ಭಾರತದಲ್ಲಿ ಲಸಿಕೆ ವಿತರಣೆ: ಮಧ್ಯಮವಯಸ್ಕರಿಗೆ ಮೊದಲ ಆದ್ಯತೆ ಏಕೆ?
ನವದೆಹಲಿ, ಜುಲೈ 20: ಭಾರತದಲ್ಲಿ ಕೊರೊನಾವೈರಸ್ ಮೂರನೇ ಅಲೆಯ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ಸೇರಿದಂತೆ ರೂಪಾಂತರ ವೈರಸ್ ಅಪಾಯದಿಂದ ರಕ್ಷಿಸಿಕೊಳ್ಳಲು ಸಮರೋಪಾದಿಯಲ್ಲಿ ಲಸಿಕೆ ನೀಡುವ ಅನಿವಾರ್ಯತೆ ಎದುರಾಗಿದೆ.
ದೇಶದಲ್ಲಿ ಕೊರೊನಾವೈರಸ್ ಲಸಿಕೆ ಅಭಿಯಾನ ಆರಂಭವಾಗಿ 185 ದಿನಗಳೇ ಕಳೆದಿವೆ. ಈವರೆಗೂ 41 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಸೋಮವಾರ ರಾತ್ರಿ 7 ಗಂಟೆ ವೇಳೆಗೆ 47,77,697 ಮಂದಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಒಟ್ಟು 41,18,46,401 ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ.

18-44 ವಯೋಮಾನದವರಿಗೆ ಲಸಿಕೆ ನೀಡಲು ಒತ್ತು:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಲ್ಲಿ ಅತಿಹೆಚ್ಚು ಸೋಂಕು ತಗುಲಿರುವುದು ಹಾಗೂ ಸಾವಿನ ಸಂಖ್ಯೆಯಲ್ಲಿ ಅತಿಹೆಚ್ಚು ಮಧ್ಯವಯಸ್ಕರ ಸಂಖ್ಯೆಯೇ ಹೆಚ್ಚಾಗಿದೆ. ಈ ಹಿನ್ನೆಲೆ 18 ರಿಂದ 44 ವರ್ಷದ ವಯೋಮಾನದವರಿಗೆ ಲಸಿಕೆ ನೀಡುವುದಕ್ಕೆ ಒತ್ತು ನೀಡಲಾಗುತ್ತಿದೆ. ದೇಶದಲ್ಲಿ ಸೋಮವಾರ ಒಂದೇ ದಿನ 18 ರಿಂದ 44 ವಯೋಮಾನದ 22,38,900 ಜನರಿಗೆ ಮೊದಲ ಡೋಸ್ ಹಾಗೂ 1,48,075 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಇದೇ ವಯೋಮಾನದ 12,73,70,809 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 50,58,284 ಜನರು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ಕೊರೊನಾವೈರಸ್ ಲಸಿಕೆ ವಿತರಣೆ ಹಂತ:
ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿದೆ.












Click it and Unblock the Notifications