Opinion Poll: ಮಧ್ಯಪ್ರದೇಶ ಲೋಕಸಭಾ ಚುನಾವಣೆ, ಬಿಜೆಪಿ ಎದುರು ಕಾಂಗ್ರೆಸ್ ಧೂಳೀಪಟ?
ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಮುನ್ನ ಪಂಚ ರಾಜ್ಯಗಳ ಅಸೆಂಬ್ಲಿ ಚುನಾವಣೆ ನಡೆಯಬೇಕಿದೆ. ಹಾಗಾಗಿ, ಲೋಕಸಭಾ ಚುನಾವಣೆಗೂ ಮುನ್ನ ನಡೆಯುವ ಸೆಮಿಫೈನಲ್ ಚುನಾವಣೆ ಇದೆಂದು ಬಿಂಬಿತವಾಗಿದೆ.
ಮಧ್ಯ ಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸಗಢ ಮತ್ತು ಮಿಜೋರಾಂ ರಾಜ್ಯಗಳಲ್ಲಿ ವರ್ಷಾಂತ್ಯದೊಳಗೆ ಚುನಾವಣೆ ನಡೆಯಬೇಕಿದೆ. ಹಾಗಾಗಿ, ಚುನಾವಣೆಗೆ ಇನ್ನೆರಡ್ಮೂರು ತಿಂಗಳು ಇರುವುದರಿಂದ ಮಾಧ್ಯಮಗಳು ಸಮೀಕ್ಷೆಯನ್ನು ಹೊರತರುತ್ತಿದೆ.

ಬಿಜೆಪಿಗೆ ನಿರ್ಣಾಯಕವಾಗಿರುವ ರಾಜ್ಯಗಳಲ್ಲೊಂದು ಮಧ್ಯ ಪ್ರದೇಶ. ಪ್ರಸಕ್ತ ಅಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದರೂ, ಆಡಳಿತ ವಿರೋಧಿ ಅಲೆಯ ಭಯ ಬಿಜೆಪಿ ವರಿಷ್ಠರಿಗೆ ಕಾಡುತ್ತಿದೆ.
ಕಳೆದ ಚುನಾವಣೆಯಲ್ಲೂ ಬಿಜೆಪಿಗೆ ಸಂಪೂರ್ಣ ಬಹುಮತ ಸಿಗದಿದ್ದರೂ, ಕಾಂಗ್ರೆಸ್ಸಿನ ಒಳಜಗಳದಿಂದಾಗಿ ಬಿಜೆಪಿಗೆ ತಾನೇ ದಾರಿ ಮಾಡಿಕೊಟ್ಟಿತ್ತು. ಕರ್ನಾಟಕ ಚುನಾವಣೆ ಗೆದ್ದಿರುವ ಕಾಂಗ್ರೆಸ್ ಇದೇ ಹುಮ್ಮಸ್ಸಿನಲ್ಲಿ ಮಧ್ಯ ಪ್ರದೇಶ ಚುನಾವಣೆ ಎದುರಿಸಲು ಸಜ್ಜಾಗಿದೆ.
ಇಂಡಿಯಾ ಟಿವಿ - ಸಿಎನ್ಎಕ್ಸ್ ಜಂಟಿ ಸಮೀಕ್ಷೆ
ಇಂಡಿಯಾ ಟಿವಿ - ಸಿಎನ್ಎಕ್ಸ್ ಜಂಟಿಯಾಗಿ ದೇಶವ್ಯಾಪ್ತಿ ನಡೆಸಿದ ಚುನಾವಣೆಯ ಭಾಗವಾಗಿ ಮಧ್ಯ ಪ್ರದೇಶದ ಜನರ ನಾಡಿಮಿಡಿತ ಅರಿಯುವ ಕೆಲಸವನ್ನು ಮಾಡಿದೆ. ಅದರ ಪ್ರಕಾರ, ಅಲ್ಲಿ ಬರೀ ಎರಡು ರಾಷ್ಟ್ರೀಯ ಪಕ್ಷಗಳದ್ದೇ ದರ್ಬಾರ್.
ಸೆಪ್ಟಂಬರ್ 20ರಿಂದ ಅಕ್ಟೋಬರ್ 3ರವರೆಗಿನ ಅವಧಿಯಲ್ಲಿ ಇಂಡಿಯಾ ಟಿವಿ - ಸಿಎನ್‌ಎಕ್ಸ್ ಸಮೀಕ್ಷೆಯನ್ನು ನಡೆಸಿದೆ. 54,250 ಮತದಾರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದ್ದು, ಇದರಲ್ಲಿ ಪುರುಷರು 28,309 ಮತ್ತು ಮಹಿಳೆಯರು 25,941 ಎಂದು ವಾಹಿನಿ ಹೇಳಿಕೊಂಡಿದೆ.
2019ರ ಲೋಕಸಭಾ ಚುನಾವಣೆ
2019ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 29ಸ್ಥಾನಗಳ ಪೈಕಿ ಬಿಜೆಪಿ 28ಕ್ಷೇತ್ರವನ್ನು ಗೆದ್ದಿತ್ತು. ಕಾಂಗ್ರೆಸ್ ಪಕ್ಷವು ಚಿಂದ್ವಾರಾ ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿತ್ತು. ಈ ಬಾರಿಯ ಚುನಾವಣೆಯ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ಇದಕ್ಕಿಂತ ಉತ್ತಮ ಸಾಧನೆಯನ್ನು ಮಾಡಲಿದೆ.
ಈಗ ಚುನಾವಣೆ ನಡೆದರೆ ಬಿಜೆಪಿ ಶೇ. 48, ಕಾಂಗ್ರೆಸ್ ಶೇ. 41 ಮತ್ತು ಇತರರು ಶೇ.11ರಷ್ಟು ಮತವನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು, ಗಳಿಸಬಹುದಾದ ಸೀಟು ಈ ರೀತಿಯಿದೆ:
| ಒಟ್ಟು ಸ್ಥಾನ | 29 |
| ಬಿಜೆಪಿ | 25 |
| ಕಾಂಗ್ರೆಸ್ | 04 |
| ಇತರರು | 00 |












Click it and Unblock the Notifications