ಈ ಮಹತ್ವದ ನಿರ್ಧಾರದಿಂದ ವಿದ್ಯುತ್ ಬಿಲ್ ಕಡಿತ ಸಾಧ್ಯತೆ; ಇಲ್ಲಿದೆ ಸಂಪೂರ್ಣ ಮಾಹಿತಿ
ಪರಿಸರ ಮಾನದಂಡಗಳನ್ನು ಕಾಯ್ದುಕೊಳ್ಳುವುದರ ಜೊತೆಗೆ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಲು ಭಾರತ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ಗಂಧಕ ಹೊರಸೂಸುವಿಕೆಯ ಮಾನದಂಡಗಳನ್ನು ಸಡಿಲಗೊಳಿಸಿದೆ. ಇದರಿಂದ ವಿದ್ಯುತ್ ದರ ಪ್ರತಿ ಯೂನಿಟ್‌ಗೆ 25ರಿಂದ 30 ಪೈಸೆಗಳಷ್ಟು ಕಡಿಮೆ ಆಗಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಗಜೆಟ್ ಮೂಲಕ ಪ್ರಕಟಿಸಲಾದ ಪರಿಷ್ಕೃತ ನಿಯಮಗಳು, ಸಲ್ಫರ್ ಡೈಆಕ್ಸೈಡ್ (SO₂) ಹೊರಸೂಸುವಿಕೆಯನ್ನು ನಿಯಂತ್ರಿಸುವ ಫ್ಲೂ ಗ್ಯಾಸ್ ಡಿಸಲ್ಫರೈಸೇಶನ್ (FGD) ವ್ಯವಸ್ಥೆಗಳನ್ನು ಸ್ಥಾಪಿಸುವ ಹಿಂದಿನ ಆದೇಶವನ್ನು ಸೀಮಿತಗೊಳಿಸಲಾಗುತ್ತದೆ. ಇದು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ 10 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಇರುವ ಉಷ್ಣ ಸ್ಥಾವರಗಳಿಗೆ ಮಾತ್ರ ಅನ್ವಯ ಆಗಲಿದೆ.

ಅತೀ ಹೆಚ್ಚು ಮಾಲಿನ್ಯದಿಂದ ಕೂಡಿದ ಪ್ರದೇಶಗಳು ಅಥವಾ ತಲುಪಲಾಗದ ನಗರಗಳಲ್ಲಿರುವ ವಿದ್ಯುತ್ ಸ್ಥಾವರಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ. ಆದರೆ, ಭಾರತದ ಸುಮಾರು 79% ಕಲ್ಲಿದ್ದಲು ಸಾಮರ್ಥ್ಯವು ಮುಖ್ಯವಾಗಿ ಕಡಿಮೆ ಜನಸಂಖ್ಯೆಯಿರುವ ಪ್ರದೇಶಗಳಲ್ಲಿ ಇರವವು. ಇದೀಗ ಕಡ್ಡಾಯ FGD ಅಳವಡಿಕೆ ಅನಿವಾರ್ಯತೆಯಿಂದ ವಿನಾಯಿತಿ ಆಗಿವೆ.
ಈ ನಿರ್ಧಾರವು ಐಐಟಿ ದೆಹಲಿ, ಸಿಎಸ್ಐಆರ್-ನೀರಿ ಮತ್ತು ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ (NIAS) ಮುಂತಾದ ಸಂಸ್ಥೆಗಳ ಸ್ವತಂತ್ರ ಅಧ್ಯಯನಗಳು ಮತ್ತು ಶಿಫಾರಸುಗಳನ್ನು ಅನುಸರಿಸಿದೆ. ಅವರ ಅಧ್ಯಯನಗಳ ಪ್ರಕಾರ, ಕಲ್ಲಿದ್ದಲಿನಲ್ಲಿ ಗಂಧಕದ ಅಂಶ ಕಡಿಮೆ ಇರುವುದರಿಂದ ಮತ್ತು ಪರಿಣಾಮಕಾರಿ ಪ್ರಸರಣಕ್ಕೆ ಅನುವು ಮಾಡಿಕೊಡುವುದರಿಂದ ಭಾರತದಲ್ಲಿ ಹೆಚ್ಚಿನ ಭಾಗಗಳಲ್ಲಿ SO₂ ಮಟ್ಟಗಳು ಅನುಮತಿಸಲಾದ ಮಿತಿಯೊಳಗೇ ಇರುತ್ತವೆ. ಸರ್ಕಾರದ ಮಾಹಿತಿಯ ಪ್ರಕಾರ, ಅನೇಕ ನಗರಗಳಲ್ಲಿ ಗಂಧಕ ಡೈಆಕ್ಸೈಡ್ ಮಟ್ಟಗಳು ಪ್ರತಿ ಘನ ಮೀಟರ್‌ಗೆ 3 ರಿಂದ 20 ಮೈಕ್ರೋಗ್ರಾಂಗಳಷ್ಟು ದಾಖಲಾಗಿದ್ದು, ಇದು ರಾಷ್ಟ್ರೀಯ ಮಾನದಂಡವಾದ 80 ಮೈಕ್ರೋಗ್ರಾಂಗಿಂತ ಬಹಳ ಕಡಿಮೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಸಹ, ಎಲ್ಲಾ ಉಷ್ಣ ಘಟಕಗಳಲ್ಲಿ FGD ವ್ಯವಸ್ಥೆಗಳನ್ನು ಅಳವಡಿಸುವುದರಿಂದ ಹೆಚ್ಚುವರಿ ಸುಣ್ಣದ ಕಲ್ಲು ಗಣಿಗಾರಿಕೆ, ಸಾರಿಗೆ ಮತ್ತು ಶಕ್ತಿಯ ಬಳಕೆಯಿಂದ ಕಾರ್ಬನ್ ಡೈಆಕ್ಸೈಡ್ (CO₂) ಹೊರಸೂಸುವಿಕೆ ಅನಿವಾರ್ಯವಾಗಿ ಹೆಚ್ಚುತ್ತದೆ ಎಂದು ಗಮನಿಸಿದೆ. ವಾಸ್ತವವಾಗಿ, ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ (NIAS) ನಡೆಸಿದ ಅಧ್ಯಯನದ ಪ್ರಕಾರ, ದೇಶವ್ಯಾಪಿ FGD ಅಳವಡಿಕೆಯಿಂದ 2025ರಿಂದ 2030ರ ಅವಧಿಯಲ್ಲಿ ಸುಮಾರು 69 ಮಿಲಿಯನ್ ಟನ್ CO₂ ಹೊರಸೂಸುವಿಕೆ ಸಂಭವಿಸಬಹುದು. ಇದು ಪರಿಸರ ಹಾನಿಯನ್ನು ಕಡಿಮೆ ಮಾಡುವ ಉದ್ದೇಶವನ್ನೇ ವಿಫಲಗೊಳಿಸುತ್ತದೆ.
