ರೈಲ್ವೆ ಪ್ರಯಾಣಿಕರಿಸಿ ಸಿಹಿ ಸುದ್ದಿ: ಎರಡು ವರ್ಷದಲ್ಲಿ 10,000 ನಾನ್ ಎಸಿ ಕೋಚ್‌ಗಳ ತಯಾರಿಕೆ
ನವದೆಹಲಿ, ಜುಲೈ. 05: ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಮತ್ತು ಸೌಕರ್ಯವನ್ನು ನೀಡುವ ಪ್ರಯತ್ನದಲ್ಲಿ ಭಾರತೀಯ ರೈಲ್ವೇಯು ಮುಂದಿನ ಎರಡು ವರ್ಷಗಳಲ್ಲಿ ಸುಮಾರು 10,000 ಹವಾನಿಯಂತ್ರಿತವಲ್ಲದ (ನಾನ್-ಎಸಿ ಕೋಚ್) ಕೋಚ್‌ಗಳನ್ನು ತಯಾರಿಸುವ ಬೃಹತ್ ಯೋಜನೆಯನ್ನು ಅನಾವರಣಗೊಳಿಸಿದೆ.
ರೈಲು ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮತ್ತು ಪ್ರಯಾಣಿಕರಿಗೆ ಒಟ್ಟಾರೆ ಪ್ರಯಾಣದ ಅನುಭವವನ್ನು ನೀಡಲು ಭಾರತೀಯ ರೈಲ್ವೇ ಸಜ್ಜಾಗಿದೆ. ಹೀಗಾಗಿ, 2024-25 ಮತ್ತು 2025-26ರ ಆರ್ಥಿಕ ವರ್ಷದೊಳಗೆ 10,000 ಹವಾನಿಯಂತ್ರಿತವಲ್ಲದ ಕೋಚ್‌ಗಳನ್ನು ತಯಾರಿಸಲು ಭಾರತೀಯ ರೈಲ್ವೆ ಯೋಜಿಸಿದೆ ಎಂದು ರೈಲ್ವೆ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಈ ಕೋಚ್‌ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಾಮಾನ್ಯ ಆಸನಗಳಾಗಿರುತ್ತದೆ. ಈ ಕ್ರಮವು ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸುವ ಉದ್ದೇಶವನ್ನು ಹೊಂದಿದೆ. ರಿಸರ್ವೇಶನ್ ಇಲ್ಲದವರು ಪೀಕ್ ಅವರ್‌ಗಳಲ್ಲಿ ಕಾಯ್ದಿರಿಸಿದ ಎಸಿ ಕೋಚ್‌ಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಅದನ್ನು ತಪ್ಪಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಆರ್ಥಿಕ ವರ್ಷ 2024-25 ರಲ್ಲಿ ರೈಲ್ವೆಯು ಅಮೃತ್ ಭಾರತ್ ಜನರಲ್ ಕೋಚ್‌ಗಳು ಸೇರಿದಂತೆ 2,605 ಸಾಮಾನ್ಯ ಕೋಚ್‌ಗಳು, ಅಮೃತ್ ಭಾರತ್ ಸ್ಲೀಪರ್ ಕೋಚ್‌ಗಳು ಸೇರಿದಂತೆ 1,470 ನಾನ್-ಎಸಿ ಸ್ಲೀಪರ್ ಕೋಚ್‌ಗಳು, ಅಮೃತ್ ಭಾರತ್ ಎಸ್‌ಎಲ್‌ಆರ್ ಕೋಚ್‌ಗಳು ಸೇರಿದಂತೆ 323 ಎಸ್‌ಎಲ್‌ಆರ್ ಕೋಚ್‌ಗಳು,32 ಹೆಚ್ಚಿನ ಸಾಮರ್ಥ್ಯದ ಪಾರ್ಸೆಲ್ ವ್ಯಾನ್‌ಗಳು, 55 ಪ್ಯಾಂಟ್ರಿ ಕಾರುಗಳನ್ನು ತಯಾರಿಸಲು ಯೋಜಿಸಿದೆ.

ಈ 10,000 ಬೋಗಿಗಳಲ್ಲಿ ಸುಮಾರು 53 ಪ್ರತಿಶತ ಸಾಮಾನ್ಯ ಪ್ರಯಾಣಿಕರ ಪ್ರಯಾಣದ ಅವಶ್ಯಕತೆಗಳನ್ನು ಪೂರೈಸಲು ಸಾಮಾನ್ಯ ಕೋಚ್‌ಗಳಾಗಿರಲಿದೆ. ರೈಲ್ವೇಯು ಪ್ರಸ್ತುತ ಸುಮಾರು 55,000 ನಾನ್-ಎಸಿ ಕೋಚ್‌ಗಳನ್ನು ನಿರ್ವಹಿಸುತ್ತಿದೆ. ಈ ಯೋಜನೆಯು ಮುಂದಿನ ಎರಡು ಆರ್ಥಿಕ ವರ್ಷಗಳಲ್ಲಿ 3,500 ಸಾಮಾನ್ಯ ಆಸನ ಕೋಚ್‌ಗಳು, 2,060 ಮೂರು ಹಂತದ ಸ್ಲೀಪರ್ ಕೋಚ್‌ಗಳು ಮತ್ತು ಅಮೃತ್ ಭಾರತ್ ರೈಲುಗಳಿಗಾಗಿ 18 ಕೋಚ್‌ಗಳನ್ನು ತಯಾರಿಸುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ರೈಲ್ವೇ ಮಾಹಿತಿಯ ಪ್ರಕಾರ, ಏಪ್ರಿಲ್ 2024 ರಲ್ಲಿ ಪ್ರಯಾಣಿಕರ ಸಂಖ್ಯೆಯು ದಾಖಲೆಯ ಮಟ್ಟವನ್ನು ತಲುಪಿದೆ. ಮೊದಲ ಮೂರು ವಾರಗಳಲ್ಲಿ 411 ಮಿಲಿಯನ್ ಪ್ರಯಾಣಿಕರು ರೈಲ್ವೆ ಬಳಸಿದ್ದಾರೆ. ಬೇಸಿಗೆ ರಜೆಗಳು, ಮದುವೆಯ ಸೀಸನ್ ಮತ್ತು ಸಾರ್ವತ್ರಿಕ ಚುನಾವಣೆ ಕಾರಣಗಳಿಂದ ಈ ದಾಖಲೆಯಾಗಿದೆ.












Click it and Unblock the Notifications