2024 Monsoon: ಶಾಖದ ಅಲೆಗೆ ಅಂತ್ಯ ಹಾಡಲಿದೆ ಮುಂಗಾರು: ಬಿಗ್ ಅಪ್ಡೇಟ್ ಕೊಟ್ಟ ಐಎಂಡಿ ನಿರ್ದೇಶಕರು
ನವದೆಹಲಿ, ಮೇ 27: ದೇಶದ ಇನ್ನೂ ಕೆಲವು ರಾಜ್ಯಗಳ ಅನೇಕ ಜಿಲ್ಲೆಗಳಲ್ಲಿ ಶಾಖದ ಅಲೆ ಮುಂದುವರಿದೆ. ಈ ಮಧ್ಯೆ ಮುಂಗಾರು ಮಳೆ ದೇಶ ಪ್ರವೇಶಿಸುವ ಸುದಿನಗಳು ಹತ್ತಿರವಾಗಿವೆ. ಈ ಬಾರಿಯ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತಾದ್ಯಂತ ಬಿಸಿಗಾಳಿ ಬೀಸುತ್ತಿರುವುದು, ಲಾ ನಿನಾದ ಪ್ರಭಾದಿಂದಾಗಿ 2024ರಲ್ಲಿ ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಆಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಭಾರತೀಯ ಹವಾಮಾನ ಇಲಾಖೆಯ ಮುಖ್ಯಸ್ಥ ಮೃತ್ಯುಂಜಯ್ ಮಹಾಪಾತ್ರ ಹೇಳಿದರು.

ಮೇ 30ರ ನಂತರ ಶಾಖದ ಅಲೆ ಅಂತ್ಯ
ದೇಶದಾದ್ಯಂತ ನೈಋತ್ಯ ಮುಂಗಾರು ಮಳೆಯು ಒಟ್ಟು ಸರಾಸರಿಯ ಶೇಕಡಾ 106 ರಷ್ಟು ವಾಡಿಕೆ ಮಳೆ ಆಗಬೇಕು. ಈ ಭಾಗಿ ಅದಕ್ಕಿಂತಲೂ ಹೆಚ್ಚಿನ ಮಳೆ ಸ್ವೀಕರಿಲಿದ್ದೇವೆ. ಜೂನ್ 1ರಿಂದ ಮುಂಗಾರು ಮಳೆ ಆರಂಭವಾಗಲಿದೆ. ಮೇ 30ರ ನಂತರ ದೇಶದಲ್ಲಿನ ಶಾಖದ ಅಲೆ ಅಂತ್ಯವಾಗಲಿದೆ ಎಂದು ತಿಳಿಸಿದರು.
ಲಾ ನಿನಾ ಪರಿಸ್ಥಿತಿಗಳು ಉತ್ತಮವಾಗಿವೆ. ಅದು ಮುಂಗಾರು ಅಬ್ಬರಕ್ಕೆ ಪೂರವಾದ ವಾತಾವರಣ ನಿರ್ಮಿಸಿದ್ದರಿಂದ ಈ ಸಲದ ಮುಂಗಾರು ಮಳೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ಸುರಿಸಲಿದೆ. ನಾಲ್ಕು ತಿಂಗಳ ಮುಂಗಾರು ಋತುವಿನಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ವ್ಯಾಪಕ ಮಳೆ ಆಗುವ ನಿರೀಕ್ಷೆಗಳು ಇದೆ.
ಕೆಲವೆಡೆ 50 ಡಿಸೆ ಗೂ ಅಧಿಕ ತಾಪಮಾನ
ಮುಂಗಾರು ಮಳೆ ಕೇರಳ ಪ್ರವೇಶಿಸಿ, ದೇಶಾದ್ಯಂತೆ ಜೂನ್ ಮೊದಲವಾರವೇ ವಿಸ್ತರಣೆ ಆಗಲಿದೆ. ಬಿಸಿಗಾಳಿ ಕಡಿಮೆಯಾಗುವ ಸಾಧ್ಯತೆ ಇದೆ. ಮುಂದಿನ ಮೂರು ದಿನಗಳಲ್ಲಿ ವಾಯುವ್ಯ ಭಾರತದಲ್ಲಿ ತೀವ್ರ ಶಾಖದ ಅಲೆಯ ಎಚ್ಚರಿಕೆ ಇದೆ. ನಂತರ ಈ ಭಾಗದಲ್ಲೂ ಮಳೆ ಆಗಲಿದೆ. ಸದ್ಯ ಈ ಭಾಗದ ಕೆಲ ಪ್ರದೇಶಗಳಲ್ಲಿ ತಾಪಮಾನವು 50 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಿದೆ. ಇತ್ತೀಚೆಗೆ ದೆಹಲಿ ಹಾಗೂ ರಾಜಸ್ಥಾನದಲ್ಲಿ ಭಾರೀ ಬಿಸಿ ಗಾಳಿ ಎಚ್ಚರಿಕೆ ನೀಡಲಾಗಿತ್ತು.

