ಮೋದಿ ವಿರುದ್ಧ ಒಂದಾದ ಬಿಜೆಪಿಯೇತರ ಪಕ್ಷಗಳು?
ಬೆಂಗಳೂರು, ನವೆಂಬರ್ 21 : ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶ ದೇಶದಲ್ಲಿ ಬಿಜೆಪಿಯೇತರ ಪಕ್ಷಗಳು ಒಗ್ಗೂಡಲು ದಿಕ್ಸೂಚಿ ಆಗಿದೆಯೇ?. ಶುಕ್ರವಾರ ನಡೆದ ನಿತೀಶ್ ಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ಇಂತಹ ಪ್ರಶ್ನೆ ಹುಟ್ಟಿಕೊಂಡಿದೆ. ಪ್ರಮಾಣ ವಚನ ಸಮಾರಂಭದಲ್ಲಿ ವಿವಿಧ ಪಕ್ಷಗಳ ನಾಯಕರು ಕೈ ಜೋಡಿಸಿದ್ದಾರೆ.
2014ರ ಲೋಕಸಭೆ ಚುನಾವಣೆ ಫಲಿತಾಂಶ ದೇಶದಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಹುಟ್ಟು ಹಾಕಿತ್ತು. ಆದರೆ, ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶದ ನಂತರ ಬಿಜೆಪಿಯೇತರ ಶಕ್ತಿಗಳು ಒಂದಾದಂತೆ ಕಾಣುತ್ತಿದೆ. [ಬಿಹಾರ: ನಿತೀಶ್ ಹ್ಯಾಟ್ರಿಕ್, ನಡೆಯಲಿಲ್ಲ ಮೋದಿ ಟ್ರಿಕ್]
ಶುಕ್ರವಾರ ಬಿಹಾರದಲ್ಲಿ ಜೆಡಿಯು, ಆರ್‌ಜೆಡಿ ಮಹಾಮೈತ್ರಿ ಕೂಟ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನಿತೀಶ್ ಕುಮಾರ್ ಅವರು 5ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬಿಜೆಪಿಯೇತರ ಪಕ್ಷಗಳ ನಾಯಕರು ಸಾಕ್ಷಿಯಾಗಿದ್ದರು. [ಬಿಹಾರ ಫಲಿತಾಂಶ : ಯಾರು, ಏನು ಹೇಳಿದರು?]
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಂತಾದವರು ಸಮಾರಂಭಕ್ಕೆ ಆಗಮಿಸಿದ್ದರು. ಬಿಜೆಪಿಯೇತರ ಪಕ್ಷಗಳ ಶಕ್ತಿ ಪ್ರದರ್ಶನ ಚಿತ್ರಗಳಲ್ಲಿ ನೋಡಿ..... [ಪಿಟಿಐ ಚಿತ್ರಗಳು]

ಒಂದೇ ವೇದಿಯಲ್ಲಿ ನಾಯಕರ ಸಮಾಗಮ
ಬಿಹಾರ ಚುನಾವಣೆಗೆ ಮೊದಲು ಪರಸ್ಪರ ಮುಖ ನೋಡಲು ಇಷ್ಟಪಡದ ನೇತಾರರು ಚುನಾವಣೆ ಫಲಿತಾಂಶದ ಬಳಿಕ ಒಂದೇ ವೇದಿಕೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ನಿತೀಶ್ ಕುಮಾರ್ ಅವರು 5ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಎಲ್ಲರೂ ಸಾಕ್ಷಿಯಾಗಿದ್ದಾರೆ. [ಬಿಹಾರ: ಎಲ್ರಾ ಕಾಲ್ ಎಳಿತದೇ ಕಾಲ, ಮೋದಿನೂ ಬಿಡೋಲ್ಲಾ]

