'ಎನ್‌ಡಿಎ ನಿನಗೆ I N D I A ಗೆಲ್ಲಲು ಆಗುತ್ತಾ'? ಈಗಿನ ಲೆಕ್ಕಾಚಾರ Vs 2019ರ ಫಲಿತಾಂಶ
INDIA ಮೈತ್ರಿಕೂಟ 26ಪಕ್ಷಗಳ ಸಭೆಯನ್ನು ನಡೆಸಿದರೆ, ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ 38ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು. ಒಂದು ಸಭೆ ಬೆಂಗಳೂರಿನಲ್ಲಿ ಇನ್ನೊಂದು ಸಭೆ ದೆಹಲಿಯಲ್ಲಿ, ಇಷ್ಟೆಲ್ಲಾ ಪಕ್ಷಗಳು ಎರಡು ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಿದ್ದರೂ, ದೇಶದ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲ ಕೆಲವು ಪ್ರಾದೇಶಿಕ ಪಕ್ಷಗಳು ಇತ್ತಂಡಗಳ ಸಭೆಯಲ್ಲಿ ಭಾಗವಹಿಸಲಿಲ್ಲ.
ಉದಾಹರಣೆಗೆ ಕಳೆದ ಅಂದರೆ 2019ರ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟದ ಜೊತೆಗಿದ್ದ ತೆಲುಗುದೇಶಂ, ಎನ್‌ಡಿಎ ಅಥವಾ INDIA ಸಭೆಯಲ್ಲಿ ಭಾಗವಹಿಸಲಿಲ್ಲ. ಇನ್ನು, ಬಿಜೆಪಿಗೆ ಬಾಹ್ಯ ಬೆಂಬಲ ನೀಡುತ್ತಲೇ ಬರುತ್ತಿರುವ ಬಿಜು ಜನತಾದಳ, ವೈಎಸ್ಆರ್ ಕಾಂಗ್ರೆಸ್ ಕೂಡಾ ಇಂದಿನ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಇದರಲ್ಲಿ ಚಂದ್ರಬಾಬು ನಾಯ್ಡುಗೆ ಆಹ್ವಾನವಿರಲಿಲ್ಲ ಮತ್ತು ಕಳೆದ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟದ ಜೊತೆಗಿದ್ದ ಜೆಡಿಎಸ್ಸಿಗೂ ಬಿಜೆಪಿಯಿಂದ ಈ ಸಭೆಯಲ್ಲಿ ಭಾಗವಹಿಸಲು ಆಹ್ವಾನವಿರಲಿಲ್ಲ.

ಬೆಂಗಳೂರಿನಲ್ಲಿ ನಡೆದ 26ಪಕ್ಷಗಳ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೀರಾವೇಷದ ಭಾಷಣವನ್ನು ಮಾಡಿದ್ದಾರೆ, 'NDA Can You Challenge India' ಎನ್ನುವ ಸವಾಲನ್ನು ಹಾಕಿದ್ದಾರೆ. ಇದರ ಬೆನ್ನಲ್ಲೇ, ಭಾರತ ವರ್ಸಸ್ ಇಂಡಿಯಾ ಎನ್ನುವ ಹ್ಯಾಷ್ ಟ್ಯಾಗುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಎರಡು ಮೈತ್ರಿಕೂಟದ ಜೊತೆಗೆ ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಗುರುತಿಸಿಕೊಂಡಿದ್ದ ಪಕ್ಷಗಳ ನಿಯತ್ತು ಈ ಬಾರಿ ಹೆಚ್ಚೇನೂ ಬದಲಾವಣೆ ಕಂಡಿಲ್ಲ. ಶಿವಸೇನೆ ಮತ್ತು ಎನ್ಸಿಪಿ ಇಬ್ಬಾಗವಾಗಿ, ಒಬ್ಬೊಬ್ಬರು ಒಂದೊಂದು