Reservation in IITs: ದೇಶದ ಟಾಪ್ 5 ಐಐಟಿಗಳಲ್ಲಿ ಶೇ.98ರಷ್ಟು ಸಿಬ್ಬಂದಿ ಮೇಲ್ಜಾತಿಯವರೇ!
ಹೊಸದಿಲ್ಲಿ, ಜನವರಿ 13: ಭಾರತದಲ್ಲಿನ ವಿಜ್ಞಾನ ಕ್ಷೇತ್ರದಲ್ಲಿ ಮೇಲ್ಜಾತಿಗಳೇ (ಸಾಮಾನ್ಯ ವರ್ಗ) ಪ್ರಾಬಲ್ಯ ಸಾಧಿಸಿವೆ. ಸರ್ಕಾರ ನೀಡಿರುವ ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಟಾನ ಆಗಿಲ್ಲ ಎಂದು ವರದಿಯೊಂದು ಬಹಿರಂಗಪಡಿಸಿದೆ. ಪ್ರಮುಖ ವಿಜ್ಞಾನ ನಿಯತಕಾಲಿಕೆ ನೇಚರ್ (Nature)ನಲ್ಲಿ ಗುರುವಾರ ಪ್ರಕಟವಾದ ಪತ್ರಕರ್ತ ಅಂಕುರ್ ಪಲಿವಾಲ್ ಅವರ ಲೇಖನದಲ್ಲಿ ಈ ಮಾಹಿತಿ ಬಹಿರಂಗವಾಗಿದ್ದು, ಹೆಸರಿಗಷ್ಟೇ ಮೀಸಲಾತಿ ಎನ್ನುವಂತಾಗಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ)ಯಂತಹ ಜನಪ್ರಿಯ ಹಾಗೂ ಪ್ರಮುಖ ಸಂಸ್ಥೆಗಳಲ್ಲಿ ಆದಿವಾಸಿ ಮತ್ತು ದಲಿತ ಸಮುದಾಯದ ವಿದ್ಯಾರ್ಥಿಗಳು ಹಾಗೂ ಪ್ರೊಪೆಸರ್‌ಗಳ ಸಂಖ್ಯೆ ಬಹಳಷ್ಟು ಕಡಿಮೆ ಇದೆ ಎಂಬುದು ನೇಚರ್‌ನಲ್ಲಿ ಪ್ರಕಟವಾದ ಲೇಖನ ಬಹಿರಂಗಪಡಿಸಿದೆ. ಆರ್‌ಟಿಐ ಹಾಗೂ ಇತರ ಸರ್ಕಾರಿ ಮೂಲಗಳಿಂದ ಮಾಹಿತಿ ಸಂಗ್ರಹಿಸಲಾಗಿದ್ದು, ಈ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಶೇ.7.5ರಷ್ಟು ಹಾಗೂ ದಲಿತರಿಗೆ ಮೀಸಲಾದ ಶೇ.15ರಷ್ಟು ಸ್ಥಾನಗಳನ್ನು ಭರ್ತಿ ಮಾಡಿಲ್ಲ ಎಂದು ತಿಳಿದು ಬಂದಿದೆ.
ಪದವಿಯಿಂದಲೂ ವಿಜ್ಞಾನ ಕೋರ್ಸ್‌ಗಳಲ್ಲಿ ಆದಿವಾಸಿ ಮತ್ತು ದಲಿತರ ಪ್ರಾತಿನಿಧ್ಯ ಬಹಳಷ್ಟು ಕಡಿಮೆಯಿದೆ ಎಂದು ವರದಿ ಹೇಳಿದೆ. ಪದವಿಯ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಹಾಗೂ ಗಣಿತಕ್ಕೆ ಸಂಬಂಧಿಸಿದ ಕೋರ್ಸ್‌ಗಳಲ್ಲಿ ಆದಿವಾಸಿ ಸಮುದಾಯದವರು ಶೇ.5ಕ್ಕಿಂತಲೂ ಕಡಿಮೆ ಇದ್ದಾರೆ. ಈ ಕೋರ್ಸ್‌ಗಳಲ್ಲಿ ದಲಿತರ ಪ್ರಾತಿನಿಧ್ಯ ಕೂಡ ಆದಿವಾಸಿಗಳ ರೀತಿಯೇ ಇದೆ.

ಈ ಟ್ರೆಂಡ್ ಗಮನಿಸಿದರೆ ಕಲಾ ವಿಭಾಗದಲ್ಲಿಯೇ ದಲಿತ ಮತ್ತು ಆದಿವಾಸಿ ಸಮುದಾಯದವರ ಪ್ರಾತಿನಿಧ್ಯ ಹೆಚ್ಚಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ದುಮ್ಕಾದ ಸಿಡೋ ಕನ್ಹು ಮುರ್ಮು ವಿಶ್ವವಿದ್ಯಾಲಯದ ಉಪ ಕುಲಪತಿ ಹಾಗೂ ಗಣಕ ತಜ್ಞ ಸೋನಾಝರೀಯಾ ಮಿಂಜ್, ಕಲಾ ವಿಭಾಗ ಹೆಚ್ಚು ಜನಪ್ರಿಯ ಎಂದು ಇಲ್ಲಿ ಹೆಚ್ಚಿನ ದಲಿತ, ಆದಿವಾಸಿ ವಿದ್ಯಾರ್ಥಿಗಳಿಲ್ಲ. ಗ್ರಾಮೀಣ ಭಾಗದ ಪ್ರೌಢ ಶಾಲೆಗಳಲ್ಲಿ, ಅದರಲ್ಲೂ ಆದಿವಾಸಿಗಳಯ ವ್ಯಾಸಂಗ ಮಾಡುವ ಶಾಲೆಗಳಲ್ಲಿ ವಿಜ್ಞಾನ ವಿಷಯದ ಶಿಕ್ಷಕರು ಇರುವುದು ತೀರಾ ವಿರಳ. ಇದು ಕೂಡ ಆ ವಿದ್ಯಾರ್ಥಿಗಳು ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪದವಿಯಲ್ಲಿದ್ದಂತೆ ಸ್ನಾತಕೋತ್ತರ ಪದವಿಯ ಸ್ಟೆಮ್ ಕೋರ್ಸ್‌ಗಳಲ್ಲಿ ಪ್ರತಿಷ್ಟಿತ ಸಂಸ್ಥೆಗಳು ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಮೀಸಲಾಗಿರುವ ಸೀಟುಗಳನ್ನು ಭರ್ತಿ ಮಾಡಿಲ್ಲ. ಈ ಪ್ರಮಾಣ ಪಿಎಚ್‌ಡಿ ಮಟ್ಟಕ್ಕೆ ಬಂದಾಗ ಇನ್ನು ಕಡಿಮೆಯಾಗಿದೆ. ಅದರಲ್ಲೂ ಅಗ್ರ ಶ್ರೇಯಾಂಕಿತ ಐಐಟಿಗಳಾದ ದಿಲ್ಲಿ ಐಐಟಿ, ಬಾಂಬೆ ಐಐಟಿ, ಮದ್ರಾಸ್ ಐಐಟಿ, ಕಾನ್ಪುರ ಐಐಟಿಗಳಲ್ಲಿ ಖರಗ್‌ಪುರ ಐಐಟಿಯ 2020ರ ಪಿಎಚ್‌ಡಿ ಪ್ರೋಗ್ರಾಂಗಳನ್ನು ಗಮನಿಸಿದರೆ ಸರಾಸರಿ ಶೇ.10ರಷ್ಟು ದಲಿತರು ಮತ್ತು ಶೇ.2ರಷ್ಟು ಆದಿವಾಸಿಗಳ ಪ್ರಾತಿನಿಧ್ಯ ಕಂಡುಬರುತ್ತದೆ. ಈ ಪ್ರಮಾಣ ಮಧ್ಯಮ ಶ್ರೇಯಾಂಕಿತ ಐಐಟಿಗಳಾದ ಧನ್ಬಾದ್, ಪಾಟ್ನಾ, ಗುವಾಹಟಿ, ರೋಪರ್ ಮತ್ತು ಗೋವಾ ಐಐಟಿಗಳಲ್ಲಿ ಇರುವುದಕ್ಕಿಂತಲೂ ಕಡಿಮೆ ಇದೆ.
ಇನ್ನು, ಅಗ್ರ 5 ಐಐಟಿಗಳಲ್ಲಿ ಪಿಎಚ್‌ಡಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳ ಪ್ರಮಾಣದಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರ ಪ್ರಮಾಣ ಕೂಡ ಕಡಿಮೆ ಇದ್ದು, ನಿಗದಿಪಡಿಸಿದ ಮೀಸಲಾತಿ ಪೂರ್ತಿಯಾಗಿ ಭರ್ತಿಯಾಗಿಲ್ಲ ಎಂದು ವರದಿಗಳು ಹೇಳಿವೆ. ಬೆಂಗಳೂರಿನಲ್ಲಿರುವ ಐಐಎಸ್‌ಸಿಯಲ್ಲೂ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಈ ಸಂಸ್ಥೆಗಳ ಮುಖ್ಯಸ್ಥರು ಮೀಸಲಾತಿ ನೀತಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸಬೇಕೆಂದು ವರದಿಯಲ್ಲಿ ಹೇಳಲಾಗಿದೆ.
ಟಾಪ್ 5 ಐಐಟಿ ಹಾಗೂ ಐಐಎಸ್‌ಸಿಯಲ್ಲಿ ಶೇ.98ರಷ್ಟು ಪ್ರೊಪೆಸರ್‌ಗಳು ಹಾಗೂ ಶೇ.90ರಷ್ಟು ಸಹ ಮತ್ತು ಸಹಾಯಕ ಪ್ರೊಪೆಸರ್‌ಗಳು ಮೇಲ್ಜಾತಿಯ ಅಥವಾ ಸವಲತ್ತು ಹೊಂದಿರುವ ಜಾತಿಗಳಿಗೆ ಸೇರಿದವರಾಗಿದ್ದಾರೆ ಎಂದು ವರದಿ ಹೇಳಿದೆ. ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್)ನಲ್ಲಿ ಎಲ್ಲ ಪ್ರೊಪೆಸರ್‌ಗಳು ಮೇಲ್ವರ್ಗಕ್ಕೆ ಸೇರಿದವರಾಗಿದ್ದು, ಇಲ್ಲಿ ಯಾವುದೇ ರೀತಿಯ ಮೀಸಲಾತಿ ಅನುಷ್ಟಾನ ಆಗಿಲ್ಲ.












Click it and Unblock the Notifications