ಇಂಡಿಯಾ ಟಿವಿ-ಸಿಎನ್ ಎಕ್ಸ್ ಸಮೀಕ್ಷೆ : ನರೇಂದ್ರ ಮೋದಿ ಮತ್ತೆ ಪ್ರಧಾನಿ?
Recommended Video

ನವದೆಹಲಿ, ನವೆಂಬರ್ 16: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದೆ. ಐದು ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ ಲೋಕಸಭಾ ಚುನಾವಣೆಗೆ ಬಿರುಸಿನ ತಯಾರಿ ಆರಂಭವಾಗಲಿದೆ.
ಇಂಡಿಯಾ ಟಿವಿ ಮತ್ತು ಸಿಎನ್ ಎಕ್ಸ್ ನಡೆಸಿದ ಜನಾಭಿಪ್ರಾಯದ ಸಮೀಕ್ಷೆ ಹೊರಬಿದ್ದಿದ್ದು, ಇಂದೇ ಚುನಾವಣೆ ನಡೆದರೆ ಶೇ.42 ರಷ್ಟು ಜನ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗಬೇಕು ಎಂದು ಬಯಸಿದ್ದಾರೆ. ಪ್ರಧಾನಿ ರೇಸ್ ನಲ್ಲಿ ಮೋದಿಯವರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್ಪಿ ನಾಯಕಿ ಮಾಯಾವತಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಎಸ್ಪಿ ನಾಯಕ ಅಖಿಲೇಶ್ ಯಾದವ್ ಮುಂತಾದವರಿದ್ದಾರೆ.
ರಾಹುಲ್ ಗಾಂಧಿಯವರು ಭಾಗವಹಿಸಿದ rally ಯಲ್ಲೆಲ್ಲ ರಫೇಲ್ ಹಗರಣ, ಸಿಬಿಐ, ಆರ್ ಬಿಐ ಎಂದು ಕೇಂದ್ರ ಸರ್ಕಾರದ ವಿರುದ್ಧ, ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೂ ಮತದಾರ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ!

ಮೋದಿಗೆ ಉಘೇ ಎಂದ ಶೇ.42 ಮತದಾರರು
ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ನಡೆದ ಸಮೀಕ್ಷೆಯಲ್ಲಿ ಶೇ.42 ಜನರು ಪ್ರಧಾನಿ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗಬೇಕು ಎಂದಿದ್ದಾರೆ. ರಫೇಲ್ ಡೀಲ್, ಸಿಬಿಐ, ಆರ್ ಬಿಐ ವಿವಾದದ ಬೆಂಕಿ ಹೊತ್ತಿ ಉರಿಯುತ್ತಿರುವ ಈ ಹೊತ್ತಿನಲ್ಲೂ ಮೋದಿ ಅವರನ್ನೇ ಜನರು ನೆಚ್ಚಿಕೊಳ್ಳುತ್ತಿರುವುದು ಮೋದಿ ಜನಪ್ರಿಯತೆಗೆ ಸಾಕ್ಷಿ ಎನ್ನಿಸಿದೆ.

ರಾಹುಲ್ ಗಾಂಧಿಗೆ ಮತ್ತೆ ಹಿನ್ನಡೆ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿ ನೋಡಲು ಕೇವಲ ಶೇ.19 ಜನರಷ್ಟೇ ಸಿದ್ಧವಿದ್ದಾರೆ! ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಬಲ ಪ್ರತಿಸ್ಪರ್ಧಿ ಎಂದು ಕಾಂಗ್ರೆಸ್ ರಾಹುಲ್ ಗಾಂಧಿ ಅವರಿಗೆ ಆಯಕಟ್ಟಿನ ಹುದ್ದೆ ನೀಡಿದ್ದರೂ, ಈಗಾಗಲೇ ಕೇಂದ್ರ ಸರ್ಕಾರದ ಮೇಲೆ ಹಗರಣದ ಆರೋಪದ ಸುರಿಮಳೆಯನ್ನೇ ರಾಹುಲ್ ಗಾಂಧಿ ಮಾಡುತ್ತಿದ್ದರೂ ಪ್ರಯೋಜನವಾದಂತಿಲ್ಲ. ಈಗ ಚುನಾವಣೆ ನಡೆದರೂ ಪ್ರಧಾನಿಯಾಗಿ ರಾಹುಲ್ ಗಾಂಧಿ ಅವರನ್ನು ಒಪ್ಪುವವರು ಕೇವಲ ಶೇ.19 ಮತದಾರರು ಮಾತ್ರ!

ರೇಸ್ ನಲ್ಲಿ ಮಹಿಳಾ ಮಣಿಗಳು
ಪ್ರಧಾನಿ ರೇಸ್ ನಲ್ಲಿರುವ ಮಹಿಳಾ ಮಣಿಗಳೆಂದರೆ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಈ ಇಬ್ಬರ ಪರವಾಗಿ ಶೇ.11 ಜನರಷ್ಟೇ ಮತಹಾಕಿದ್ದಾರೆ. ಮಹಾಘಟಬಂಧನ ಬಹುಮತ ಪಡೆದರೆ ಮಾತ್ರವೇ ಪ್ರಧಾನಿ ಹುದ್ದೆಗೇರಲು ಇವರಿಗೆ ಅವಕಾಶ ದೊರೆಯುತ್ತದೆ.

ರೇಸ್ ನಲ್ಲಿ ಅಖಿಲೇಶ್ ಯಾದವ್
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಕೇವಲ ಶೇ.6 ಜನರಷ್ಟೇ ಪ್ರಧಾನಿಯಾಗಿ ನೋಡಲು ಮತಹಾಕಿದ್ದಾರೆ. ಮಹಾಘಟಬಂಧನದಲ್ಲಿ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳು ಸಾಕಷ್ಟು ಜನರಿರುವುದರಿಂದ ಬಹುಮತ ಸಿಕ್ಕರೂ ಅಧಿಕಾರ ಪಡೆಯುವ ಹೊತ್ತಿಗೆ ಪ್ರಧಾನಿ ಹುದ್ದೆಯ ಕಚ್ಚಾಟ ಆರಂಭವಾದರೆ ಅಚ್ಚರಿಯಿಲ್ಲ!

ಸಮೀಕ್ಷೆ ನಡೆದಿದ್ದು ಎಲ್ಲಿ?
ಇಂಡಿಯಾ ಟಿವಿಗಾಗಿ ದೆಹಲಿ ಮೂಲದ ಸಿಎನ್ ಎಕ್ಸ್ ನ್ಯೂಸ್ ಏಜೆನ್ಸಿ ನಡೆಸಿದ ಒಪಿನಿಯನ್ ಪೋಲ್ ನಲ್ಲಿ 18 ರಿಂದ 60 ವರ್ಷ ವಯಸ್ಸಿನ 17100 ಮತದಾರರನ್ನು ಪ್ರಶ್ನಿಸಲಾಯಿತು. ಉತ್ತರ ಪ್ರದೇಶ, ಉತ್ತರಾಖಂಡ್, ಪಶ್ಚಿಮಬಂಗಾಳ, ಒಡಿಶಾ, ಪಂಜಾಬ್ ಮತ್ತು ಹರ್ಯಾಣಾ ರಾಜದ್ಯಗಳ ಒಟ್ಟು 171 ಲೋಕಸಭಾ ಕ್ಷೇತ್ರಗಳಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ನರೇಂದ್ರ ಮೋದಿಯವರನ್ನೇ ಹೆಚ್ಚುನ ಜನ ನೆಚ್ಚಿಕೊಂಡಿದ್ದು ವಿಶೇಷ.












Click it and Unblock the Notifications