ಸರ್ಕಾರಿ ಸೇವೆಗೆ ಸೇರುವಾಗ ಗಂಡು, ಸೇವೆ ಬಿಡುವಾಗ ಹೆಣ್ಣು!
ಸೇವೆಗೆ ಸೇರುವಾಗ ಗಂಡಾಗಿ, ಆನಂತರ ಹೆಣ್ಣಾಗಿ ಪರಿವರ್ತನೆಗೊಂಡಿದ್ದಕ್ಕೆ ಸೇವೆಯಿಂದ ಹೊರಹಾಕಲು ನಿರ್ಧರಿಸಿದ ಭಾರತೀಯ ನೌಕಾಪಡೆ. ಇತ್ತೀಚೆಗೆ, ಲಿಂಗ ಪರಿವರ್ತನೆ ಮಾಡಿಸಿಕೊಂಡು ಬಂದಿರುವ ಸಿಬ್ಬಂದಿ ವಿರುದ್ಧ ಕ್ರಮ.
ನವದೆಹಲಿ, ಆಗಸ್ಟ್ 28: ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿಯೊಬ್ಬರು ತಮ್ಮನ್ನು ವೈದ್ಯಕೀಯ ಸೌಲಭ್ಯಗಳ ಸಹಾಯದಿಂದ ಹೆಣ್ಣಾಗಿ ಪರಿವರ್ತಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ತೆಗೆದುಹಾಕಲು ಇಲಾಖೆ ಸಿದ್ಧತೆ ನಡೆಸಿದೆ.
ವಿಶಾಖಪಟ್ಟಣಂನಲ್ಲಿರುವ ಐಎನ್ಎಸ್ ಎಕ್ಸಿಲಾ ನೌಕಾ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಆ ಸಿಬ್ಬಂದಿ, ಇತ್ತೀಚೆಗೆ ರಜೆಯ ಮೇಲೆ ತೆರಳಿ ಪುನಃ ಉದ್ಯೋಗಕ್ಕೆ ಹಾಜರಾಗಿದ್ದಾರೆ. ಈ ಅವಧಿಯಲ್ಲಿ ಅವರು ತಮ್ಮ ಲಿಂಗ ಪರಿವರ್ತನೆ ಮಾಡಿಕೊಂಡು ಬಂದಿದ್ದಾರೆ.

ಆದರೆ, ಇದು ನೌಕಾಪಡೆಯ ನಿಯಮಗಳಿಗೆ ವಿರುದ್ಧವಾಗಿರುವುದರಿಂದ ಆಕೆಗೆ (ಈಗ 'ಆಕೆ' ಎಂದೇ ಸಂಬೋಧಿಸಲಾಗುತ್ತಿದೆ) ನೌಕಾಪಡೆಯ 'SERVICE NO LONGER REQUIRED' ನಿಯಮದಡಿ ಅವರನ್ನು ಕೆಲಸದಿಂದ ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಏಳು ವರ್ಷಗಳ ಹಿಂದೆ ಆಕೆ, ನೌಕಾಪಡೆಯಲ್ಲಿ ಕೆಲಸಕ್ಕಾಗಿ ಅರ್ಜಿಯನ್ನು ಸಲ್ಲಿಸುವಾಗ ಭಾರತೀಯ ನಾಗರಿಕ/ಪುರುಷ ಎಂದು ನಮೂದಿಸಿದ್ದರು. ಆದರೆ, ಈಗ ಲಿಂಗ ಪರಿವರ್ತನೆಯಾದ ನಂತರ, ಆ ಸಿಬ್ಬಂದಿಯನ್ನು ಪುರುಷ ಎಂದು ಪರಿಗಣಿಸಲು ಸಾಧ್ಯವಾಗಿರದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ತೆಗೆದುಹಾಕಲು ಕ್ರಮಕೈಗೊಳ್ಳಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications