Sugar Price: ಸಕ್ಕರೆ ರಫ್ತಿಗೆ ಅನಿರ್ದಿಷ್ಟಾವಧಿ ನಿರ್ಬಂಧ ಹೇರಿದ ಕೇಂದ್ರ
ದೇಶದಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಣದಲ್ಲಿಡಲು, ಎಥೆನಾಲ್ ಉತ್ಪಾದನೆಯ ಅವಶ್ಯಕತೆಗಳನ್ನು ಪೂರೈಸಲು ಮತ್ತು ಸಕ್ಕರೆ ಉತ್ಪಾದನೆ ಋತುವಿನಲ್ಲಿ ಅಗತ್ಯದಷ್ಟು ದಾಸ್ತಾನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸಕ್ಕರೆ ರಫ್ತಿನ ಮೇಲೆ ನಿರ್ಬಂಧಗಳನ್ನು ವಿಸ್ತರಣೆ ಮಾಡಿದೆ.
ಅಕ್ಟೋಬರ್ 2022 ರಲ್ಲಿ, ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್‌ಟಿ) ಕಚ್ಚಾ, ಬಿಳಿ ಮತ್ತು ಸಂಸ್ಕರಿಸಿದ ಸಕ್ಕರೆ ರಫ್ತನ್ನು ನಿರ್ಬಂಧಿಸಿತ್ತು. ರಫ್ತುದಾರರು ವಿದೇಶದಲ್ಲಿ ಸಕ್ಕರೆ ಮಾರಾಟ ಮಾಡಲು ಆಹಾರ ಸಚಿವಾಲಯದಿಂದ ಅನುಮತಿ ಪಡೆಯಬೇಕಾಗುತ್ತದೆ. 2023ರ ಅಕ್ಟೋಬರ್ 31ರವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ಈಗ ಅಂತಿಮ ದಿನ ನಿಗದಿ ಮಾಡದೇ ಮುಂದಿನ ಆದೇಶದವರೆಗೆ ಸಕ್ಕರೆ ರಫ್ತಿಗೆ ನಿರ್ಬಂಧ ಹೇರಲಾಗಿದೆ.

ಆದರೂ, ಸಿಎಕ್ಸ್‌ಎಲ್ ಮತ್ತು ಟಿಆರ್ ಕ್ಯು ಕೋಟಾ ಅಡಿಯಲ್ಲಿ ಯುರೋಪಿಯನ್ ಯೂನಿಯನ್ ಮತ್ತು ಯುಎಸ್‌ಗೆ ರಫ್ತು ಮಾಡಲಾದ ಸಕ್ಕರೆಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಡಿಜಿಎಫ್‌ಟಿ ಸ್ಪಷ್ಟಪಡಿಸಿದೆ.
ಕೈಕೊಟ್ಟ ಮುಂಗಾರು ಮಳೆ
ಭಾರತದ ಸಕ್ಕರೆ ಋತುವು ಅಕ್ಟೋಬರ್ ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಕಳೆದ 5 ವರ್ಷಗಳಲ್ಲಿ ಈ ಬಾರಿ ಕಡಿಮೆ ಮಳೆಯಾಗಿರುವ ಪರಿಣಾಮ ಕಬ್ಬು ಉತ್ಪಾದನೆ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ಪ್ರಮುಖ ಕಬ್ಬು ಉತ್ಪಾದನಾ ರಾಜ್ಯಗಳಲ್ಲೇ ಮಳೆ ಕೊರತೆ ಕೃಷಿ ಮೇಲೆ ಭಾರಿ ಪರಿಣಾಮ ಬೀರಿದೆ.
ಅಸ್ತಿತ್ವದಲ್ಲಿರುವ ಅಧಿಸೂಚನೆಯು ಅಕ್ಟೋಬರ್ 31 ರಂದು ಮುಕ್ತಾಯಗೊಳ್ಳುತ್ತಿರುವುದರಿಂದ ಸರ್ಕಾರವು ಹೊಸ ಅಧಿಸೂಚನೆಯನ್ನು ತರಬೇಕಾಯಿತು ಎಂದು ರೇಣುಕಾ ಶುಗರ್ಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಅತುಲ್ ಚತುರ್ವೇದಿ ಹೇಳಿದರು.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಬುಧವಾರದಂದು, ಅಖಿಲ ಭಾರತ ಸರಾಸರಿ ಚಿಲ್ಲರೆ ಸಕ್ಕರೆ ದರವು ಒಂದು ಕೆಜಿಗೆ ₹43.99 ಆಗಿತ್ತು, ತಿಂಗಳಿನಿಂದ ತಿಂಗಳಿಗೆ 0.6% ಮತ್ತು ಹಿಂದಿನ ವರ್ಷಕ್ಕಿಂತ 3% ಹೆಚ್ಚಾಗಿದೆ.
ಸಕ್ಕರೆ ಉತ್ಪಾದನೆ ಕುಸಿತ
"ಎಲ್ ನಿನೋ ಪರಿಣಾಮ ಮಳೆ ಕಡಿಮೆಯಾದ ಕಾರಣ 2023-24 ಸಕ್ಕರೆ ಋತುವಿನಲ್ಲಿ 27.5-28 ಮಿಲಿಯನ್ ಟನ್ ಉತ್ಪಾದನೆಯಾಗುವ ಸಾಧ್ಯತೆ ಇದೆ, ಆದರೆ ದೇಶೀಯ ಬಳಕೆಯು 30 ಮಿಲಿಯನ್ ಟನ್‌ಗಳಾಗಿದೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತವು ಈ ಋತುವಿನಲ್ಲಿ ಸಕ್ಕರೆಯಿಂದ 4.5 ಮಿಲಿಯನ್ ಟನ್ ಎಥೆನಾಲ್ ಅನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ, ಕಳೆದ ಋತುವಿನಲ್ಲಿ 4.3 ಮಿಲಿಯನ್ ಟನ್ ಎಥೆನಾಲ್ ಉತ್ಪಾದನೆ ಮಾಡಿತ್ತಯ. ಸಕ್ಕರೆ ಉತ್ಪಾದನೆ ಕಡಿಮೆಯಾದರೆ ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಬದಲಾವಣೆಯು ಸಕ್ಕರೆ ಋತುವಿನ ಕೊನೆಯಲ್ಲಿ ಪೂರೈಕೆ ಕಡಿಮೆ ಮಾಡಬಹುದು.
2021-22 ಋತುವಿನಲ್ಲಿ ಬ್ರೆಜಿಲ್ ಅನ್ನು ಮೀರಿಸಿ ಭಾರತ ವಿಶ್ವದ ಅತಿದೊಡ್ಡ ಸಕ್ಕರೆ ಉತ್ಪಾದಕ ಮತ್ತು ಎರಡನೇ ಅತಿದೊಡ್ಡ ರಫ್ತುದಾರನಾಗಿದೆ. ಕಳೆದ ವರ್ಷ ರಫ್ತು ನಿಯಂತ್ರಣಗಳನ್ನು ವಿಧಿಸಿತು, ಗಿರಣಿ-ವಾರು ಕೋಟಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. 2022-23 ಬೆಳೆ ವರ್ಷದ ಅಂತ್ಯದ ವೇಳೆಗೆ (ಜುಲೈ-ಜೂನ್), ಸ್ಥಳೀಯ ಸಕ್ಕರೆ ಕಾರ್ಖಾನೆಗಳು 6.2 ಮೆ.ಟನ್ ಸಕ್ಕರೆಯನ್ನು ರಫ್ತು ಮಾಡಿವೆ.












Click it and Unblock the Notifications