Independence Day 2023: 'ಹರ್ ಘರ್ ತಿರಂಗ' ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆದ 8 ಕೋಟಿಗೂ ಅಧಿಕ ಸೆಲ್ಫಿಗಳು
ನವದೆಹಲಿ, ಆಗಸ್ಟ್ 15: ಮಂಗಳವಾರ ಮಧ್ಯಾಹ್ನ 12 ಗಂಟೆಯ ವರೆಗೆ ಕೇಂದ್ರ ಸರ್ಕಾರದ ಹರ್ ಘರ್ ತಿರಂಗ ವೆಬ್‌ಸೈಟ್‌ನಲ್ಲಿ 88 ದಶಲಕ್ಷಕ್ಕೂ ಹೆಚ್ಚು ಜನರು ಸೆಲ್ಫಿಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಭಾನುವಾರದಂದು ಪ್ರಧಾನಿ ಮೋದಿ ಅವರು ರಾಷ್ಟ್ರಧ್ವಜದೊಂದಿಗೆ ಸೆಲ್ಫಿಗಳನ್ನು ಅಪ್‌ಲೋಡ್ ಮಾಡಲು ಜನರಿಗೆ ಕೋರಿದ್ದರು.
ಮಂಗಳವಾರ ಮಧ್ಯಾಹ್ನ 12 ಗಂಟೆ ವರೆಗೆ ತ್ರಿವರ್ಣ ಧ್ವಜದೊಂದಿಗೆ 8,81,21,591 (88 ಮಿಲಿಯನ್) ಸೆಲ್ಫಿಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ವರದಿಯಾಗಿದೆ. ಆಗಸ್ಟ್ 13 ರಿಂದ 15 ರ ವರೆಗೆ ಮನೆಯಲ್ಲಿ ಧ್ವಜಾರೋಹಣ ಮಾಡಲು ವೆಬ್‌ಸೈಟ್ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಲಾಗಿತ್ತು. 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಮೂರು ದಿನಗಳ 'ಹರ್ ಘರ್ ತಿರಂಗ' ಅಭಿಯಾನವನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿತ್ತು.

ಹರ್ ಘರ್ ತಿರಂಗ ವೆಬ್‌ಸೈಟ್‌ನ ಮುಖಪುಟವು ಧ್ವಜದೊಂದಿಗೆ ಸೆಲ್ಫಿಯನ್ನು ಅಪ್‌ಲೋಡ್ ಮಾಡುವ ಆಯ್ಕೆಯನ್ನು ತೋರಿಸುತ್ತದೆ. ಹರ್ ಘರ್ ತಿರಂಗಾ ವೆಬ್‌ಸೈಟ್‌ನ ಮುಖಪುಟದಲ್ಲಿ ಫ್ಲ್ಯಾಗ್ ಮತ್ತು ಡಿಜಿಟಲ್ ತಿರಂಗದೊಂದಿಗೆ ಸೆಲ್ಫಿ ಅಪ್‌ಲೋಡ್ ಮಾಡಲು ಎರಡು ಆಯ್ಕೆಗಳಿವೆ.
ಕೆಳಗೆ ಸ್ಕ್ರೋಲ್ ಮಾಡಿದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್, ನಟ ಅನುಪಮ್ ಖೇರ್ ಮತ್ತು ಗಾಯಕ ಕೈಲಾಶ್ ಖೇರ್ ಸೇರಿದಂತೆ ರಾಷ್ಟ್ರಧ್ವಜದೊಂದಿಗೆ ಕೇಂದ್ರ ಸಚಿವರು, ನಟರು ಮತ್ತು ಕ್ರೀಡಾಪಟುಗಳ ಫೋಟೋಗಳನ್ನು ನೀವು ಕಾಣಬಹುದು.

ಪ್ರಧಾನಿ ಮೋದಿ ಅವರು ಕಳೆದ ವರ್ಷ ಜುಲೈ 22 ರಂದು 'ಹರ್ ಘರ್ ತಿರಂಗ' ಅಭಿಯಾನವನ್ನು ಪ್ರಾರಂಭಿಸಿದರು.
ಈ ಅಭಿಯಾನವನ್ನು ಉತ್ತೇಜಿಸುವ ಸಲುವಾಗಿ, ಪ್ರಧಾನಿ ಮೋದಿ ಭಾನುವಾರ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರೊಪೈಲ್ ಚಿತ್ರದಲ್ಲಿ ರಾಷ್ಟ್ರಧ್ವಜವನ್ನು ಪೋಸ್ಟ್ ಮಾಡಿದ್ದಾರೆ.

ಇಡೀ ವಾರ ಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳ ಭಾಗವಾಗಿ, ಕೇಂದ್ರ ಸಚಿವರು ಶುಕ್ರವಾರ ದೆಹಲಿಯ ಪ್ರಗತಿ ಮೈದಾನದಲ್ಲಿ 'ಹರ್ ಘರ್ ತಿರಂಗ' ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದರು. ಉಪಾಧ್ಯಕ್ಷ ಜಗದೀಪ್ ಧನಕರ್ ಅವರು ರ್ಯಾಲಿಗೆ ಚಾಲನೆ ನೀಡಿದರು. ಮಥುರಾ ರಸ್ತೆ, ಭೈರೋನ್ ರಸ್ತೆ, ಇಂಡಿಯಾ ಗೇಟ್, ಪ್ರಗತಿ ಮೈದಾನದ ಸುರಂಗ ಮಾರ್ಗದಲ್ಲಿ ರ್ಯಾಲಿ ಸಾಗಿತು.
ಕೇಂದ್ರ ಸಚಿವ ಕಿಶನ್ ರೆಡ್ಡಿ ಬೈಕ್ ಸವಾರಿ ಮಾಡುತ್ತಿದ್ದರೆ, ಅನುರಾಗ್ ಠಾಕೂರ್ ಕೈಯಲ್ಲಿ ಭಾರತೀಯ ಧ್ವಜವನ್ನು ಹಿಡಿದುಕೊಂಡು ಹಿಂದೆ ಕುಳಿತಿರುವ ವಿಡಿಯೊವನ್ನು ಎಎನ್‌ಐ ಹಂಚಿಕೊಂಡಿದೆ. ರ್ಯಾಲಿಯಲ್ಲಿ 'ಭಾರತ್ ಮಾತಾ ಕೀ ಜೈ' ಘೋಷಣೆಗಳು ಮೊಳಗಿದವು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications