ಮೊದಲ ಹಂತ ಮತ್ತು ಎನ್‌ಟಿಪಿಸಿ ಪರೀಕ್ಷೆ ರದ್ದುಗೊಳಿಸಿದ ರೈಲ್ವೆ ಇಲಾಖೆ
ನವದೆಹಲಿ, ಜನವರಿ 26: ದೆಹಲಿ-ಕೋಲ್ಕತ್ತಾ ಮಾರ್ಗದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸಿದ ರೈಲ್ವೆ ತಡೆಯಿಂದ ಹಲವು ರೈಲುಗಳ ಸಂಚಾರದಲ್ಲಿ ವಿಳಂಬವಾದ ಘಟನೆ ನಡೆದ ಕೆಲವೇ ದಿನಗಳಲ್ಲಿ ಭಾರತೀಯ ರೈಲ್ವೆ ಇಲಾಖೆ ಮಹತ್ವದ ಕ್ರಮ ತೆಗೆದುಕೊಂಡಿದೆ.
ಭಾರತೀಯ ರೈಲ್ವೇಯು NTPC ಮತ್ತು ಹಂತ 1 ಪರೀಕ್ಷೆಗಳನ್ನು ಸ್ಥಗಿತಗೊಳಿಸಿದೆ ಎಂದು ರೈಲ್ವೆ ವಕ್ತಾರರನ್ನು ಉಲ್ಲೇಖಿಸಿ ಪಿಟಿಐ ವರದಿಯಲ್ಲಿ ಹೇಳಲಾಗಿದೆ. ಪ್ರತಿಭಟನಾನಿರತ ಆಕಾಂಕ್ಷಿಗಳ ಕುಂದುಕೊರತೆಗಳನ್ನು ಪರಿಶೀಲಿಸಲು ಭಾರತೀಯ ರೈಲ್ವೇ ಸಮಿತಿಯನ್ನು ರಚಿಸಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಪ್ರತಿಭಟನೆ ಮೂಲಕ ತಪ್ಪು ಸಂದೇಶವನ್ನು ರವಾನಿಸುತ್ತಿರುವ ಜನರಿಗೆ ಜೀವಮಾನದವರೆಗೂ ಕೇಂದ್ರದ ಉದ್ಯೋಗದಿಂದ ನಿರ್ಬಂಧ ವಿಧಿಸಲಾಗುವುದು ಎಂಬ ಬೆದರಿಕೆ ಹಾಕಲಾಗಿತ್ತು.
ಮಂಗಳವಾರವಷ್ಟೇ ಪ್ರತಿಭಟನಾಕಾರರಿಗೆ ರೈಲ್ವೆ ಇಲಾಖೆಯು ಎಚ್ಚರಿಕೆ ನೀಡಿತ್ತು. ರೈಲ್ವೆ ತಡೆ ಸೇರಿದಂತೆ ಯಾವುದೇ ರೀತಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರು ಶಾಶ್ವತವಾಗಿ ರೈಲ್ವೆ ಇಲಾಖೆ ಸೇರಿದಂತೆ ಯಾವುದೇ ಕೇಂದ್ರ ಸರ್ಕಾರದ ಉದ್ಯೋಗವನ್ನು ಪಡೆಯುವುದರಿಂದ ವಂಚಿತರಾಗಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಕಾನೂನುಬಾಹಿರ ಚಟುವಟಿಕೆಗಳಿಗೆ ತಕ್ಕಶಾಸ್ತಿ ಎಚ್ಚರಿಕೆ:
ಇಂತಹ ತಪ್ಪು ದಾರಿಯ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳುವ ಜನರು ತಮ್ಮ ಅಶಿಸ್ತನ್ನು ಪ್ರದರ್ಶಿಸುತ್ತಿದ್ದಾರೆ. ಇಂಥ ಆಕಾಂಕ್ಷಿಗಳನ್ನು ರೈಲ್ವೇ ಅಥವಾ ಯಾವುದೇ ಸರ್ಕಾರಿ ಉದ್ಯೋಗಗಳಿಗೆ ಸೂಕ್ತವಾದವರಲ್ಲ. ರೈಲ್ವೆ ತಡೆಯಂತಹ ಚಟುವಟಿಕೆಗಳ ವೀಡಿಯೋಗಳನ್ನು ಪರಿಶೀಲಿಸಲಾಗುತ್ತದೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಅಭ್ಯರ್ಥಿಗಳು ಅಥವಾ ಉದ್ಯೋಗದ ಆಕಾಂಕ್ಷಿಗಳ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಇದರ ಜೊತೆಗೆ ರೈಲ್ವೆ ಉದ್ಯೋಗ ಪಡೆಯುವುದರಿಂದ ಜೀವಮಾನದ ನಿರ್ಬಂಧವನ್ನು ಎದುರಿಸಬೇಕಾಗುತ್ತದೆ," ಎಂದು ರೈಲ್ವೆ ನೇಮಕಾತಿ ಮಂಡಳಿ ಪರವಾಗಿ ಹೊರಡಿಸಲಾದ ನೋಟಿಸ್ ತಿಳಿಸಿದೆ.
