ಕಿರಿಕ್ ತೆಗೆದ ಪಾಕಿಸ್ತಾನಕ್ಕೆ ಸರಿಯಾಗೇ ಗುದ್ದು ಕೊಟ್ಟ ಭಾರತ!
ಪಾಕಿಸ್ತಾನಕ್ಕೆ ಸದಾ ಒಂದೇ ಧ್ಯಾನ, ಭಾರತದ ವಿರುದ್ಧ ಪದೇ ಪದೇ ಆರೋಪಗಳನ್ನ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳುತ್ತೆ ಈ ದೇಶ. ಇಂತಿಪ್ಪ ಪಾಕಿಸ್ತಾನ ನಿನ್ನೆಯಷ್ಟೇ ಭಾರತದ ಬಗ್ಗೆ ಮತ್ತೊಂದು ಗಂಭೀರ ಆರೋಪ ಮಾಡಿತ್ತು. ಹೀಗೆ ಪಾಪಿ ಪಾಕಿಸ್ತಾನ ಮಾಡಿದ್ದ ಆರೋಪಕ್ಕೆ ಭಾರತ ಸರಿಯಾಗೇ ತಿರುಗೇಟು ನೀಡಿದೆ. ಹಾಗಾದರೆ ಪಾಕಿಸ್ತಾನದ ಬಗ್ಗೆ ಭಾರತ ಹೇಳಿದ್ದೇನು?
ತನ್ನ ದೇಶದಲ್ಲಿ ತನ್ನದೇ ಪ್ರಜೆಗಳ ಜೀವ ಕಾಪಾಡಲು ಆಗದ ಪಾಕಿಸ್ತಾನ ಭಾರತದ ಮೇಲೆ ಗೂಬೆ ಕೂರಿಸುತ್ತಿದೆ. ಭಾರತ ಮೂಲದ ಏಜೆಂಟ್‌ಗಳು ಪಾಕಿಸ್ತಾನ ನೆಲದಲ್ಲಿ ಪಾಕಿಸ್ತಾನದ ಪ್ರಜೆಗಳನ್ನ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿತ್ತು ಪಾಕಿಸ್ತಾನ. ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಮುಹಮ್ಮದ್ ಸೈರಸ್ ಖಾಜಿ ಗಂಭೀರ ಆರೋಪ ಮಾಡಿ, ಪಾಕಿಸ್ತಾನದ ನೆಲದಲ್ಲಿ ಪಾಕಿಸ್ತಾನದ ಪ್ರಜೆಗಳನ್ನು ಹತ್ಯೆ ಮಾಡಲು ಭಾರತದ ಏಜೆಂಟ್‌ಗಳನ್ನು ಬಳಸಲಾಗಿದೆ ಎಂದಿದ್ದರು. ಅಲ್ಲದೆ ಇದಕ್ಕೆ ನಮ್ಮ ಬಳಿ ಸಾಕ್ಷ್ಯ ಲಭ್ಯ ಇವೆ ಎಂದಿತ್ತು ಪಾಕಿಸ್ತಾನ. ಈಗ ಅದಕ್ಕೆ ಭಾರತ ತಕ್ಕ ಉತ್ತರ ನೀಡಿದೆ.

