Rain Alert: ಮುಂದಿನ 3 ದಿನ ಈ ಭಾಗಗಳಲ್ಲಿ ರಣಮಳೆ ಮುನ್ಸೂಚನೆ: 'ರೆಡ್ & ಆರೆಂಜ್ ಅಲರ್ಟ್'
IMD Weather Forecast: ಮುಂಗಾರು ಮಳೆ ಅಬ್ಬರ ಕೆಲವೆಡೆ ಕಡಿಮೆ ಆಗುವ ಮತ್ತೆ ಹಲವು ಕಡೆಗಳಲ್ಲಿ ಸಕ್ರಿಯವಾಗುವ ಪ್ರಕ್ರಿಯೆ ಮುಂದುವರಿದಿದೆ. ಕಳೆದೆರಡು ವಾರಗಳಿಂದಲೂ ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಧಾರಾಕಾರ ಮಳೆ ಆಗಿದೆ. ಇದೀಗ ಮುಂಗಾರು ದಕ್ಷಿಣ ಭಾರತದ ಕಡೆಗಿನ ರಾಜ್ಯಗಳಲ್ಲಿ ಇಂದು ಮತ್ತು ನಾಳೆ ಭಾರೀ ಪ್ರಮಾಣದಲ್ಲಿ ಸುರಿದು ನಾಡಿದ್ದು (ಜೂನ್ 27ರಂದು) ಕಡಿಮೆ ಆಗುವ ಮುನ್ಸೂಚನೆ ನೀಡಿದೆ. ಅಷ್ಟೇ ಅಲ್ಲದೇ ಕರ್ನಾಟಕ, ತಮಿಳುನಾಡು, ಕೇರಳ ಭಾಗದಲ್ಲಿ ಮತ್ತೆ ಅಬ್ಬರಿಸುವ ಸಾಧ್ಯತೆಯು ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹೌದು, ಅರಬ್ಬಿ ಸಮುದ್ರದ ಭಾಗದ ಕರಾವಳಿಯಿಂದ ಗುಜರಾತ್, ಮಧ್ಯ ಪ್ರದೇಶ ಸೇರಿದಂತೆ ಭೂಮಿ ಮೇಲ್ಮೈ ಭಾಗದಲ್ಲಿ ಉಂಟಾಗಿದ್ದ ಸ್ಟ್ರಫ್ ಪ್ರಭಾವ ಕೊಂಚ ಕಡಿಮೆ ಆಗಿದೆ. ಇದರಿಂದಾಗಿ ಈ ಭಾಗಗಳಲ್ಲಿ ಮುಂಗಾರು ಅಬ್ಬರ ಮುಂದಿನ ಮೂರು ದಿನಗಳಲ್ಲಿ ಇಳಿಕೆ ಸಾಧ್ಯತೆ ಇದೆ. ಅಲ್ಲಿಯವರೆಗೆ ಮಧ್ಯ ಪ್ರದೇಶ, ಗುಜರಾತ್, ಝಾರ್ಖಂಡ್, ಮಿಜೋರಾಂ, ಮಣಿಪುರ, ಅರುಣಾಚಲ ಪ್ರದೇಶ, ಬಿಹಾರ, ಹರಿಯಾಣ, ದೆಹಲಿ ವಿವಿಧ ಭಾಗಗಳಲ್ಲಿ ಉತ್ತಮ ಮಳೆ ಆಗಲಿದೆ.

ಜೂನ್ 24ರಂದು ಮಧ್ಯ ಪ್ರದೇಶದಲ್ಲಿ ಬರೋಬ್ಬರಿ 20 ಸೆಂಟಿ ಮೀಟರ್‌ಗೂ ಹೆಚ್ಚು ಮಳೆ ಆಗುವ ಲಕ್ಷಣಗಳು ಇದ್ದು, ಈ ರಾಜ್ಯಕ್ಕೆ ಐಎಂಡಿ ತಜ್ಞರು 'ರೆಡ್ ಅಲರ್ಟ್' ಘೋಷಿಸಿದ್ದಾರೆ. ಇನ್ನುಳಿದಂತೆ ಹಿಮಾಚಲ ಪ್ರದೇಶ, ರಾಜಸ್ಥಾನ, ಬಿಹಾರ್, ಅರುಣಾಚಲ ಪ್ರದೇಶ, ಗೋವಾ-ಕೊಂಕಣ, ಉತ್ತರಾಖಂಡ ಸೇರಿದಂತೆ ಒಂದೆರಡು ರಾಜ್ಯಗಳಲ್ಲಿ ಅತ್ಯಧಿಕ ಮಳೆ ಆಗಲಿದ್ದು, ಮುಂದಿನ 48 ಗಂಟೆಗಳ ಕಾಲ ಈ ರಾಜ್ಯಗಳಿಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ.
ಕರ್ನಾಟಕ ಸೇರಿ ವಿವಿಧೆಡೆ ಸಾಧಾರಣ ಮಳೆ
ಇದರೊಂದಿಗೆ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ, ಕೇರಳ, ಮಹಾರಾಷ್ಟ್ರದ ಕೆಲವು ಭಾಗಗಳು, ಗುಜರಾತ್, ಮಣಿಪುರ, ಮಿಜೋರಾಂ, ಒಡಿಶಾ, ತ್ರಿಪುರ, ಪಶ್ಚಿಮ ಬಂಗಾಳ ಸೇರಿದಂತೆ ಮುಂತಾದ ಕಡೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಇಂದಿನಿಂದ ಮೂರು ದಿನ ಈ ರಾಜ್ಯಗಳ ಕೆಲವು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಭಾರತದ ರಾಜ್ಯಗಳಲ್ಲಿ ಅಬ್ಬರಿಸಿದ್ದ ಮಳೆಯು ಮುಂದಿನ ಮೂರು ದಿನಗಳ ಬಳಿಕ ಕಡಿಮೆ ಆಗಲಿದ್ದು, ಮತ್ತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಈ ಮೂಲಕ ಮುಂಗಾರು ಮೂರನೇ ಬಾರಿಗೆ ಸಕ್ರಿಯವಾಗಲಿದೆ.












Click it and Unblock the Notifications