ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ : ಒರಿಸ್ಸಾದಲ್ಲಿ ಬಿಜೆಡಿನೇ ಕಿಂಗ್
ನವದೆಹಲಿ, ನವೆಂಬರ್ 16 : ಇಂಡಿಯಾ ಟಿವಿ ಮತ್ತು ಸಿಎನ್ಎಕ್ಸ್ ಜಂಟಿಯಾಗಿ ನಡೆಸಿರುವ ಚುನಾವಣಾ ಸಮೀಕ್ಷೆಯಲ್ಲಿ ಬಿಜು ಜನತಾ ದಳದ ನವೀನ್ ಪಟ್ನಾಯಕ್ ಅವರು ಲೋಕಸಭೆ ಚುನಾವಣೆಯಲ್ಲಿ ಅತೀಹೆಚ್ಚು ಸೀಟುಗಳನ್ನು ಗೆಲ್ಲಲಿದ್ದಾರೆ.
ಒರಿಸ್ಸಾದಲ್ಲಿ ಭಾರತೀಯ ಜನತಾ ಪಕ್ಷ ಇನ್ನಿತರ ಏಳು ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರೂ ಬಿಜು ಜನತಾ ದಳವನ್ನು ಹಿಂದಿಕ್ಕುವುದು ಕಷ್ಟಸಾಧ್ಯ ಎಂದು ಸಮೀಕ್ಷೆ ತಿಳಿಸಿದೆ.
ಇರುವ 21 ಲೋಕಸಭಾ ಸೀಟುಗಳಲ್ಲಿ ಬಿಜು ಜನತಾ ದಳ ಕನಿಷ್ಠ 16 ಸೀಟುಗಳನ್ನು ತನ್ನದಾಗಿಸಿಕೊಳ್ಳಲಿದೆ ಮತ್ತು ಉಳಿದ ಕ್ಷೇತ್ರಗಳು ಬಿಜೆಪಿ ಮತ್ತು ಮೈತ್ರಿ ಪಕ್ಷಗಳ ಪಾಲಾಗಲಿವೆ. ಕಾಂಗ್ರೆಸ್ ಇಲ್ಲಿ ಒಂದೂ ಕ್ಷೇತ್ರವನ್ನೂ ಗೆಲ್ಲಲಿಕ್ಕಿಲ್ಲ ಎಂದು ಸಮೀಕ್ಷೆ ಅಚ್ಚರಿಯ ಫಲಿತಾಂಶ ಹೊರಹಾಕಿದೆ.

ಮತ ಗಳಿಕೆಯ ವಿಷಯದಲ್ಲಿ ಕಳೆದ ಚುನಾವಣೆಗೆ ಹೋಲಿಸಿದರೆ ಬಿಜೆಡಿಯ ಮತಗಳಿಕೆ ಸ್ವಲ್ಪ ತಗ್ಗಲಿದೆ. 2014ರ ಚುನಾವಣೆಯಲ್ಲಿ ಶೇ.44.77ರಷ್ಟು ಮತ ಬಿಜೆಡಿ ಗಳಿಸಿತ್ತು. 2019ರಲ್ಲಿ ಶೇ.44ರಷ್ಟು ಮತಗಳನ್ನು ಬಿಜೆಡಿ ಗಳಿಸಲಿದೆ. ಆದರೆ ಬಿಜೆಪಿಯ ಮತಗಳಿಕೆಯ ಪ್ರಮಾಣ ಈ ಬಾರಿ ಏರಲಿದ್ದು, ಶೇ.21.88ರಿಂದ ಶೇ.28.53ಗೆ ಹೆಚ್ಚಿಸಿಕೊಳ್ಳಲಿದೆ. ಕಾಂಗ್ರೆಸ್ ಶೇ. 21.67ರಷ್ಟು ಮತಗಳನ್ನು ಗಳಿಸಿದರೂ ಒಂದೂ ಸೀಟು ಗೆಲ್ಲುವುದು ಅನುಮಾನ.

ಕಳೆದ ಚುನಾವಣೆಯಲ್ಲಿ ಬಿಜೆಡಿ 20 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ತನ್ನ ರಾಜ್ಯದಲ್ಲಿ ಸಾರ್ವಭೌಮತ್ವ ಮೆರೆದಿತ್ತು. ಬಿಜೆಪಿ ಕೇವಲ ಒಂದು ಸೀಟು ಮಾತ್ರ ಗೆದ್ದಿತ್ತು. ಕಳೆದ 2014ರ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಒಂದೂ ಕ್ಷೇತ್ರದಲ್ಲಿ ಗೆಲುವು ಸಾಧಿಸಿರಲಿಲ್ಲ.












Click it and Unblock the Notifications