ಪಾಕಿಸ್ತಾನದ ಚಳಿ ಬಿಡಿಸಿದ ಭಾರತ!
ಹೌದು, ಪಾಕಿಸ್ತಾನಕ್ಕೆ ಅದೆಷ್ಟೇ ಬುದ್ಧಿ ಮಾತು ಹೇಳಿದರೂ ಬುದ್ಧಿ ಬರುವ ಲಕ್ಷಣ ಮಾತ್ರ ಕಾಣುತ್ತಿಲ್ಲ. ಇದೇ ಕಾರಣಕ್ಕೆ ಭಾರತ ಕೂಡ ಆಗಾಗ ಪಾಕಿಸ್ತಾನದ ಚಳಿ ಬಿಡಿಸುತ್ತೆ. ಈಗಲೂ ಅದೇ ಆಗಿದೆ, 'ಇಬ್ಬರು ಪಾಕಿಸ್ತಾನಿಯರ ಹತ್ಯೆಯಲ್ಲಿ ಭಾರತೀಯ ಏಜೆಂಟರ ಪಾತ್ರವು ಇದೆ' ಎಂದು ಆರೋಪ ಮಾಡಿದ್ದ ಪಾಕಿಸ್ತಾನಕ್ಕೆ ಇದೀಗ ಭಾರತವು ಸರಿಯಾಗಿ ಗುದ್ದು ಕೊಟ್ಟಿದೆ. 'ಇದು ತಲೆಬುಡ ಇಲ್ಲದ ಆಧಾರ ರಹಿತ ಮತ್ತು ದುರುದ್ದೇಶದ ಅಪಪ್ರಚಾರ' ಎಂದಿದೆ ನಮ್ಮ ಭಾರತ. ಈ ಮೂಲಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲಾಗಿದೆ.
ಉಗ್ರರ ತವರು ಪಾಪಿ ಪಾಕಿಸ್ತಾನ
ಹಾಗೇ ಭಾರತ ಇದೀಗ ಪಾಕಿಸ್ತಾನದ ಮಾನ ಹರಾಜು ಹಾಕಿದೆ. 'ಜಗತ್ತಿಗೆ ಗೊತ್ತಿರುವ ರೀತಿ, ಪಾಕಿಸ್ತಾನ ಸುದೀರ್ಘ ಕಾಲದಿಂದ ಭಯೋತ್ಪಾದನೆ ಕೃತ್ಯ, ಸಂಘಟಿತ ಅಪರಾಧವು ಸೇರಿದಂತೆ ಅನಧಿಕೃತ ಚಟುವಟಿಕೆಗೆ ಮೂಲ ನೆಲೆ ಆಗಿದೆ' ಎಂದಿದೆ ಭಾರತ. ಈ ಮೂಲಕ ಪಾಕಿಸ್ತಾನ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಮಾನ ತಾನೇ ಕಳೆದುಕೊಳ್ಳುತ್ತಿದೆ. ಇದೇ ದೇಶ ಉಗ್ರರಿಗೆ ತವರು ಎನ್ನುವ ಆರೋಪವು ಕೂಡ ಇದೆ. ಆದ್ರೂ ಅದನ್ನೆಲ್ಲಾ ಪಾಕಿಸ್ತಾನ ಸರಿಪಡಿಸದೆ ಪದೇ ಪದೇ ಭಾರತದ ವಿರುದ್ಧ ಮಸಲತ್ತು ಮಾಡುತ್ತಿರುವುದು ವಿಪರ್ಯಾಸ.

ಕೆನಡಾ ಬಳಿಕ ಪಾಕಿಸ್ತಾನ ಕಿರಿಕ್!
ಸುಮ್ಮನೆ ಇರದ ಕೆನಡಾ ದೇಶ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿತ್ತು. ಖಲಿಸ್ತಾನಿಗಳ ಪರವಾಗಿ ಇದೇ ಕೆನಡಾ ಮಾತನಾಡಿತ್ತು. ಹೀಗೆ ಮಾತನಾಡುತ್ತಾ, ಭಾರತದ ವಿರುದ್ಧ ಗಂಭೀರ ಆರೋಪವನ್ನ ಮಾಡಿತ್ತು. ಅದಕ್ಕೆಲ್ಲಾ ಭಾರತ ತಲೆಕೆಡಿಸಿಕೊಂಡಿಲ್ಲ ಬಿಡಿ. ಕೆನಡಾ ನೆಲದಲ್ಲಿ ಭಾರತದ ಏಜೆಂಟ್‌ಗಳು ತಮ್ಮ ಪ್ರಜೆಗಳನ್ನ ಹತ್ಯೆ ಮಾಡಿದ್ದಾರೆ ಎಂದು ಕೆನಡಾ ಆರೋಪಿಸಿತ್ತು. ಇದಕ್ಕೆಲ್ಲ ಭಾರತ ತಕ್ಕ ಉತ್ತರ ನೀಡಿತ್ತು. ಆದರೆ ಇದೀಗ ಪಾಪಿ ಪಾಕಿಸ್ತಾನ ಕೂಡ ಅದೇ ರೀತಿಯ ಗಂಭೀರ ಆರೋಪ ಮಾಡಿದ್ದು, ಭಾರತ ಇದೀಗ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ.












Click it and Unblock the Notifications