ಡಾಕ್ಟರ್ ಚೀಟಿ ಇಲ್ಲದೆ ಶೀತ, ಕೆಮ್ಮಿನ ಸಿರಪ್ ಸಿಗಲ್ಲ; ಸ್ವಯಂ ಚಿಕಿತ್ಸೆಗೆ ಬ್ರೇಕ್, ಕೇಂದ್ರದಿಂದ ಹೊಸ ನಿಯಮ
ನವದೆಹಲಿ: ಚಳಿಗಾಲ, ಮಳೆಗಾಲ ಬಂತೆಂದರೆ ಸಾಕು ಕೆಮ್ಮು, ನೆಗಡಿ, ಶೀತದಂತಹ ಪ್ರಾಥಮಿಕ ಆರೋಗ್ಯ ಸಮಸ್ಯೆಗಳು ಎದುರಾಗಿಬಿಡುತ್ತವೆ. ಆಗ ನೀವು ಕೆಮ್ಮು ನಿವಾರಕ ಮತ್ತು ಇತರ ಯಾವುದೇ ಬಗೆಯ ಮೆಡಿಕೇಟೆಡ್ ಸಿರಪ್ಗಳನ್ನು ವೈದ್ಯರ ಅಧಿಕೃತ ಚೀಟಿ (ಪ್ರಿಸ್ಕ್ರಿಪ್ಷನ್) ಇಲ್ಲದೆ ನೇರವಾಗಿ ಮೆಡಿಕಲ್ ಸ್ಟೋರ್ಗಳಲ್ಲಿ ಖರೀದಿಸುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಹೌದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಿದೆ. ಎಲ್ಲಾ ರೀತಿಯ ಸಿರಪ್ ಪಡೆಯಲು ನೊಂದಾಯಿತ ವೈದ್ಯರ ಶಿಫಾರಸಿನ ಮೇರೆಗೆ ಮಾತ್ರವೇ ಮಾರಾಟ ಮಾಡಬೇಕು ಎಂದು ಆದೇಶಿಸಿದೆ. ದೇಶಾದ್ಯಂತ ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಕಟ್ಟುನಿಟ್ಟಾದ ನಿಯಮ ಅನುಷ್ಠಾನಕ್ಕೆ ತರಲಾಗಿದೆ.

ಸಣ್ಣಪುಟ್ಟ ಕಾಯಿಲೆಗಳಿಗೂ ಸ್ವಯಂ ಚಿಕಿತ್ಸೆ (Self-Medication) ಮಾಡಿಕೊಳ್ಳುವುದು ಹಾಗೂ ಯಾವುದೇ ವೈದ್ಯಕೀಯ ಚೀಟಿ ಇಲ್ಲದೆ ನೇರವಾಗಿ ಔಷಧಿ ಖರೀದಿಸುವದು ಅಪಾಯಕಾರಿ ಬೆಳವಣಿಗೆ ಆಗಿದೆ. ಈ ಪ್ರವೃತ್ತಿ ದೇಶದ ಜನರಲ್ಲಿ ಹೆಚ್ಚಾಗಿದೆ. ಇದರ ತಡೆಗೆ ರೋಗಿಗಳ ಆರೋಗ್ಯ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಕೇಂದ್ರ ಭಾರತೀಯ ಔಷಧ ನಿಯಮಾವಳಿಗಳಿಗೆ ತಿದ್ದುಪಡಿ ತಂದಿದೆ. ಜೂನ್ 9 ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದ್ದು, ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
ಷೆಡ್ಯೂಲ್ ಕೆ ನಿಯಮದಲ್ಲಿ ಮಹತ್ವದ ಬದಲಾವಣೆ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೊರಡಿಸಿರುವ ಹೊಸ ಗೆಜೆಟ್ ಅಧಿಸೂಚನೆಯ ಪ್ರಕಾರ, 1945 ರ ಡ್ರಗ್ಸ್ ನಿಯಮಾವಳಿಗಳ ಅತ್ಯಂತ ಪ್ರಮುಖವಾದ 'ಷೆಡ್ಯೂಲ್ ಕೆ' ಪಟ್ಟಿಯಿಂದ 'ಸಿರಪ್ಗಳು' ಎಂಬ ಪದವನ್ನೇ ಸಂಪೂರ್ಣವಾಗಿ ಕೈಬಿಡಲಾಗಿದೆ. ಹಾಲಿ ಜಾರಿಯಲ್ಲಿದ್ದ ನಿಯಮಗಳ ಪ್ರಕಾರ, ಷೆಡ್ಯೂಲ್ ಕೆ ಅಡಿಯಲ್ಲಿ ಬರುವ ಕೆಲವು ವರ್ಗದ ಸಿರಪ್ಗಳನ್ನು ಔಷಧಾಲಯಗಳಲ್ಲಿ ಸುಲಭವಾಗಿ ಮತ್ತು ಯಾವುದೇ ಕಟ್ಟುನಿಟ್ಟಾದ ದಾಖಲೆಗಳಿಲ್ಲದೆ ಚಿಲ್ಲರೆ ಮಾರಾಟ ಮಾಡಲು ವಿನಾಯಿತಿ ನೀಡಲಾಗಿತ್ತು. ಸದ್ಯ ಬದಲಾದ ನಿಯಮಗಳ ಪ್ರಕಾರ ಆ ವಿನಾಯಿತಿಯನ್ನು ರದ್ದುಗೊಳಿಸಲಾಗಿದೆ.
