ಆಮದಾಗುವ ಆವಕಾಡೊ ಹಣ್ಣನ್ನು 'Sourced in India'ಎಂಬ ಹೆಮ್ಮೆಯ ಲೇಬಲ್‌ನೊಂದಿಗೆ ಪ್ರತಿಯೊಬ್ಬರಿಗೂ ತಲುಪಿಸುವುದು ಹರ್ಷಿತ್ ಅವರ ಮುಖ್ಯ ಗುರಿಯಾಗಿದೆ. ಮುಂಬರುವ ದಿನಗಳಲ್ಲಿ 100 ಎಕರೆ ವಿಸ್ತೀರ್ಣದಲ್ಲಿ ಆವಕಾಡೊ ತೋಟ ನಿರ್ಮಿಸುವ ಹಾಗೂ ಭಾರತವನ್ನು ಆವಕಾಡೊ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿಸುವ ಕನಸನ್ನು ಅವರು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಇವರ ಈ ಛಲ ಈಗಿನ ಯುವ ಪೀಳಿಗೆಯ ರೈತಾಪಾಯಿ ವರ್ಗಕ್ಕೆ ಮಾದರಿಯಾಗಿದ ಎಂದು ಹೇಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+