ಪ್ರಸಕ್ತ ಮೇ ತಿಂಗಳಲ್ಲಿ ಎರಡನೇ ವಾರದ ನಂತರದಲ್ಲಿ (ದ್ವಿತೀಯಾರ್ಧ) ವಾಯುವ್ಯ ಭಾರತ ಮತ್ತು ಮಧ್ಯ ಪ್ರದೇಶದ ಕೆಲವು ಭಾಗಗಳಲ್ಲಿ ಮಳೆಯ ಕೊರತೆ ಎದುರಿಸಿವೆ. ಇಲ್ಲಿ ಬರೀ ಬಿಸಿ ಗಾಳಿಯ ವಾತಾವರಣ ಕಂಡು ಬಂದಿದೆ. ಬಲವಾದ ಒಣ ಮತ್ತು ಬೆಚ್ಚಗಿನ ಗಾಳಿ ಮತ್ತು ನೈಋತ್ಯ ರಾಜಸ್ಥಾನ ಮತ್ತು ಪಕ್ಕದ ಗುಜರಾತ್ ರಾಜ್ಯದಲ್ಲಿ ಚಂಡಮಾರುತ ವಿರೋಧಿ ವಾತಾವರಣ ಉಂಟಾಗಲು ಕಾರಣವಾಗಿದೆ ಎಂದು ಐಎಂಡಿ ಅಂದಾಜಿಸಿದೆ.
ಕರಾವಳಿಗೆ ಅಪ್ಪಳಿಸಿದ ರೆಮಲ್ ಚಂಡಮಾರುತ
ಎಲ್ ನಿನೋ ಪರಿಸ್ಥಿತಿಗಳು ತಟಸ್ಥವಾಗಿದೆ. ಶನಿವಾರ ರಾತ್ರಿ ಬಾಂಗ್ಲಾದೇಶದಲ್ಲಿ ರೆಮಲ್ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿತು. ಭಾನುವಾರ ಕರಾವಳಿ ಭಾಗದ ಪ್ರದೇಶಗಳಿಗೆ ಸುಮಾರು 90 ಕಿಲೋ ಮೀಟರ್ ವೇಗದಲ್ಲಿ ಅಪ್ಪಳಿಸಿದೆ. ಮುಂದಿನ ದಿನಗಳಲ್ಲಿ ಇದರ ಗಾಳಿಯ ವೇಗ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ದೇಶದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಮುಂದಿನ 24 ಗಂಟೆ ಭಾರೀ ಮಳೆ ಆಗಲಿದೆ. ಕೆಲವು ರಾಜ್ಯಗಳ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ರೆಡ್ ಅಲರ್ಟ್ ಸಹ ನೀಡಲಾಗಿದೆ. ಕರ್ನಾಟಕದಲ್ಲೂ ವಿವಿಧೆಡೆ ರೆಮಲ್ ಪ್ರಭಾವದಿಂದ ಜೋರು ಮಳೆ ಆಗಲಿದೆ.












Click it and Unblock the Notifications