ಮೈತ್ರಿಕೂಟದ ಜೊತೆಗೆ ಹೋದರೆ, ನಿತೀಶ್ ಕುಮಾರ್ ಅವರ ಜೆಡಿಯು ಸಂಪೂರ್ಣವಾಗಿ INDIA ಜೊತೆ ಗುರುತಿಸಿಕೊಂಡಿದೆ. ಮಹತ್ವಾಕಾಂಕ್ಷೆಯ ರಾಜಕಾರಣಿಯಾಗಿರುವ ನಿತೀಶ್ ಕುಮಾರ್ ಅವರು ಆ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎನ್ನುವ ಮಾತೂ ಕೇಳಿ ಬರುತ್ತಿದೆ. ಇಂದಿನ ಲೆಕ್ಕಾಚಾರ ಮತ್ತು 2019ರ ಫಲಿತಾಂಶ, ಮುಂದಿನ ಪ್ಯಾರಾದಲ್ಲಿ ವಿವರಿಸಲಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಜೊತೆಗಿದ್ದ ಪಕ್ಷಗಳು
2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಜೊತೆಗೆ ಗುರುತಿಸಿಕೊಂಡಿದ್ದ ಪಕ್ಷಗಳು, ಬಿಜೆಪಿ, ಶಿವಸೇನೆ, ಎಐಎಡಿಎಂಕೆ, ಜೆಡಿಯು, ಶಿರೋಮಣಿ ಅಕಾಲಿದಳ, ಪಿಎಂಕೆ, ಲೋಕ ಜನಶಕ್ತಿ ಪಾರ್ಟಿ, ಭಾರತ್ ಧರ್ಮ ಜನಸೇನಾ, ಡಿಎಂಡಿಕೆ, ಅಸ್ಸಾಂ ಗಣ ಪರಿಷತ್, ಅಪ್ನಾದಳ, ಜಾರ್ಖಂಡ್ ಸ್ಟೂಡೆಂಟ್ ಯೂನಿಯನ್, ಪುತಿಯ ತಮಿಳಗಂ, ಟಿಎಂಸಿ, ಆಲ್ ಇಂಡಿಯಾ ಎನ್.ಆರ್ ಕಾಂಗ್ರೆಸ್, ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್, ಎನ್ಡಿಪಿಎ, ಕೇರಳ ಕಾಂಗ್ರೆಸ್ (ಥಾಮಸ್), ರಾಷ್ಟ್ರೀಯ ಲೋಕ ತಾಂತ್ರಿಕ ಪಾರ್ಟಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿದ್ದ ನಮ್ಮ ಮಂಡ್ಯದ ಸುಮಲತಾ ಅಂಬರೀಶ್.

2019ರ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಜೊತೆಗಿದ್ದ ಪಕ್ಷಗಳು
2019ರ ಲೋಕಸಭಾ ಚುನಾವಣೆಯಲ್ಲಿ ಆಗಿನ ಯುಪಿಎ, ಈಗಿನ ಇಂಡಿಯಾ ಮೈತ್ರಿಕೂಟದ ಜೊತೆಗೆ ಗುರುತಿಸಿಕೊಂಡಿದ್ದ ಪಕ್ಷಗಳು, ಕಾಂಗ್ರೆಸ್, ಡಿಎಂಕೆ, ಆರ್ಜೆಡಿ, ಎನ್ಸಿಪಿ, ಜೆಡಿಎಸ್, ರಾಷ್ಟ್ರೀಯ ಲೋಕ ಸಮತಾ ಪಾರ್ಟಿ, ಜೆಎಂಎಂ, ಸಿಪಿಐ (ಎಂ), ಹಿಂದೂಸ್ಥಾನ್ ಆವಾಂ ಮೋರ್ಚಾ, ವಿಕಾಸಶೀಲ ಇನ್ಸಾನ್ ಪಾರ್ಟಿ, ಸಿಪಿಐ, ಐಯುಎಂಎಲ್, ಜನ್ ಅಧಿಕಾರಿ ಪಾರ್ಟಿ, ವಿಸಿಕೆ, ಜೆವಿಎಂ, ಸ್ವಾಭಿಮಾನಿ ಪಕ್ಷ, ಬಹುಜನ ವಿಕಾಸ ಆಗಡಿ, ಸಿಪಿಐ(ಎಂ- ಲೆನಿನಿಸ್ಟ್), ಕೇರಳ ಕಾಂಗ್ರೆಸ್ (ಎಂ), ಆರೆಸ್ಪಿ, ಕೆಎಂಡಿಕೆ, ಐಜೆಕೆ, ಎಂಡಿಎಂಕೆ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಮೂವರು ಪಕ್ಷೇತರರು.