ಬಿಹಾರದಲ್ಲಿ ರೈಲ್ವೆ ತಡೆ ನಡೆಸಿ ಪ್ರತಿಭಟನೆ:
ಬಿಹಾರದಲ್ಲಿ ಸೋಮವಾರ ರೈಲ್ವೆ ನೇಮಕಾತಿ ಮಂಡಳಿಯು (RRB) ನಡೆಸಿದ ತಾಂತ್ರಿಕವಲ್ಲದ ಜನಪ್ರಿಯ ವರ್ಗಗಳ (NTPC) ಸ್ಪರ್ಧಾತ್ಮಕ ಪರೀಕ್ಷೆ, 2021ರಲ್ಲಿ ಫಲಿತಾಂಶಗಳು ತಪ್ಪಾಗಿ ಬಂದಿವೆ ಎಂದು ಆರೋಪಿಸಿ ಸೋಮವಾರ ಬಿಹಾರದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದರು. ಮಂಗಳವಾರವೂ ಪ್ರತಿಭಟನೆ ಮುಂದುವರಿದಿದ್ದು, ಪಾಟ್ನಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ರೈಲುಗಳನ್ನು ತಡೆಯುವ ಪ್ರಯತ್ನದ ಜೊತೆ ಪಾಟ್ನಾದಿಂದ ಪಶ್ಚಿಮಕ್ಕೆ 50 ಕಿಮೀ ದೂರದಲ್ಲಿರುವ ಭೋಜ್‌ಪುರ ಜಿಲ್ಲೆಯ ಪ್ರಧಾನ ಕಛೇರಿ ಅರಾದಲ್ಲಿ ನಿಂತಿದ್ದ ರೈಲಿನ ಕೋಚ್‌ಗೆ ಬೆಂಕಿ ಹಚ್ಚಲಾಯಿತು.
ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪ:
ಮಂಗಳವಾರ ಪಾಟ್ನಾದಲ್ಲಿ ನಿರುದ್ಯೋಗದ ವಿರುದ್ಧ ಪ್ರತಿಭಟನೆ ನಡೆಸಿದ ಆರೋಪದ ಹಿನ್ನೆಲೆ ವಿದ್ಯಾರ್ಥಿಗಳ ಮೇಲೆ ಉತ್ತರ ಪ್ರದೇಶ ಪೊಲೀಸರು ಹಲ್ಲೆ ನಡೆಸಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿರುವ ಅವರ ಹಾಸ್ಟೆಲ್ ಅನ್ನು ಧ್ವಂಸಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ದೂಷಿಸಿದ್ದಾರೆ. ಈ ಘಟನೆಯ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿ, "ಪ್ರಯಾಗ್‌ರಾಜ್‌ನಲ್ಲಿ ಪೊಲೀಸರು ವಿದ್ಯಾರ್ಥಿಗಳನ್ನು ಥಳಿಸುತ್ತಿರುವುದು ಮತ್ತು ಅವರ ಲಾಡ್ಜ್‌ಗಳು ಮತ್ತು ಹಾಸ್ಟೆಲ್‌ಗಳನ್ನು ಧ್ವಂಸಗೊಳಿಸುತ್ತಿರುವುದು ಅತ್ಯಂತ ಖಂಡನೀಯ" ಎಂದು ಹೇಳಿದ್ದಾರೆ.
ಉದ್ಯೋಗ ಕೇಳುವುದು ಯುವಕರ ಹಕ್ಕು:
ರಾಜ್ಯ ಸರ್ಕಾರರವು ತನ್ನ ದಮನಕಾರಿ ನೀತಿಯನ್ನು ತಕ್ಷಣವೇ ನಿಲ್ಲಿಸಬೇಕು. ಉದ್ಯೋಗದ ಬಗ್ಗೆ ಮಾತನಾಡುವುದಕ್ಕೆ ಪ್ರತಿಯೊಬ್ಬ ಯುವಕರಿಗೂ ತಮ್ಮದೇ ಆದ ಹಕ್ಕಿರುತ್ತದೆ. ನಿರೋದ್ಯೋಗಿ ಯುವಕರ ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿರುತ್ತದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
2 ರಿಂದ 6ನೇ ಹಂತದವರೆಗಿನ ಉದ್ಯೋಗಗಳಿಗಾಗಿ 35,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ಇಲಾಖೆಯು ಪ್ರಯತ್ನಿಸುತ್ತಿದೆ. ಈ ಹಂತದಲ್ಲಿ ಪ್ರಾರಂಭಿಕ ವೇತನವು ತಿಂಗಳಿಗೆ ರೂ 19,900 ರಿಂದ ರೂ 35,400 ರೂಪಾಯಿವರೆಗೆ ಇರುತ್ತದೆ. ಆಯಾ ಉದ್ಯೋಗಗಳಿಗೆ ತಕ್ಕಂತೆ ಕನಿಷ್ಠ ವಿದ್ಯಾರ್ಹತೆ ಭಿನ್ನವಾಗಿರುತ್ತವೆ. ನೇಮಕಾತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಕಡಿಮೆ ವಿದ್ಯಾರ್ಹತೆ ಹೊಂದಿರುವ ಉದ್ಯೋಗಗಳಿಗೂ ಸ್ಪರ್ಧಿಸುವುದಕ್ಕೆ ಅನ್ಯಾಯವಾಗಿ ದಾರಿ ಮಾಡಿಕೊಟ್ಟಿದೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.












Click it and Unblock the Notifications