ಪರಮಾಣು ಸ್ಥಾವರಗಳ ಮಾಹಿತಿ ವಿನಿಮಯ ಮಾಡಿಕೊಂಡ ಭಾರತ & ಪಾಕಿಸ್ತಾನ
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಎಲ್ಲವೂ ಸರಿಯಾಗಿಲ್ಲ, ಒಂದು ಕಡೆ ಪಾಕಿಸ್ತಾನ ಮಾಡುವ ಕಿತಾಪತಿ ಪರಿಣಾಮ ಪದೇ ಪದೇ ಯುದ್ಧದ ವಾತಾವರಣ ನಿರ್ಮಾಣ ಆಗುತ್ತಿದೆ. ಅತ್ತ ಉಗ್ರರ ಪೋಷಣೆ ಮಾಡುತ್ತಾ, ಹಾವಿಗೆ ಹಾಲೆರೆದು ಸಾಕುವ ಪಾಪಿ ಪಾಕಿಸ್ತಾನದ ರಾಜಕಾರಣಿಗಳು ಹಾಗೂ ಸೇನೆ ಭಾರತದ ವಿರುದ್ಧ ಕುತಂತ್ರ ಮಾಡುತ್ತಲೇ ಇರುತ್ತದೆ. ಇದೇ ರೀತಿಯಾಗಿ ಮಾಡಿ, ಕೆಲ ತಿಂಗಳ ಹಿಂದಷ್ಟೇ ಸರಿಯಾಗಿ ಭಾರತದ ಕೈಯಲ್ಲಿ ಏಟು ತಿಂದಿತ್ತು ಪಾಕಿಸ್ತಾನ. ಹೀಗಿದ್ದಾಗ ಇಂದು ಪರಮಾಣು ಸ್ಥಾವರಗಳ ಮಾಹಿತಿ ವಿನಿಮಯ ಮಾಡಿಕೊಂಡಿದೆ ಭಾರತ & ಪಾಕಿಸ್ತಾನ.
ಭಾರತ ಪರಮಾಣು ಅಸ್ತ್ರ ಹೊಂದಿರುವ ಜಗತ್ತಿನ ಕೆಲವೇ ದೇಶಗಳ ಪೈಕಿ ಒಂದಾಗಿದ್ದರೆ, ಪಾಕ್ ಕೂಡ ಅವರಿವರ ಕಾಲು ಹಿಡಿದು ಪರಮಾಣು ಅಸ್ತ್ರ ತಯಾರಿಸಿಕೊಂಡಿತ್ತು. ಹೀಗಿದ್ದಾಗ ಎರಡೂ ದೇಶಗಳ ನಡುವೆ 1988 ಡಿಸೆಂಬರ್ 31ರ ಸಮಯದಲ್ಲಿ ಒಪ್ಪಂದ ಒಂದು ಏರ್ಪಟ್ಟಿತ್ತು. ಒಪ್ಪಂದದ ಪ್ರಕಾರ ಈಗ ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳು ತಮ್ಮಲ್ಲಿನ ಪರಮಾಣು ಸ್ಥಾವರ ಹಾಗೂ ಪರಮಾಣು ಮೂಲಸೌಕರ್ಯ ಪಟ್ಟಿ ಪರಸ್ಪರ ವಿನಿಮಯ ಮಾಡಿಕೊಂಡಿದ್ದಾರೆ. ಈ ಒಪ್ಪಂದವು ಬಹುಮುಖ್ಯವಾಗಿದ್ದು, ಎರಡೂ ದೇಶಗಳು ಪರಸ್ಪರರ ಪರಮಾಣ ಮೂಲಸೌಕರ್ಯ ಪ್ರದೇಶವನ್ನು ಗುರಿಯಾಗಿಸಿ ದಾಳಿ ಮಾಡುವುದನ್ನು ಈ ಒಪ್ಪಂದ ತಡೆಯಲು ಸಹಾಯಕವಾಗಿದೆ.

ಯುದ್ಧದ ನಂತರ ಮಹತ್ವದ ಬೆಳವಣಿಗೆ
2025 ಏಪ್ರಿಲ್ & ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ಪಾಪಿ ಪಾಕಿಸ್ತಾನ ಮಾಡಿದ್ದ ಕಿತಾಪತಿಗೆ ಭಾರತ ಸರಿಯಾದ ಉತ್ತರ ಕೊಟ್ಟಿತ್ತು. ಉಗ್ರರನ್ನು ನಮ್ಮ ದೇಶದ ಒಳಗೆ ನುಗ್ಗುವಂತೆ ಮಾಡಿ, ಭಾರತದಲ್ಲಿ ದಾಳಿ ಮಾಡಿಸಿದ್ದ ಪಾಕಿಸ್ತಾನಕ್ಕೆ ಸರಿಯಾಗಿಯೇ ಬುದ್ಧಿ ಕಲಿಸಲಾಗಿತ್ತು. ಈ ಘಟನೆ ನಂತರ ಇದೇ ಮೊದಲ ಬಾರಿಗೆ, ಎರಡೂ ದೇಶಗಳ ನಡುವೆ ಮಹತ್ವದ ಮಾಹಿತಿ ವಿನಿಮಯ ಆಗಿದೆ.
ರಾಜತಾಂತ್ರಿಕ ಮಾರ್ಗದ ಮೂಲಕ ಮಾಹಿತಿ ವಿನಿಮಯ
ಅಂದಹಾಗೆ ನವದೆಹಲಿ & ಇಸ್ಲಾಮಾಬಾದ್‌ನಲ್ಲಿ ಈಗ ಏಕಕಾಲದಲ್ಲಿ ಪಟ್ಟಿಗಳ ವಿನಿಮಯ ನಡೆದಿದೆ ಎಂದು ಮಾಹಿತಿ ನೀಡಲಾಗಿದ್ದು, ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಮಾಣು ಸ್ಥಾವರ ಹಾಗು ಪರಮಾಣು ಮೂಲಸೌಕರ್ಯಗಳ ಪಟ್ಟಿ ಹಂಚಿಕೊಂಡಿವೆ ಎರಡೂ ದೇಶಗಳು. ಭಾರತ & ಪಾಕ್ ನಡುವೆ 1988ರ ಡಿಸೆಂಬರ್ 31ರಂದು ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ 1991ರ ಜನವರಿ 27ರಂದು ಜಾರಿಗೆ ಬಂದಿತ್ತು ಈ ಮಹತ್ವದ ಒಪ್ಪಂದ.
ಒಟ್ನಲ್ಲಿ ಪಾಕಿಸ್ತಾನದ ಬುದ್ಧಿ ಬದಲಾಗುವುದಿಲ್ಲ, ಸದಾ ಉಗ್ರರನ್ನು ಪೋಷಣೆ ಮಾಡುವ ಪಾಕ್ ನೆಲದಲ್ಲಿ ಪದೇ ಪದೇ ಉಗ್ರರಿಂದಲೇ ಕಂಟಕ ಎದುರಾಗುತ್ತಿದೆ. ಉಗ್ರರು ಕೂಡ ಪದೇ ಪದೇ ಪಾಕ್ ನೆಲದ ಪರಮಾಣು ಸ್ಥಾವರಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಕೂಡ, ಪಾಕಿಸ್ತಾನ ಉಗ್ರರಿಗೆ ಬೆಂಬಲ ನೀಡುತ್ತಿದ್ದು ಪರಮಾಣು ಅಸ್ತ್ರಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ಹೆಣಗಾಡುತ್ತಿದೆ.












Click it and Unblock the Notifications