ನಿಜ್ಜರ್ ಹತ್ಯೆ ಬಳಿಕ ಹಳಸಿದ ಸಂಬಂಧ: ಕೆನಡಾದ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಲಿ ಗಡುವು ನೀಡಿದ ಭಾರತ
ನವದೆಹಲಿ,ಅಕ್ಟೋಬರ್ 03: ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಬಳಿಕ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ದಿನಕಳೆದಂತೆ ಹದಗೆಡುತ್ತಿದ್ದು, ಇದರ ನಡುವಲ್ಲೇ ಅಕ್ಟೋಬರ್ 10 ರೊಳಗೆ ನಿಮ್ಮ 40 ಮಂದಿ ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳುವಂತೆ ಕೆನಡಾಗೆ ಭಾರತದ ಸೂಚಿಸಿದೆ ಎಂದು ಫೈನಾನ್ಷಿಯಲ್ ಟೈಮ್ಸ್‌ನ ವರದಿ ಮಾಡಿದೆ.
ಕೆನಡಾವು ಭಾರತದಲ್ಲಿ 62 ರಾಜತಾಂತ್ರಿಕರನ್ನು ಹೊಂದಿದೆ ಮತ್ತು ಒಟ್ಟು 41 ರಷ್ಟು ಕಡಿಮೆಗೊಳಿಸಬೇಕು ಎಂದು ಭಾರತ ಹೇಳಿದೆ ಎಂದು ಪತ್ರಿಕೆ ಹೇಳಿದೆ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇತ್ತೀಚೆಗೆ ಆರೋಪಿಸಿದ ನಂತರ ನವದೆಹಲಿ ಮತ್ತು ಒಟ್ಟಾವಾ ನಡುವಿನ ರಾಜತಾಂತ್ರಿಕ ಸಂಬಂಧವು ಅತ್ಯಂತ ಕೆಳಮಟ್ಟವನ್ನು ಕಂಡಿದೆ.

ಭಾರತ ಸರ್ಕಾರಕ್ಕೆ ಬೇಕಾಗಿದ್ದ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಈ ವರ್ಷ ಜೂನ್ 18ರಂದು ಗುಂಡಿನ ದಾಳಿಯಲ್ಲಿ ಹತ್ಯೆ ಮಾಡಲಾಗಿತ್ತು. ಸರ್ರೆಯ ಗುರುದ್ವಾರದ ಹೊರಗೆ ನಿಜ್ಜರ್‌ನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.
ಒಟ್ಟಾವಾದಲ್ಲಿ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಾತನಾಡಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು, ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯ ಹಿಂದೆ ಭಾರತ ಸರ್ಕಾರದ ಏಜೆಂಟ್ಗಳ ಕೈವಾಡವಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದರು. ಆರೋಪವನ್ನು ತಳ್ಳಿಹಾಕಿದ್ದ ಭಾರತ, ಕೆನಡಾ ವಿರುದ್ಧ ತೀವ್ರವಾಗಿ ಕಿಡಿಕಾರಿತ್ತು.

ನಿಜ್ಜಾರ್ ಹತ್ಯೆಯ ಬಗ್ಗೆ ಸಮರ್ಥಿಸಲು ಕೆನಡಾ ಯಾವುದೇ ಸಾರ್ವಜನಿಕ ಪುರಾವೆಗಳನ್ನು ನೀಡಿಲ್ಲ ಎಂದು ಭಾರತ ಸರ್ಕಾರ ಹೇಳಿದೆ. ಕೆನಡಾದಲ್ಲಿ ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಅನುಮತಿ ಯಿಂದಾಗಿ ಕೆಲವು ವರ್ಷಗಳಿಂದ ಸಮಸ್ಯೆ ಇದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಇತ್ತೀಚೆಗೆ ಹೇಳಿದ್ದಾರೆ.
ರಾಜಕೀಯ ಅನುಕೂಲಕ್ಕೆ ತಕ್ಕಂತೆ ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸಾಚಾರದ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ಹೇಳಿದ್ದರು. ಇದಾದ ನಂತರ ವಿದೇಶಾಂಗ ಸಂಬಂಧಗಳ ಮಂಡಳಿಯಲ್ಲಿ ನಡೆದ ಚರ್ಚೆಯಲ್ಲಿ ಕೆನಡಾಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೂ ಜೈಶಂಕರ್ ಉತ್ತರಿಸಿದರು. ಕೆನಡಾದಲ್ಲಿ ಪ್ರತ್ಯೇಕತಾವಾದಿ ಶಕ್ತಿಗಳು, ಹಿಂಸಾಚಾರ ಮತ್ತು ಉಗ್ರವಾದಕ್ಕೆ ಸಂಬಂಧಿಸಿದ ಅಪರಾಧಗಳು ಪ್ರವರ್ಧಮಾನಕ್ಕೆ ಬರುತ್ತಿವೆ ಎಂದು ಜೈಶಂಕರ್ ಹೇಳಿದ್ದರು.
ಈ ನಡುವೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮಧ್ಯಪ್ರವೇಶಿಸಿದ್ದು, ತನಿಖೆಗೆ ಭಾರತ ಸಹಕರಿಸಲಿ ಎಂದು ಹೇಳಿದೆ. ಮತ್ತೊಂದೆಡೆ, ಕೆನಡಾ ಆರೋಪ ಮಾಡುವ ಬದಲು ಸಾಕ್ಷ್ಯ ಒದಗಿಸಲಿ ಎಂದು ಭಾರತ ಪ್ರತ್ಯುತ್ತರ ನೀಡಿದೆ.












Click it and Unblock the Notifications