Indian Railway: ಗುಡ್ ನ್ಯೂಸ್, ವಂದೇ ಭಾರತ್ ರೈಲುಗಳಿಂದ ಮತ್ತೊಂದು ಸೇವೆ ಆರಂಭ
ಬೆಂಗಳೂರು, ಡಿಸೆಂಬರ್ 09: ಭಾರತದ ರೈಲ್ವೆ ಸಾರಿಗೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಮತ್ತೊಂದು ಹೊಸ ಸೇವೆ ಆರಂಭಿಸಲು ಸಜ್ಜಾಗಿವೆ. 10 ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಲು ಸಜ್ಜಾಗಿರುವ ಭಾರತೀಯ ರೈಲ್ವೆ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಹೊಸ ಸೇವೆ ಶುರುವಾಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ದೆಹಲಿ-ಕಾಶ್ಮೀರ ಮಾರ್ಗದಲ್ಲಿ ಪ್ರಾಯೋಗಿಕ ಸೇವೆ ನಡೆದಿದೆ.
ದೇಶಾದ್ಯಂತ ವಿವಿಧ ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸೇವೆಗಳು ಇತರ ಸಾಮಾನ್ಯ ಹಾಗೂ ಎಕ್ಸ್‌ಪ್ರೆಸ್ ರೈಲುಗಳಿಗಿಂತಲೂ ಉತ್ತಮ ಸೇವೆ ನೀಡುತ್ತಿವೆ. ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯುವ ಕೆಲಸ ಮಾಡುತ್ತಿವೆ. ಇದೇ ರೈಲುಗಳಲ್ಲಿ ತ್ವರಿತ ಪಾರ್ಸೆಲ್ ಸೇವೆ ಆರಂಭಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ.

ದೊಡ್ಡ ಗೂಡ್ಸ್, ವಸ್ತುಗಳನ್ನು ಸಾಗಿಸಲು ಗೂಡ್ಸ್ ರೈಲುಗಳು ಇರುವಂತೆ ತ್ವರಿತಗತಿಯಲ್ಲಿ ಕಡಿಮೆ ಬೆಲೆಯಲ್ಲಿ ವೇಗವಾಗಿ ವಸ್ತುಗಳನ್ನು ಬೇರೆಡೆಗೆ ಸಾಗಿಲು ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಬಳಕೆ ಆಗಲಿವೆ. ಈಗಾಗಲೇ ಕಾಶ್ಮೀರ ಭಾಗಗಳಿಂದ ಸೇಬು ಹಣ್ಣುಗಳನ್ನು ಯಶಸ್ವಿಯಾಗಿ ದೆಹಲಿಗೆ ಕಡಿಮೆ ಸಮಯದಲ್ಲಿ ರವಾನಿಸಲಾಗಿದೆ. ಈ ಪಾರ್ಸೆಲ್ ಸೇವೆಯನ್ನು ಎಲ್ಲ ವಂದೇ ಭಾರತ್ ರೈಲುಗಳ ಮಾರ್ಗಗಳಲ್ಲಿ ವಿಸ್ತರಣೆ ಆಗಲಿದೆ.
ವಿಬಿ ರೈಲಿನಲ್ಲಿ ಏನೆಲ್ಲ ಪಾರ್ಸೆಲ್ ಮಾಡಬಹುದು?
ವಸ್ತುಗಳು, ಹಣ್ಣುಗಳು, ತರಕಾರಿ, ಹೂವು, ಇನ್ನಿತರ ವಸ್ತುಗಳನ್ನು ಬೆಂಗಳೂರಿನಿಂದ ಚೆನ್ನೈಗೆ ಪಾರ್ಸೆಲ್ ಮಾಡಲು ಕೇವಲ ನಾಲ್ಕು ಗಂಟೆ ಸಮಯ ಹಿಡಿಯುತ್ತದೆ. ಇದೇ ಸಾಮಾನ್ಯ ರೈಲಿನಲ್ಲಿ ಆದರೆ ನಾಲ್ಕು ಗಂಟೆಗಿಂತಲೂ ಹೆಚ್ಚು ಸಮಯ ಹಿಡೆಯುತ್ತದೆ. ಈ ಕಾರಣದಿಂದ ಕಡಿಮೆ ಬೆಲೆಯಲ್ಲಿ ಉತ್ತಮ ಪಾರ್ಸೆಲ್ ಸೇವೆ ನೀಡುವ ಉದ್ದೇಶ ರೈಲ್ವೆ ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇಶಾದ್ಯಂತ ಒಟ್ಟು 66 ವಂದೇ ಭಾರತ್ ರೈಲುಗಳು ಸೇವೆ ನೀಡುತ್ತಿವೆ. ಅಗತ್ಯ ವಸ್ತುಗಳನ್ನು ತ್ವರಿತವಾಗಿ ಪಾರ್ಸೆಲ್ ಮಾಡುವ ವ್ಯವಸ್ಥೆಯನ್ನು ರೈಲ್ವೆ ಪರಿಚಯಿಸುವುದರಿಂದ ರೈಲ್ವೆಗೆ ಆದಾಯವು ಹೆಚ್ಚಾಗುತ್ತದೆ. ಜನರಿಗೆ ಕಡಿಮೆ ಸಮಯದಲ್ಲಿ ಉತ್ತಮ ಸೇವೆ ನೀಡಿದಂತಾಗುತ್ತದೆ.
ಭಾರತೀಯ ರೈಲ್ವೆ ಅಧಿಕಾರಿಗಳು ಈ ಸೇವೆಯ ಕುರಿತು ಶೀಘ್ರವೇ ಅಧಿಕೃತ ಪ್ರಕಟಣೆ ಹೊರಡಿಸಲಿದ್ದಾರೆ. ಜೊತೆಗೆ ಯಾವೆಲ್ಲ ಮಾರ್ಗಗಳಲ್ಲಿ ಯಾವಾಗಿನಿಂದ ಈ ಸೇವೆ ಲಭ್ಯವಾಗಲಿದೆ ಎಂದು ತಿಳಿಸಲಿದ್ದಾರೆ.
ಜನವರಿಗೆ ವಿಬಿ ಸ್ಲೀಪರ್ ರೈಲು ಸೇವೆ?
ಇನ್ನೂ ಬೆಂಗಳೂರು ಬಿಇಎಂಎಲ್ ಉತ್ಪಾದಿತ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲುಗಳು ಇದೇ ವರ್ಷ ಹಳಿಗೆ ಇಳಿಯಬೇಕಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಮುಂದಿನ ವರ್ಷ 2025ರ ಜನವರಿ ಅಂತ್ಯಕ್ಕೆ 10 ವಂದೇ ಭಾರತ್ ಸ್ಲೀಪರ್ ರೈಲುಗಳು ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications