Indian Railways: ಬೆಂಗಳೂರು ಸೇರಿ 8 ನಗರಗಳಲ್ಲಿ ಮನೆ ಬಾಗಿಲಿಗೆ ಪಾರ್ಸೆಲ್ ಸೇವೆ; ಬುಕ್ಕಿಂಗ್ ಹೇಗೆ?
ಭಾರತೀಯ ರೈಲ್ವೆಯು ಬೆಂಗಳೂರು ಸೇರಿದಂತೆ 8 ಪ್ರಮುಖ ನಗರಗಳಿಗೆ ಗುಡ್‌ನ್ಯೂಸ್ ಕೊಡಲಾಗಿದೆ. ಭಾರತೀಯ ರೈಲ್ವೆ ದೇಶದ 8 ನಗರಗಳಲ್ಲಿ ಮನೆ ಬಾಗಿಲಿಗೆ ಪಾರ್ಸೆಲ್ ಪಿಕಪ್ ಮತ್ತು ವಿತರಣಾ ಸೇವೆ ಆರಂಭಿಸಲಿದೆ. ಪ್ರಾಯೋಗಿಕವಾಗಿ ಸೇವೆ ಆರಂಭಿಸಿದ ಬಳಿಕ, ಗ್ರಾಹಕರು ಘರ್ ಸೆ ಘರ್ ತಕ್ / ಮನೆಯಿಂದ ಮನೆಗೆ ಹೆಸರಿನ ರೈಲು ಪಾರ್ಸೆಲ್ ಆ್ಯಪ್ ಮೂಲಕ ತಮ್ಮ ಮನೆಯಿಂದಲೇ ಸರಕು ಕಳುಹಿಸಲು ಮತ್ತು ಮನೆ ಬಾಗಿಲಿಗೆ ಸರಕು ತಲುಪಿಸಿಕೊಳ್ಳಲು ಬುಕ್ಕಿಂಗ್ ಮಾಡಬಹುದು. ಈ ಸೇವೆಯು ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಅಹಮದಾಬಾದ್, ಹೈದರಾಬಾದ್ ಮತ್ತು ಪುಣೆ ನಗರಗಳಲ್ಲಿ ಲಭ್ಯವಾಗಲಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಭಾರತೀಯ ರೈಲ್ವೆ ಪರಿಚಯಿಸುತ್ತಿರುವ ಮನೆ ಬಾಗಿಲಿಗೆ ಪಾರ್ಸೆಲ್ ಸೇವೆಯು ಅದರ ವ್ಯಾಪಾರ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತರಲಿದೆ. ಈವರೆಗೆ ಗ್ರಾಹಕರು ತಮ್ಮ ಸರಕುಗಳನ್ನು ರೈಲ್ವೆ ಪಾರ್ಸೆಲ್ ಕಚೇರಿಗೆ ತಂದು ಕೊಡಬೇಕಾಗಿತ್ತು. ಆದರೆ ಹೊಸ ಸೇವೆಯಲ್ಲಿ ಗ್ರಾಹಕರ ಮನೆ ಬಾಗಿಲಿನಿಂದಲೇ ಸರಕುಗಳನ್ನು ಪಡೆದು, ತಲುಪಿಸಬೇಕಾದ ಸ್ಥಳದ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ರೈಲ್ವೆಯು ನಿಲ್ದಾಣಗಳ ನಡುವಿನ ಸರಕು ಸಾಗಣೆಯನ್ನು ನಿರ್ವಹಿಸಲಿದ್ದು, ಮನೆಯಿಂದ ರೈಲು ನಿಲ್ದಾಣಕ್ಕೆ ಮತ್ತು ಅಲ್ಲಿಂದ ಗ್ರಾಹಕರ ಮನೆಗೆ ಸರಕು ತಲುಪಿಸುವ ಜವಾಬ್ದಾರಿಯನ್ನು ಖಾಸಗಿ ಸರಕು ಸಾಗಣಿಕೆ ಸಂಸ್ಥೆಗಳು ವಹಿಸಿಕೊಳ್ಳಲಿವೆ.

ಸರಕು ಸಾಗಾಣಿಕೆ ಮಾಡುವ ಸಂಸ್ಥೆಗಳಿಗೆ ಇದು ಹೊಸ ವಿತರಣಾ ಅವಕಾಶವಾಗಲಿದೆ. ಗ್ರಾಹಕರಿಗೆ ಕಡಿಮೆ ಪ್ರಮಾಣದ ಹಾಗೂ ತುರ್ತಾಗಿ ತಲುಪಿಸಬೇಕಾದ ಸರಕುಗಳನ್ನು ರಸ್ತೆ ಅಥವಾ ವಿಮಾನ ಮಾರ್ಗದ ಬದಲಿಗೆ ರೈಲಿನ ಮೂಲಕ ಕಳುಹಿಸಲು ಮತ್ತೊಂದು ಆಯ್ಕೆ ಸಿಗಲಿದೆ.
ರೈಲ್ವೆ ಪಾರ್ಸಲ್ ವ್ಯವಸ್ಥೆ ಹೇಗೆ ಸಹಕಾರಿ ಆಗಲಿದೆ ?
ಭಾರತೀಯ ರೈಲ್ವೆಯ ಈ ಆ್ಯಪ್ ಡಿಜಿಟಲ್ ಮಾರುಕಟ್ಟೆಯಾಗಿ ಕಾರ್ಯನಿರ್ವಹಿಸಲಿದೆ. ಗ್ರಾಹಕರು ಸರಕುಗಳನ್ನು ಬುಕ್ ಮಾಡುತ್ತಾರೆ, ಸರಕು ಮತ್ತು ಸಾಗಾಣಿಕೆದಾರರು ಪೂರೈಕೆದಾರರನ್ನು ಆಯ್ಕೆ ಮಾಡುತ್ತಾರೆ ಮತ್ತು ಆನ್‌ಲೈನ್ ಮೂಲಕ ಹಣ ಪಾವತಿಸುತ್ತಾರೆ. ರೈಲ್ವೆ ನಿಲ್ದಾಣಕ್ಕೆ ಹೋಗುವುದು ಮತ್ತು ಪಾರ್ಸೆಲ್ ಕಚೇರಿಗಳಿಗೆ ಹೋಗಿ ಪಾರ್ಸೆಲ್ ಮಾಡುವುದು ಇನ್ಮುಂದೆ ತಪ್ಪಲಿದೆ.
ಯಾವ ನಗರಗಳು ಭಾರತೀಯ ರೈಲ್ವೆಯ ಮನೆ-ಮನೆಗೆ ಪಾರ್ಸೆಲ್ ಸೇವೆ ಸಿಗಲಿದೆ ?
ಇನ್ನು ಭಾರತೀಯ ರೈಲ್ವೆಯ ಈ ಹೊಸ ಮನೆ - ಮನೆಗೆ ಪಾರ್ಸೆಲ್ ಸೇವೆಯು ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಅಹಮದಾಬಾದ್, ಹೈದರಾಬಾದ್, ಬೆಂಗಳೂರು ಮತ್ತು ಪುಣೆ ನಗರದಲ್ಲಿ ಸಿಗಲಿವೆ.
ಪಾರ್ಸೆಲ್ ಪಿಕಪ್ ಮತ್ತು ವಿತರಣೆಯ ಜವಾಬ್ದಾರಿ ಯಾರದ್ದು?
ಆ್ಯಪ್ ಮೂಲಕ ಆಯ್ಕೆಯಾದ ಖಾಸಗಿ ಸರಕು ಮತ್ತು ಸಾಗಾಣಿ ಸಂಸ್ಥೆಗಳು ಈ ಜವಾಬ್ದಾರಿ ನಿರ್ವಹಿಸುತ್ತವೆ. ಅವು ಗ್ರಾಹಕರ ಮನೆಯಿಂದ ಸರಕುಗಳನ್ನು ಪಡೆದು, ತಲುಪಬೇಕಾದ ಸ್ಥಳದ ಮನೆ ಬಾಗಿಲಿಗೆ ತಲುಪಿಸುತ್ತವೆ. ಪ್ಯಾಕಿಂಗ್ ಸೇರಿದಂತೆ ಇತರ ಹೆಚ್ಚುವರಿ ಸೇವೆಗಳು ಸಹ ಸಿಗಲಿವೆ. ರೈಲ್ವೆಯು ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಸರಕು ಸಾಗಣೆ ಮಾಡಲಾಗುತ್ತದೆ.
ಪಾರ್ಸೆಲ್ ಅನ್ನು ಎಷ್ಟು ದಿನ ಮುಂಚಿತವಾಗಿ ಬುಕ್ ಮಾಡಬೇಕು
ರೈಲು ಹೊರಡುವ 15 ದಿನಗಳ ಮೊದಲು ಬುಕ್ಕಿಂಗ್ ಆರಂಭವಾಗಲಿದೆ. ಅಲ್ಲದೆ ರೈಲು ಹೊರಡುವ ಒಂದು ದಿನ ಮೊದಲು ಬುಕ್ಕಿಂಗ್ ಕೊನೆಗೊಳ್ಳುತ್ತದೆ. ಸರಕು ಮತ್ತು ಸಾಗಾಣಿಕೆ ಸಂಸ್ಥೆಗಳು ರೈಲು ಹೊರಡುವ ಕನಿಷ್ಠ ಒಂದು ಗಂಟೆ ಮೊದಲು ಸರಕುಗಳನ್ನು ರೈಲ್ವೆ ಸಿಬ್ಬಂದಿಗೆ ಹಸ್ತಾಂತರಿಸಬೇಕು.
