ಒಂದು ಲಕ್ಷ ದಾಟಿದ ಭಾರತದ ಕೊರೊನಾ ವೈರಸ್ ಮರಣ
ನವದೆಹಲಿ, ಅಕ್ಟೋಬರ್ 2: ಭಾರತದ ಕೊರೊನಾ ವೈರಸ್ ಸಾವಿನ ಪ್ರಕರಣಗಳ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ. ಶುಕ್ರವಾರ ಬೆಳಿಗ್ಗೆ ಭಾರತದ ಒಟ್ಟು ಕೋವಿಡ್ ಸಂಬಂಧಿ ಮರಣಗಳ ಸಂಖ್ಯೆ 99,773ರಷ್ಟಿತ್ತು. ಆದರೆ ಸಂಜೆ ವೇಳೆಗೆ ರಾಜ್ಯಗಳು ಮತ್ತಷ್ಟು ಹೊಸ ಪ್ರಕರಣಗಳು ಹಾಗೂ ಮರಣ ಸಂಖ್ಯೆಯ ವರದಿಗಳನ್ನು ನೀಡಿದ್ದು, ದೇಶದಲ್ಲಿನ ಒಟ್ಟಾರೆ ಕೋವಿಡ್ ಸಾವಿನ ಸಂಖ್ಯೆ 1 ಲಕ್ಷ ದಾಟಿದೆ.
ದೇಶದಲ್ಲಿ ಮೊದಲ ಕೊರೊನಾ ವೈರಸ್ ಸಾವು ಕರ್ನಾಟಕದ ಕಲಬುರಗಿಯಲ್ಲಿ ವರದಿಯಾಗಿತ್ತು. ಇದಾಗಿ ಏಳು ತಿಂಗಳ ಬಳಿಕ ಭಾರತ ಒಂದು ಲಕ್ಷಕ್ಕೂ ಅಧಿಕ ಸಾವುಗಳನ್ನು ಕಂಡಿದೆ.
ದೇಶದ ಒಟ್ಟಾರೆ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಕೂಡ 64 ಲಕ್ಷದ ಗಡಿ ದಾಟಿದೆ. ಚೇತರಿಕೆಯ ಸಂಖ್ಯೆ 54,15,197ಕ್ಕೆ ಏರಿಕೆಯಾಗಿದೆ. ಶುಕ್ರವಾರ ಬೆಳಿಗ್ಗೆ 81,484 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿತ್ತು.

ಸಂಜೆ ವೇಳೆಗಿನ ವರದಿ ಪ್ರಕಾರ ದೇಶದಲ್ಲಿ 64,64,012 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಸಾವಿನ ಸಂಖ್ಯೆ 1,00,768ಕ್ಕೆ ಏರಿಕೆಯಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಚೇತರಿಕೆ ಪ್ರಮಾಣದಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ. ಬ್ರೆಜಿಲ್ ಮತ್ತು ಅಮೆರಿಕ ನಂತರದ ಸ್ಥಾನದಲ್ಲಿವೆ.
ಕೊರೊನಾ ವೈರಸ್ ಸೋಂಕಿನ ಹೆಚ್ಚು ಪ್ರಕರಣಗಳು ವರದಿಯಾದ ಪಟ್ಟಿಯಲ್ಲಿ ಅಮೆರಿಕದ ನಂತರದ ಸ್ಥಾನದಲ್ಲಿ ಭಾರತವಿದೆ. ಸಾವಿನ ಪಟ್ಟಿಯಲ್ಲಿ ಅಮೆರಿಕ, ಬ್ರೆಜಿಲ್ ಬಳಿಕದ ಸ್ಥಾನದಲ್ಲಿದೆ.












Click it and Unblock the Notifications