ಚೀನಾಕ್ಕೆ 'ಪಾಠ', ಭಾರತದಲ್ಲಿ ಉದ್ಯೋಗ ಸೃಷ್ಟಿ: ಕೇಜ್ರಿವಾಲ್ ನೀಡಿದ ಸಲಹೆ ಏನು?
ನವದೆಹಲಿ, ಡಿಸೆಂಬರ್ 14: ಕಳೆದ ವಾರ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಚೀನಾ ದೇಶವು ಗಡಿ ಉಲ್ಲಂಘನೆ ಮಾಡಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಚೀನಾದೊಂದಿಗಿನ ಎಲ್ಲಾ ವ್ಯಾಪಾರವನ್ನು ನಿಲ್ಲಿಸುವಂತೆ ಬುಧವಾರ ಕರೆ ನೀಡಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು ಆಗಿರುವ ಕೇಜ್ರಿವಾಲ್, ''ಚೀನಾದೊಂದಿಗೆ ನಮ್ಮ ವ್ಯಾಪಾರವನ್ನು ಏಕೆ ನಿಲ್ಲಿಸಬಾರದು' ಎಂದು ಕೇಳಿದ್ದಾರೆ.
ಭಾರತದ ಆಮದುಗಳನ್ನು ನಿಲ್ಲಿಸುವುದು ಬೀಜಿಂಗ್‌ಗೆ 'ಪಾಠ' ಕಲಿಸುತ್ತದೆ ಹಾಗೂ ಭಾರತದಲ್ಲಿ ಉದ್ಯೋಗ ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್
'ನಾವು ಚೀನಾದೊಂದಿಗಿನ ನಮ್ಮ ವ್ಯಾಪಾರವನ್ನು ಏಕೆ ನಿಲ್ಲಿಸಬಾರದು? ಚೀನಾದಿಂದ ಆಮದು ಮಾಡಿಕೊಳ್ಳುವ ಹೆಚ್ಚಿನ ಸರಕುಗಳು ಭಾರತದಲ್ಲಿಯೇ ತಯಾರಿಸಲ್ಪಟ್ಟಿವೆ' ಎಂದು ಕೇಂದ್ರ ಸರ್ಕಾರಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
'ಇದರಿಂದ ಚೀನಾಕ್ಕೆ ಪಾಠ ಕಲಿಸಿದಂತಾಗುತ್ತದೆ. ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ' ಎಂದು ದೆಹಲಿ ಸಿಎಂ ಕೇಜ್ರಿವಾಲ್ ಸಲಹೆ ನೀಡಿದ್ದಾರೆ.

ಭಾರತ್- ಚೀನಾ ನಡುವಿನ ವ್ಯಾಪಾರ ವ್ಯತ್ಯಾಸವೆಷ್ಟು?
ಸುದ್ದಿ ಸಂಸ್ಥೆ 'ಪಿಟಿಐ' ಪ್ರಕಾರ, ಭಾರತ-ಚೀನಾ ವ್ಯಾಪಾರ ವ್ಯತ್ಯಾಸ (ಅಂದರೆ, ಆಮದು ಮತ್ತು ರಫ್ತು ವ್ಯತ್ಯಾಸ) ಈ ಆರ್ಥಿಕ ವರ್ಷದ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ 51.5 ಶತಕೋಟಿ ಡಾಲರ್ ದಾಟಿದೆ.
ಮೇಲೆ ತಿಳಿಸಿದ ಅವಧಿಯಲ್ಲಿ ಆಮದುಗಳು (ಚೀನಾದಿಂದ) 60.27 ಶತಕೋಟಿ ಡಾಲರ್‌ನಷ್ಟಿದೆ. ರಫ್ತು (ಚೀನಾಕ್ಕೆ) 8.77 ಶತಕೋಟಿ ಡಾಲರ್‌ನಷ್ಟಿದೆ ಎಂದು ಸಂಸತ್ತಿಗೆ ತಿಳಿಸಲಾಯಿತು.

ಚೀನಾ ತಂಟೆ ಕುರಿತು ಛತ್ತಿಸ್‌ಗಢ ಸಿಎಂ ಹೇಳಿದ್ದೇನು?
ಅಂತರಾಷ್ಟ್ರೀಯ ಗಡಿಯಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸುವ ಚೀನಾದ ಪ್ರಯತ್ನಗಳ ಬಗ್ಗೆ ಛತ್ತಿಸ್‌ಗಢ ಸಿಎಂ ಸಹ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
2014 ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದ 'ಲಾಲ್ ಆಂಖ್' ಘೋಷಣೆಯನ್ನು ನೆನಪಿಸುವ ಮೂಲಕ ಛತ್ತಿಸ್‌ಗಢ ಮುಖ್ಯಮಂತ್ರಿ ಭೂಪೇಂದ್ರ ಭಗೇಲ್ ಲೇವಡಿ ಮಾಡಿದರು.
ಗಡಿಯಲ್ಲಿನ ಅಕ್ರಮಗಳ ಬಗ್ಗೆ ಚೀನಾಕ್ಕೆ 'ಲಾಲ್ ಆಂಖ್' ತೋರಿಸುವುದಾಗಿ ಮೋದಿ ಘೋಷಿಸಿದ್ದರು. ಇದೇ ವೇಳೆ '56 ಇಂಚಿನ ಎದೆ' ಬಗ್ಗೆ ಬಗೇಲ್ ಛೇಡಿಸಿದ್ದಾರೆ.