ಬಿಹಾರಕ್ಕೆ ಬಂದ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಪ್ರಮಾಣ ವಚನ ಸಮಾರಂಭಕ್ಕೆ ಬಂದಿದ್ದರು. ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದ ಲಾಲೂ ಪ್ರಸಾದ್ ಯಾದವ್ ಕೈ ಕುಲುಕಿ ಫೋಟೋಗೆ ಪೋಸ್ ನೀಡಿದರು. [ಪ್ರಧಾನಿ ಮೋದಿಗೆ ಲಾಲೂ ಒಡ್ದಿದ ಅಪರೂಪದ ಚಾಲೆಂಜ್]

ಪ್ರಮಾಣ ವಚನಕ್ಕೆ ಬಂದಿದ್ರು ರಾಹುಲ್
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಚುನಾವಣೆಯ ಪ್ರಚಾರ ಸಮಯದಲ್ಲಿ ಲಾಲೂ ಜೊತೆ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ, ಶುಕ್ರವಾರ ರಾಹುಲ್-ಲಾಲು ಪರಸ್ಪರ ಅಪ್ಪಿಕೊಂಡು ಸಂಭ್ರಮ ಹಂಚಿಕೊಂಡರು. ನಿತೀಶ್ ಕುಮಾರ್ ಅವರ ಜೊತೆ ರಾಹುಲ್ ಮಾತುಕತೆ ನಡೆಸಿದರು. [ಜನತೆಯನ್ನು ವಂಚಿಸಿದ ಮೋದಿಗೆ ಶಿಕ್ಷೆಯಾಗಬೇಕು: ರಾಮ್]

ಕೈ ಜೋಡಿಸಿದ ಎಡಪಕ್ಷ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಮಾಣ ವಚನ ಸಮಾರಂಭಕ್ಕೆ ಬಂದಿದ್ದರು. ಬಿಹಾರದಲ್ಲಿನ ಆರ್‌ಜೆಡಿ, ಜೆಡಿಯು ಮತ್ತು ಕಾಂಗ್ರೆಸ್ ಮಹಾ ಮೈತ್ರಿ ಯಶಸ್ವಿಯಾದ ನಂತರ ಬಿಜೆಪಿಯೇತರ ಪಕ್ಷಗಳು ಒಂದಾಗಿವೆ.

ಸಮಾರಂಭಕ್ಕೆ ಹೋದಿದ್ದರು ಸಿದ್ದರಾಮಯ್ಯ
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿತೀಶ್ ಕುಮಾರ್ ಅವರ ಪ್ರಮಾಣ ವಚನ ಸಮಾರಂಭಕ್ಕೆ ಹೋಗಿದ್ದರು. ಮೊದಲಿನಿಂದಲೂ ಬಿಜೆಪಿ ಮತ್ತು ಮೋದಿ ವಿರೋಧಿಸುವ ಸಿದ್ದರಾಮಯ್ಯ ಸಮಾರಂಭಕ್ಕೆ ತೆರಳಿದ್ದು ಕುತೂಹಲಗಳಿಗೆ ಕಾರಣವಾಗಿದೆ.

ಬಿಹಾರದಲ್ಲಿ ಕಾಣಿಸಿಕೊಂಡ ಎಚ್.ಡಿ.ದೇವೇಗೌಡ
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನಿತೀಶ್ ಕುಮಾರ್ ಪ್ರಮಾಣ ವಚನಕ್ಕೆ ಹೋಗಿದ್ದರು. ತೃತೀಯರಂಗದಲ್ಲಿನ ಮುಂಚೂಣಿ ನಾಯಕರಾಗಿರುವ ದೇವೇಗೌಡರು ತೆರಳಿದ್ದು ಹೊಸ ರಾಜಕೀಯ ಲೆಕ್ಕಾಚಾರ ಹುಟ್ಟುಹಾಕಿತ್ತು.