ಎರಡು ಮೈತ್ರಿಕೂಟದಲ್ಲಿ ಗುರುತಿಸಿಕೊಳ್ಳದ ಪಕ್ಷ
ಈ ಎರಡು ಮೈತ್ರಿಕೂಟದಲ್ಲಿ ಗುರುತಿಸಿಕೊಳ್ಳದ ಪಕ್ಷಗಳೆಂದರೆ ತೆಲುಗುದೇಶಂ, ಬಿಆರ್ ಎಸ್, ಬಿಜು ಜನತಾದಳ, ಬಹುಜನ ಸಮಾಜಪಕ್ಷ, ವೈಎಸ್ಆರ್ ಕಾಂಗ್ರೆಸ್ ಇತ್ಯಾದಿ.. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ 353 ಸೀಟು ಗೆಲ್ಲುವ ಮೂಲಕ ಶೇ. 37.36, ಕಾಂಗ್ರೆಸ್ ಮೈತ್ರಿಕೂಟಕ್ಕೆ 91, ಶೇ. 19.49 ಮತ ಪ್ರಮಾಣ ಸಿಕ್ಕಿತ್ತು. ಇದರಲ್ಲಿ ಬಿಜೆಪಿಯ ಪಾಲು 303, ಕಾಂಗ್ರೆಸ್ಸಿನ ಪಾಲು 52 ಸೀಟು. ಶೇಕಡಾವಾರು ವೋಟ್ ಶೇರ್ ಎನ್‌ಡಿಎ 6.36, ಯುಪಿಎಗೆ ಪರವಾಗಿ 0.18 ಸ್ವಿಂಗ್ ಆಗಿತ್ತು.
ಈ ಎರಡು ಮೈತ್ರಿಕೂಟವನ್ನು ಹೊರತಾಗಿ
ಈ ಎರಡು ಮೈತ್ರಿಕೂಟವನ್ನು ಹೊರತಾಗಿ ಹಲವು ಪ್ರಮುಖ ಪಕ್ಷಗಳು 2019ರ ಚುನಾವಣೆಯಲ್ಲಿ ತಟಸ್ಥವಾಗಿದ್ದವು. ಅದರಲ್ಲಿ ಪ್ರಮುಖವಾಗಿ, ಬಿಜೆಡಿ ಶೇ. 1.66, ಬಿಆರ್ಎಸ್ ಶೇ. 1.25, ವೈಎಸ್ಆರ್ ಪಕ್ಷ ಶೇ. 2.53, ತೆಲುಗುದೇಶಂ ಶೇ. 2.04, ಬಹುಜನ ಸಮಾಜಪಕ್ಷ ಶೇ. 3.62, ಎಐಎಂಐಎಂ ಶೇ. 0.2, ಅಕಾಲಿದಳ ಶೇ. 0.62 ಮತಗಳನ್ನು ಪಡೆದವು. ಈ ಪಕ್ಷಗಳು ಒಟ್ಟು ಪಡೆದಂತಹ ಸೀಟುಗಳು ಅರವತ್ತು. ಯಾವುದೇ ಮೈತ್ರಿಕೂಟಕ್ಕೆ ಇದು ನಿರ್ಣಾಯಕವಾಗಬಲ್ಲದು. ಹಾಗಾಗಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ NDA ಮತ್ತು INDIA ಮೈತ್ರಿಕೂಟವು ಇವರ ವಿಶ್ವಾಸವನ್ನು ಗಳಿಸಲು ಪ್ರಯತ್ನಿಸಬಹುದು.
ಪಕ್ಷಗಳು ಪಡೆದ ಸೀಟುಗಳು, ಆ ಪಕ್ಷಗಳು ಈಗ ಯಾರ ಜೊತೆಗೆ ಗುರುತಿಸಿಕೊಂಡಿವೆ
2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷಗಳು ಪಡೆದ ಸೀಟುಗಳು ಮತ್ತು ಆ ಪಕ್ಷಗಳು ಈಗ ಯಾವ ಮೈತ್ರಿಕೂಟದ ಜೊತೆಗೆ ಗುರುತಿಸಿಕೊಂಡಿವೆ, ಇದನ್ನು ಆಧರಿಸಿ ಸೀಟುಗಳನ್ನು ಲೆಕ್ಕ ಹಾಕುವುದಾದರೆ, NDA ಮೈತ್ರಿಕೂಟ 331, INDIA ಮೈತ್ರಿಕೂಟ 144, ಇತರರು ಮತ್ತು ಪಕ್ಷೇತರರು 70 ಸ್ಥಾನವನ್ನು ಗೆದ್ದಿದ್ದರು. ಮುಂದಿನ ದಿನಗಳಲ್ಲಿ ತಟಸ್ಥವಾಗಿ ಉಳಿದಿರುವ ಪಕ್ಷಗಳು ಎರಡು ಮೈತ್ರಿಕೂಟದ ಜೊತೆಗೆ ಗುರುತಿಸಿಕೊಂಡಿದ್ದೇ ಆದಲ್ಲಿ ಅದು ಮೈತ್ರಿಕೂಟಕ್ಕೆ ಲಾಭವಾಗುವುದಂತೂ ನಿಶ್ಚಿತ.












Click it and Unblock the Notifications