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದೇನು?
ಅಸ್ಸಾಂ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮಾ ಕೂಡ ಮಾತನಾಡಿ, ವೀರ ಭಾರತೀಯ ಸೈನಿಕರನ್ನು ಶ್ಲಾಘಿಸಿದರು.
ತವಾಂಗ್ ಘಟನೆಯನ್ನು ಖಚಿತಪಡಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಳಂಬ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಆರೋಪದ ಬಗ್ಗೆ ಕಾಂಗ್ರೆಸ್ ಅನ್ನು ಹಿಮಂತ್ ಬಿಸ್ವಾ ಶರ್ಮಾ ತರಾಟೆಗೆ ತೆಗೆದುಕೊಂಡರು.
'ಭಾರತೀಯ ಸೇನೆಯು ಚೀನಿಯರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದೆ. ಯಾವಾಗ ಯಾವ ಮಾಹಿತಿಯನ್ನು ಹಂಚಿಕೊಳ್ಳಬೇಕು...? ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು... ಎಂಬುದನ್ನು ಕಾರ್ಯತಂತ್ರದ ಆಧಾರದ ಮೇಲೆ ನಮ್ಮ ಸೇನೆ ನಿರ್ಧರಿಸುತ್ತದೆ. ರಕ್ಷಣಾ ಸಚಿವರು ಸೇನೆಯ ಒಪ್ಪಿಗೆಯೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ' ಎಂದು ಶರ್ಮಾ ತಿಳಿಸಿದ್ದಾರೆ.

ಚೀನಾ ಉಲ್ಲಂಘಣೆ ಕುರಿತು ಕೇಂದ್ರ ಸರ್ಕಾರ ಹೇಳಿದ್ದೇನು?
ಡಿಸೆಂಬರ್ 9 ರಂದು ಭಾರತ ಮತ್ತು ಚೀನಾದ ಸೈನಿಕರು ತವಾಂಗ್‌ನಲ್ಲಿ ಘರ್ಷಣೆ ನಡೆಸಿದರು. ಭಾರತವು 'ಗಟ್ಟಿ ಹಾಗೂ ದೃಢವಾದ' ರೀತಿಯಲ್ಲಿ ಪ್ರತಿಕ್ರಿಯಿಸಿತು. ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಿತು ಎಂದು ಸರ್ಕಾರ ಹೇಳಿದೆ.
ಭಾರತೀಯ ವಾಯುಪಡೆಯನ್ನು ಸಹ ಚೀನಾ ವಿರುದ್ಧದ ಕ್ರಮಕ್ಕೆ ಕರೆಯಲಾಯಿತು. 'ಕಳೆದ ಕೆಲವು ವಾರಗಳಲ್ಲಿ ಶತ್ರು ಡ್ರೋನ್‌ಗಳನ್ನು ನಿಭಾಯಿಸಲು ನಮ್ಮ ಜೆಟ್‌ಗಳನ್ನು ಸ್ಕ್ರಾಂಬಲ್ ಮಾಡಬೇಕಾದ ಸಂದರ್ಭಗಳು ಎದುರಾಗಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆಂದು ಸುದ್ದಿ ಸಂಸ್ಥೆ 'ಎಎನ್‌ಐ' ತಿಳಿಸಿದೆ.
ಜೂನ್ 2020 ರ ಗಾಲ್ವಾನ್ ಘರ್ಷಣೆಯಂತೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಮತ್ತು ಭಾರತೀಯ ಸೈನಿಕರಿಗೆ ಯಾವುದೇ ಗಂಭೀರ ಗಾಯಗಳಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿಗೆ ತಿಳಿಸಿದರು.
ಮಂಗಳವಾರ ಚೀನಾ ಗಡಿ ಪರಿಸ್ಥಿತಿ 'ಸ್ಥಿರವಾಗಿದೆ' ಎಂದು ಸೇನೆ ಹೇಳಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ತಿಳಿಸಿದೆ.












Click it and Unblock the Notifications