ಬುಕ್ಕಿಂಗ್ ರದ್ದು ಮಾಡಿದರೆ ಹಣ ಮರು ಪಾವತಿ ಆಗಲಿದೆಯೇ ?
ಸರಕುಗಳನ್ನು ರೈಲ್ವೆಗೆ ಹಸ್ತಾಂತರಿಸುವ ಮೊದಲು ಒಂದೊಮ್ಮೆ ಗ್ರಾಹಕರು ಬುಕ್ಕಿಂಗ್ ರದ್ದು ಮಾಡಿದರೆ, ರೈಲು ಸಾಗಣೆ ಶುಲ್ಕವನ್ನು ₹10 ಕ್ಲರ್ಕೇಜ್ ಶುಲ್ಕ ಕಡಿತಗೊಳಿಸಿ ಮರುಪಾವತಿ ಮಾಡಲಾಗುತ್ತದೆ. ಆದರೆ, ಸರಕು ಸ್ವೀಕರಿಸುವುದು ಮತ್ತು ಮನೆ ಬಾಗಿಲಿಗೆ ವಿತರಣೆ ಶುಲ್ಕದ ಮರುಪಾವತಿಯು ಆಯಾ ಸರಕು ಮತ್ತು ಸಂಸ್ಥೆಗಳ ನಿಯಮಗಳನ್ನು ಅವಲಂಬಿಸಿರಲಿದೆ. ಭಾರತೀಯ ರೈಲ್ವೆಯು ಈ ಪಾರ್ಸಲ್ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿದೆ. ಇದು ಯಶಸ್ವಿಯಾದ ಮೇಲೆ ಜಾರಿಗೆ ಬರಲಿದೆ.
ಪಾರ್ಸಲ್ ಯೋಜನೆ ಬುಕ್ ಮಾಡಿಕೊಳ್ಳುವುದು ಹೇಗೆ ?
1. Rail Parcel App ಅಥವಾ ರೈಲ್ವೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
2. ಕಳುಹಿಸುವ ಸ್ಥಳ ಮತ್ತು ಸರಕು ತಲುಪಬೇಕಾದ ವಿಳಾಸವನ್ನು ನಮೂದಿಸಿ.
3. ಸರಕುಗಳ ವಿವರ, ತೂಕ ಮತ್ತು ಪ್ಯಾಕೇಜ್ ಮಾಹಿತಿಯನ್ನು ದಾಖಲಿಸಿ.
4. ಲಭ್ಯವಿರುವ ಸರಕು ಮತ್ತು ಸಾಗಾಣಿಕೆ ಪಾಲುದಾರರನ್ನು ಆಯ್ಕೆ ಮಾಡಿ.
5. ಪಿಕಪ್ ಮತ್ತು ವಿತರಣಾ ಶುಲ್ಕದ ವಿವರ ಪರಿಶೀಲಿಸಿ ಆನ್‌ಲೈನ್‌ನಲ್ಲಿ ಹಣ ಪಾವತಿಸಿ.
6. ಬುಕ್ಕಿಂಗ್ ದೃಢಪಟ್ಟ ಬಳಿಕ ಸರಕುಗಳ ಪಿಕಪ್‌ಗೆ ಪಾಲುದಾರರು ಮನೆಗೆ ಬರಲಿದ್ದಾರೆ. ರೈಲಿನಲ್ಲಿ ಸಾಗಿಸಿದ ನಂತರ ತಲುಪಿಸಬೇಕಾದ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ.
| ವಿವರ | ಅವಧಿ / ನಿಯಮ |
|---|---|
| ಬುಕ್ಕಿಂಗ್ ಆರಂಭ | ರೈಲು ಹೊರಡುವ 15 ದಿನಗಳ ಮೊದಲು |
| ಬುಕ್ಕಿಂಗ್ ಕೊನೆಯ ದಿನ | ರೈಲು ಹೊರಡುವ 1 ದಿನ ಮೊದಲು |
| ಸರಕು ಹಸ್ತಾಂತರ | ರೈಲು ಹೊರಡುವ 1 ಗಂಟೆ ಮೊದಲು |
| ರೈಲು ಸಾಗಣೆ ಶುಲ್ಕ | ಸರಕು ಸ್ವೀಕರಿಸುವ ಮೊದಲು ರದ್ದುಗೊಳಿಸಿದರೆ ₹10 ಕಡಿತದೊಂದಿಗೆ ಉಳಿದ ಮೊತ್ತ ಮರುಪಾವತಿ |
| ಇತರೆ ಸಾಗಣೆ ಶುಲ್ಕ | ಲಾಜಿಸ್ಟಿಕ್ಸ್ ಸಂಸ್ಥೆಯ ನಿಯಮದಂತೆ ಮರುಪಾವತಿ |


Click it and Unblock the Notifications