ವಿಧಾನಸಭೆ ಚುನಾವಣೆಯಲ್ಲಿ ಹೊಸ ಪ್ರಯೋಗ?
ಬಿಹಾರದಲ್ಲಿ ಮಹಾಮೈತ್ರಿಕೂಟ ಮಾಡಿದಂತಹ ತಂತ್ರಗಾರಿಕೆಯನ್ನು 2016ರಲ್ಲಿನ ಅನೇಕ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲೂ ಮಾಡಲು ಬಿಜೆಪಿಯೇತರ ಪಕ್ಷಗಳು ಸಿದ್ಧವಾಗಿವೆಯೇ?. ಬಿಜೆಪಿಗೆ ಪರ್ಯಾಯವಾದ ರಾಜಕೀಯ ಶಕ್ತಿಯೊಂದನ್ನು ಹುಟ್ಟುಹಾಕುವ ಪ್ರಯತ್ನಕ್ಕೆ ಇದು ಮುನ್ನುಡಿಯೇ ಕಾದು ನೋಡಬೇಕು. [ಚಿತ್ರ : ಮಲ್ಲಿಕಾರ್ಜುನ ಖರ್ಗೆ ಪ್ರಮಾಣ ವಚನ ಸಮಾರಂಭದಲ್ಲಿ]

ಮೋದಿಗೆ ಸಮನಾಗಿ ನಿಲ್ಲಬಲ್ಲ ನಾಯಕ
ಬಿಹಾರ ವಿಧಾನಸಭೆ ಚುನಾವಣೆ ಗೆಲುವಿನ ಬಳಿಕ ನಿತೀಶ್ ಕುಮಾರ್ ಅವರು ರಾಷ್ಟ್ರ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿ ಸಮನಾಗಿ ನಿಲ್ಲಬಲ್ಲರು ಎಂಬ ಮಾತುಗಳು ಕೇಳಿಬರುತ್ತಿವೆ. [ ಚಿತ್ರ : ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ಲಾಲೂ ಜೊತೆ]

ಲಾಲೂ ಜೊತೆ ಕೈ ಜೋಡಿಸಿದ ಪವಾರ್
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಪ್ರಮಾಣ ವಚನ ಸಮಾರಂಭಕ್ಕೆ ಬಂದಿದ್ದರು. ಬಿಜೆಪಿಯೇತರ ಶಕ್ತಿ ನಿರ್ಮಾಣಗೊಂಡರೆ ಪವಾರ್ ಅವರು ಕೈಜೋಡಿಸುವ ಸಾಧ್ಯತೆ ಇದೆ.

ಸೋಲಿಗೆ ಪ್ರಧಾನಿ ನರೇಂದ್ರ ಮೋದಿ ಹೊಣೆ
ಬಿಹಾರ ಚುನಾವಣೆ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಹೊಣೆ ಎಂಬ ಆರೋಪಗಳಿವೆ. ಪ್ರಧಾನಿ ಈ ಚುನಾವಣೆಯನ್ನು ಪ್ರತಿಷ್ಠೆ ಪ್ರಶ್ನೆ ಮಾಡಿಕೊಂಡಿದ್ದರು ಎಂಬ ಮಾತುಗಳು ಇವೆ. ಫಲಿತಾಂಶದ ಬಳಿಕ ಪ್ರಧಾನಿ ವರ್ಚಸ್ಸು ಕುಗ್ಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿತ್ತಿವೆ. [ಚಿತ್ರ : ಜೆಡಿಯು ಅಧ್ಯಕ್ಷ ಶರದ್ ಯಾದವ್‌ಮತ್ತು ನಿತೀಶ್ ಕುಮಾರ್]

ಅಸ್ಸಾಂ ಮುಖ್ಯಮಂತ್ರಿಗಳು ಬಂದಿದ್ದರು
ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗಾಯ್ ಅವರು ನಿತೀಶ್ ಕುಮಾರ್ ಪ್ರಮಾಣ ವಚನ ಸಮಾರಂಭಕ್ಕೆ ಬಂದಿದ್ದರು.

ನಿತೀಶ್‌ಗೆ ಅಭಿನಂದನೆ ಸಲ್ಲಿಕೆ
ಡಿಎಂಕೆ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಟಿ.ಆರ್.ಬಾಲು ಅವರು ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್ ಅವರಿಗೆ ಶುಭ ಕೋರಿದರು.












Click it and Unblock the Notifications