ಶುಕ್ರವಾರದಿಂದ ಓಡಲಿದೆ ದೇಶದ ಮೊದಲ 'ಕಿಸಾನ್ ರೈಲು'
ನವದೆಹಲಿ, ಆಗಸ್ಟ್ 06: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ 'ಕಿಸಾನ್ ರೈಲು' ಯೋಜನೆಗೆ ಶುಕ್ರವಾರ ಚಾಲನೆ ಸಿಗಲಿದೆ. ದೇಶದ ಮೊದಲ ಕಿಸಾನ್ ರೈಲು ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳ ನಡುವೆ ಸಂಚಾರ ನಡೆಸಲಿವೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ 'ಕಿಸಾನ್ ರೈಲು' ಆರಂಭಿಸುವುದಾಗಿ ಘೋಷಣೆ ಮಾಡಿದ್ದರು. ಮಹಾರಾಷ್ಟ್ರದಿಂದ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮೊದಲ ರೈಲು ಸಂಚಾರ ನಡೆಸಲಿದೆ.
ಪಿಪಿಪಿ ಮಾದರಿಯಲ್ಲಿ ಈ ರೈಲನ್ನು ಓಡಿಸಲಾಗುತ್ತಿದೆ. ರೈತರು ಬೆಳೆದ ತರಕಾರಿ, ಹಣ್ಣು, ಹೂವುಗಳನ್ನು ಈ ರೈಲಿನ ಮೂಲಕ ಸಾಗಣೆ ಮಾಡಲಾಗುತ್ತದೆ. ಮಹಾರಾಷ್ಟ್ರದ ದೇವ್ಲಾಲಿ ಮತ್ತು ಬಿಹಾರದ ದಾನ್‌ಪುರ್ ನಡುವೆ ರೈಲು ಓಡಲಿದೆ.

ಶುಕ್ರವಾರ ಬೆಳಗ್ಗೆ 11 ಗಂಟೆಗೆ ದೇವ್ಲಾಲಿ ಇಂದ ಹೊರಡುವ ರೈಲು ಮರುದಿನ ಸಂಜೆ 6.45ಕ್ಕೆ ದಾನ್‌ಪುರ್ ತಲುಪಲಿದೆ. 1,519 ಕಿ. ಮೀ. ದೂರವನ್ನು ರೈಲು 31.45 ಗಂಟೆಯಲ್ಲಿ ಕ್ರಮಿಸಲಿದೆ ಎಂದು ಭಾರತೀಯ ರೈಲ್ವೆ ಪ್ರಕಟಣೆ ಹೇಳಿದೆ.
ಮಹಾರಾಷ್ಟ್ರದ ನಾಸಿಕ್ ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ, ಹಣ್ಣು, ಹೂವು, ಕಾಳು, ಈರುಳ್ಳಿ ಮುಂತಾದವುಗಳನ್ನು ಬೆಳೆಯುತ್ತಾರೆ. ಇವುಗಳನ್ನು ದೇಶದ ಬೇರೆ-ಬೇರೆ ಪ್ರದೇಶಗಳಿಗೆ 'ಕಿಸಾನ್ ರೈಲು' ಮೂಲಕ ತಲುಪಿಸಲಾಗುತ್ತದೆ.
ಪ್ರಸ್ತುತ ವಾರಕ್ಕೊಮ್ಮೆ ಪ್ರಾಯೋಗಿಕವಾಗಿ 'ಕಿಸಾನ್ ರೈಲು' ಸಂಚಾರ ನಡೆಸಲಿದೆ. ಬಳಿಕ ಇದನ್ನು ಬೇರೆ ರಾಜ್ಯಗಳಿಗೂ ವಿಸ್ತರಣೆ ಮಾಡುವ ಆಲೋಚನೆಯಲ್ಲಿ ರೈಲ್ವೆ ಇಲಾಖೆ ಇದೆ.












Click it and Unblock the Notifications