ಸುರಕ್ಷತೆ ಮತ್ತು ಕಿರಿಕಿರಿರಹಿತ ಪ್ರಯಾಣವೇ ರೈಲ್ವೆ ಇಲಾಖೆಯ ಗುರಿ
ನವದೆಹಲಿ, ಅಕ್ಟೋಬರ್ 24 : ಭಾರತದ ರೈಲಿನಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಮತ್ತು ಕಿರಿಕಿರಿ ರಹಿತವಾದ ಪ್ರಯಾಣವನ್ನು ಕಲ್ಪಿಸುವುದೇ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ಮೂಲ ಉದ್ದೇಶವಾಗಿದೆ.
ಈ ಪ್ರಯತ್ನದ ಫಲಶ್ರುತಿಯಾಗಿ, 2014ರಿಂದೀಚೆಗೆ ಹಲವಾರು ರೈಲು ಅಪಘಾತಗಳು ಸಂಭವಿಸಿದ್ದರೂ, 2017-18ರಲ್ಲಿ ಅಪಘಾತಗಳ ಸಂಖ್ಯೆ 73ಕ್ಕೆ ಇಳಿದಿದೆ. 2013-14ರಲ್ಲಿ 118 ರೈಲು ಅಪಘಾತಗಳು ಸಂಭವಿಸಿದ್ದರೆ, 2017-18ರಲ್ಲಿ ಕೇವಲ 73 ರೈಲು ಅಪಘಾತಗಳು ಸಂಭವಿಸಿವೆ.
ಇದರ ಜೊತೆಗೆ, ಹಳೆಯ ಹಳಿಗಳನ್ನು ನಿರ್ವಹಿಸುವ ಮತ್ತು ಬದಲಾಯಿಸುವ ಕ್ರಿಯೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 2013-14ರಿಂದೀಚೆಗೆ ಶೇ.50ರಷ್ಟು ಹಳೆಯ ಹಳಿಗಳನ್ನು ಬದಲಾಯಿಸಲಾಗಿದೆ. 2013-14ರಲ್ಲಿ 2,926 ಕಿ.ಮೀ.ನಷ್ಟು ಹಳಿಗಳನ್ನು ಬದಲಾಯಿಸಲಾಗಿದ್ದರೆ, 2017-18ರಲ್ಲಿ 4,405 ಕಿ.ಮೀ.ನಷ್ಟು ಹಳೆಯ ಹಳಿಗಳು ಬದಲಾಗಿ ಹೊಸ ಹಳಿಗಳು ಬಂದಿವೆ.

ಸಿಗ್ನಲ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿದ್ದರಿಂದ ದೇಶದ ರಾಜಧಾನಿ ದೇಹಲಿ ಮತ್ತು ಹೌರಾ ನಡುವೆ ಸಂಚರಿಸುವ ರಾಜಧಾನಿ ಎಕ್ಸ್ ಪ್ರೆಸ್ ಮತ್ತು ಪಟ್ನಾ ಮತ್ತು ದೆಹಲಿ-ಅಮೃತಸರ ನಡುವೆ ಸಂಚರಿಸುವ ಶತಾಬ್ದಿ ಎಕ್ಸ್ ಪ್ರೆಸ್ ರೈಲು ಸೇರಿದಂತೆ 14 ಪ್ರಮುಖ ರೈಲುಗಳ ಸಂಚಾರ ಸಮಯವನ್ನು ಕಡಿಮೆಗೊಳಿಸಲಾಗಿದೆ.
ಎಲ್ಲ ಅಡೆತಡೆಗಳನ್ನು ನಿವಾರಿಸಲಾಗಿದ್ದರಿಂದ ಮತ್ತು ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದರಿಂದ 2016ರಲ್ಲಿ 350 ಮೇಲ್/ಎಕ್ಸ್ ಪ್ರೆಸ್, 74 ಸೂಪರ್ ಫಾಸ್ಟ್ ರೈಲು, ರಾಜಧಾನಿ ಮತ್ತು ಶತಾಬ್ದಿ ಎಕ್ಸ್ ಪ್ರೆಸ್ ಗಳು ತಮ್ಮ ಗಮ್ಯವನ್ನು ತಲುಪಬೇಕಾದ ಅವಧಿಗಿಂತ 5ರಿಂದ 25 ನಿಮಿಷಗಳೊಳಗೆ ತಲುಪುತ್ತಿವೆ.
ಪ್ರಸ್ತುತ ವರ್ಷ, ರೈಲ್ವೆ ಇಲಾಖೆ 'ಟ್ರೈನ್ಸ್ ಅಟ್ ಎ ಗ್ಲಾನ್ಸ್ (ಟಿಎಜಿ)' ಎಂಬ ಅಖಿಲ ಭಾರತ ಸಮಗ್ರ ರೈಲ್ವೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು 2018ರ ಆಗಸ್ಟ್ 15ರಿಂದ ಜಾರಿಗೆ ಬಂದಿದೆ. ಇದರ ಜೊತೆಗೆ, ಎಲ್ಲ 17 ಪ್ರಾಂತೀಯ ರೈಲ್ವೆ ಕೇಂದ್ರಗಳು ಪ್ರತ್ಯೇಕವಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿವೆ.
2017-18ರಲ್ಲಿ ಒಟ್ಟು 90 ಹೊಸ ಸೇವೆಗಳನ್ನು ಆರಂಭಿಸಲಾಗಿದೆ. ಆಗಸ್ಟ್ 15ರಿಂದ 35 ಹೊಸ ಸೇವೆಗಳನ್ನು ಜಾರಿಗೆ ತರಲಾಗಿದೆ ಮತ್ತು 28 ಸೇವೆಗಳನ್ನು ವಿಸ್ತರಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲತೆಗಳಾಗಿವೆ.












Click it and Unblock the Notifications