ಸಡಿಲವಾದ ಮಾನದಂಡಗಳು ವಿದ್ಯುತ್ ಉತ್ಪಾದಕರ ಮೇಲಿನ ಆರ್ಥಿಕ ಒತ್ತಡವನ್ನು ತಗ್ಗಿಸುವ ನಿರೀಕ್ಷೆಯಿದೆ. ಹಿಂದಿನ ನಿಯಮಗಳ ಪ್ರಕಾರ, ಅನಿವಾರ್ಯವಾಗಿ FGD ವ್ಯವಸ್ಥೆ ಅಳವಡಿಸುವ ಒಟ್ಟು ವೆಚ್ಚವನ್ನು ಸುಮಾರು 2.5 ಲಕ್ಷ ಕೋಟಿ ಅಥವಾ ಪ್ರತಿ ಮೆಗಾವಾಟ್‌ಗೆ 1.2 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಜೊತೆಗೆ ಪ್ರತಿ ಘಟಕಕ್ಕೂ ಗರಿಷ್ಠ 45 ದಿನಗಳವರೆಗೆ ಸ್ಥಗಿತಾವಸ್ಥೆ ಎದುರಾಗುತ್ತಿತ್ತು. ಅಧಿಕಾರಿಗಳ ಪ್ರಕಾರ, ಇತ್ತೀಚಿನ ನೀತಿಯ ಬದಲಾವಣೆ ವಿದ್ಯುತ್ ದರವನ್ನು ಉಳಿಸುವುದಷ್ಟೇ ಅಲ್ಲದೆ, ವಿಶೇಷವಾಗಿ ಗರಿಷ್ಠ ಬೇಡಿಕೆಯ ಕಾಲದಲ್ಲಿ ಗ್ರಿಡ್‌ನ ವಿಶ್ವಾಸಾರ್ಹತೆಯನ್ನು ಸಹ ಸುಧಾರಿಸಲಿದೆ.
ವಿದ್ಯುತ್ ನಿಗಮಗಳ ಕ್ಷೇತ್ರದವರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇದು ವಿಜ್ಞಾನಾಧಾರಿತ, ತರ್ಕಬದ್ಧ ನೀತಿಯಾಗಿದ್ದು, ಅಗತ್ಯವಿರುವ ಪ್ರದೇಶಗಳಲ್ಲಿ ಹೊರಸೂಸುವಿಕೆ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಎಂದು ರಾಜ್ಯ ಸರ್ಕಾರದ ವಿದ್ಯುತ್ ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮತ್ತೊಂದೆಡೆ, ಇದು ಗ್ರಾಹಕರ ಹಣಕಾಸಿನ ಭದ್ರತೆಯನ್ನು ಕೂಡ ಕಾಯುತ್ತದೆ ಅಂತಲೂ ತಿಳಿಸಿದ್ದಾರೆ. ಕಡಿಮೆ ಇನ್‌ಪುಟ್ ವೆಚ್ಚಗಳು ಸುಂಕಗಳನ್ನು ಕಡಿಮೆ ಮಾಡಲು ಮತ್ತು ಸರ್ಕಾರದ ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುವುದರಿಂದ ರಾಜ್ಯ ವಿದ್ಯುತ್ ಮಂಡಳಿಗಳು ಸಹ ಪ್ರಯೋಜನ ಪಡೆಯುವ ಸಾಧ್ಯತೆಯಿದೆ.
ಸರ್ಕಾರದ ಮೂಲಗಳು, ಈ ಹೊಸ ವಿಧಾನವು ಪರಿಸರ ಬದ್ಧತೆಯನ್ನು ಕಡಿಮೆ ಮಾಡುವುದಲ್ಲ ಎಂದು ಹೇಳಿವೆ. ಇದು ಉದ್ದೇಶಿತ ಮತ್ತು ಪುರಾವೆ ಆಧಾರಿತ ಹೊಂದಾಣಿಕೆಯಾಗಿದೆ. ನಾವು ಶುದ್ಧ ಗಾಳಿ ಮತ್ತು ಹವಾಮಾನ ಗುರಿಗಳಿಗೆ ಸಂಪೂರ್ಣ ಬದ್ಧರಾಗಿದ್ದೇವೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಈ ಸಂಶೋಧನೆಗಳನ್ನು ಒಳಗೊಂಡ ಅಧಿಕೃತ ಅಫಿಡವಿಟ್ ಅನ್ನು ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ತಿಳಸಿದ್ದಾರೆ.












Click it and Unblock the Notifications