ಔಷಧ ಮತ್ತು ಪ್ರಸಾಧನ ಸಾಮಗ್ರಿಗಳ ಕಾಯ್ದೆ 1940 ರ ಸೆಕ್ಷನ್ 12 ಮತ್ತು 33 ರ ಅಡಿಯ ವಿಶೇಷ ಅಧಿಕಾರ ಬಳಸಿಕೊಂಡು ಕೇಂದ್ರ ಈ ನಿರ್ಧಾರ ಪ್ರಕಟಿಸಿದೆ. ದೇಶದ ಅತ್ಯುನ್ನತ ಔಷಧ ನಿಯಂತ್ರಕ ಸಂಸ್ಥೆಯಾದ ಡ್ರಗ್ಸ್ ತಾಂತ್ರಿಕ ಸಲಹಾ ಮಂಡಳಿ (DTAB) ಯೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ನಂತರವೇ ಈ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಮುಂದೆ ಯಾವುದೇ ಬಗೆಯ ಸಿರಪ್ಗಳು ಸ್ವಯಂ ಪ್ರೇರಿತವಾಗಿ ಖರೀದಿಸಲು ಅಥವಾ ಜನಸಾಮಾನ್ಯರಿಗೆ ಮಾರಾಟ ಮಾಡಲು ಆಗುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಪೋಷಕರ ಸ್ವಯಂ ಚಿಕಿತ್ಸೆಗೆ ಬ್ರೇಕ್
ಪ್ರತಿಯೊಬ್ಬರಿಗೆ ಆಗಾಗ ಸಣ್ಣದಾಗಿ ಕೆಮ್ಮು, ನೆಗಡಿ ಅಥವಾ ಜ್ವರ ಕಾಣಿಸಿಕೊಂಡ ತಕ್ಷಣವೇ ಸಮೀಪದ ಮೆಡಿಕಲ್ ಸ್ಟೋರ್ಗಳಿಗೆ ತೆರಳಿ ವಿವಿಧ ಸಿರಪ್ ತಂದು ಸ್ವಯಂ ಔಷಧಿ ರೂಪದಲ್ಲಿ ಸೇವಿಸುವುದು ರೂಢಿ. ಅದರಲ್ಲೂ ಚಿಕ್ಕ ಮಕ್ಕಳ ವಿಷಯದಲ್ಲಿ ಅನೇಕ ಪೋಷಕರು ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸದೇ ತಾವೇ ನಿರ್ಧಾರ ಮಾಡುತ್ತಾರೆ. ಆಗ ಪೀಡಿಯಾಟ್ರಿಕ್ ಸಿರಪ್ಗಳನ್ನು ಕುಡಿಸುವ ಮೂಲಕ ನಿರ್ಲಕ್ಷ್ಯ ವಹಿಸುತ್ತಿದ್ದರು. ಕೇಂದ್ರ ಸರ್ಕಾರದ ಈ ನೂತನ ಕಠಿಣ ನಿಯಮದಿಂದಾಗಿ ಇಂತಹ ಅಪಾಯಕಾರಿ ಪದ್ಧತಿಗೆ ಬ್ರೇಕ್ ಬೀಳಲಿದೆ.
ವೈದ್ಯರ ಸೂಕ್ತ ಮಾರ್ಗದರ್ಶನ ಹಾಗೂ ನಿಖರವಾದ ಡೋಸೇಜ್ ಇಲ್ಲದೆ ಸಿರಪ್ಗಳನ್ನು ತೆಗೆದುಕೊಳ್ಳುವುದು ಮನುಷ್ಯರ ಲಿವರ್ ಮತ್ತು ಕಿಡ್ನಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅದರಲ್ಲೂ ಕೆಲವು ಬಗೆಯ ಕೆಮ್ಮಿನ ಸಿರಪ್ಗಳಲ್ಲಿ ಅಮಲು ಮತ್ತು ನಿದ್ರೆ ತರಿಸುವ ಅಂಶಗಳಿರುತ್ತವೆ. ಇವುಗಳ ಅತೀ ಬಳಕೆ ಮಾದಕ ವ್ಯಸನಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದೆಲ್ಲ ಕಾರಣಗಳಿಂದ ಸಿರಪ್ ಮಾರಾಟ, ಖರೀದಿಗೆ ಕೇಂದ್ರ ಬ್ರೇಕ್ ಹಾಕಿದೆ.














Click it and Unblock the Notifications