48 ಗಂಟೆಗಳಲ್ಲಿ 7 ಉಗ್ರರ ಹತ್ಯೆ, 6 ಗಡಿ ನುಸುಳುವಿಕೆ ಯತ್ನ ವಿಫಲ
ಜಮ್ಮು ಮತ್ತು ಕಾಶ್ಮೀರ, ಜೂನ್ 9: ಕಳೆದ 48 ಗಂಟೆಗಳಲ್ಲಿ ಕಾಶ್ಮೀರದಲ್ಲಿ 7 ಉಗ್ರರನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ. ಮಾತ್ರವಲ್ಲ ಆರು ಗಡಿ ನುಸುಳುವ ಪ್ರಯತ್ನವನ್ನೂ ಹೊಸಕಿ ಹಾಕಿದೆ.
ಡಿಸೆಂಬರ್ ಗೂ ಮೊದಲು ಕಾಶ್ಮೀರ ಕಣಿವೆಯಲ್ಲಿರುವ ಉಗ್ರರನ್ನೆಲ್ಲಾ ಹೊಡೆದುರುಳಿಸಬೇಕು ಎಂದು ಸೇನೆ ಡೆಡ್ಲೈನ್ ಹಾಕಿಕೊಂಡಿದ್ದು ಅದರಂತೆ ಉಗ್ರರ ಬೇಟೆಯಲ್ಲಿ ನಿರತವಾಗಿದೆ. ಇನ್ನು ಇತ್ತಿಚೆಗೆ ಸರಕಾರವೂ ಸೇನೆಗೆ ಕಾಶ್ಮಿರ ಕಣಿವೆಯಲ್ಲಿ ಕಾರ್ಯಚರಿಸಲು ಪೂರ್ತಿ ಸ್ವಾತಂತ್ರ್ಯ ನೀಡಿದೆ.

ಕಳೆದ 48 ಗಂಟೆಗಳಲ್ಲಿ ಗೂರೆಜ್, ಮಿಚಿಲ್, ನೌಗಾಮ್ ಮತ್ತು ಉರಿ ಭಾಗಗಳಲ್ಲಿ ಗಡಿ ನುಸುಳುವಿಕೆ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಮಾತ್ರವಲ್ಲ 7 ಉಗ್ರರನ್ನು ಕೊಲ್ಲಲಾಗಿದೆ," ಎಂದು ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನೌಗಾಮ್ ನಲ್ಲಿ ಮೂವರು ಬಂಧೂಕುದಾರಿಗಳನ್ನು ಹೊಡೆದುರುಳಿಸಲಾಗಿದ್ದರೆ, ಮಿಚಿಲ್ ನಲ್ಲಿ ಮೂವರನ್ನು ಹೊಡೆದುರುಳಿಸಲಾಗಿದೆ. ಇನ್ನು ಉರಿಯಲ್ಲಿ ನಡೆದ ಎನ್ಕೌಂಟರ್ ನಲ್ಲಿ ಇಬ್ಬರು ಸೈನಿಕರಿಗೂ ಗಾಯಗಳಾಗಿವೆ. ಉರಿಯಲ್ಲಿ 5 ಜನ ನುಸುಳುಕೋರರು ಭಾರತದ ಗಡಿ ಪ್ರವೇಶಿಸಿಲು ಯತ್ನಿಸಿ ವಿಫಲವಾಗಿದ್ದಾರೆ.
ಕಾಶ್ಮೀರ ಕಣಿವೆ ಪ್ರವೇಶಿಸಲು ಇವರಿಗೆಲ್ಲಾ ಪಾಕಿಸ್ತಾನದ ಕಡೆಯಂದ ಬೆಂಬಲ ಇತ್ತು. ಇವರೆಲ್ಲಾ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದರು ಎಂದು ಸೇನೆ ಹೇಳಿದೆ.
ಇನ್ನು ಒಟ್ಟಾರೆ ಈ ವರ್ಷ 22 ಗಡಿ ನುಸುಳುವ ಪ್ರಯತ್ನಗಳನ್ನು ತಡೆಯಲಾಗಿದ್ದು 34 ನುಸುಳುಕೋರರನ್ನು ಸೇನೆ ಹೊಡೆದುರುಳಿಸಿದೆ.












Click it and Unblock the Notifications