ಕನ್ನಡ ಕಲಿಯಲು ಇಚ್ಛಿಸದವರು ಪ್ರವಾಸಿಗರಾಗಿ ಮಾತ್ರವೇ ಭೇಟಿ ಕೊಡಿ: ಹೊಸ ನಿಯಮ ಜಾರಿಗೆ ಒತ್ತಾಯ
ಬೆಂಗಳೂರು, ಜನವರಿ 27: ಕರ್ನಾಟಕ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಲ್ಲಿ ಪರಭಾಷಿಗರ ಹಾವಳಿ ಹೆಚ್ಚಿದೆ. ಈ ನೆಲದ ಭಾಷೆಗೆ ಅಗೌರವ ಕೊಡುವವರು ಹಲವರಿದ್ದಾರೆ. ಕನ್ನಡ ಕಲಿಯದ ಅಂತವರ ವಿರುದ್ಧ 'ಬೆಂಗಳೂರು ಕ್ಲೋಸ್' ಎಂಬ ಬೋರ್ಡ್ ವೈರಲ್ ಆಗಿತ್ತು. ಇದರ ಬೆನ್ನಲ್ಲೆ ನಗರಕ್ಕೆ ಬದುಕು ಕಟ್ಟಿಕೊಳ್ಳಲು ಬಂದು ಕನ್ನಡ ಕಲಿಯಲು ಇಚ್ಛಿಸದವರಿಗೆ ಹೊಸ ನಿಮಯ ಜಾರಿಗೆ ತರಬೇಕು. ಬೆಂಗಳೂರಿಗೆ ಬರುವ ಕನ್ನಡೇತರರಿಗೆ ಸರ್ಕಾರ ನಿಯಮ (ಇನ್ನರ್ ಲೈನ್ ಪರ್ಮಿಟ್) ರೂಪಿಸುವಂತೆ ಆಗ್ರಹ ಕೇಳಿ ಬಂದಿದೆ.
ಉತ್ತರ ಭಾರತದವರು ಸೇರಿದಂತೆ ಇತರ ಕಡೆಗಳಿಂದ ಬೆಂಗಳೂರಿಗೆ ಬಂದ ಕನ್ನಡ ಕಲಿಯದವರಿಗೆ, ಬೆಂಗಳೂರು ಕ್ಲೋಸ್ ಎಂದು ಪೋಸ್ಟ್ ಹಾಕಿದ್ದ 'ಬಬ್ರುವಾಹನ' ಎಂಬುವವರ ಖಾತೆಯಿಂದ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಸಾಮಾಜಿಕ ಜಾಲತಾಣದ ಎಕ್ಸ್ ಖಾತೆಯಲ್ಲಿ (@Paarmatma) ಸೋಮವಾರ ಮತ್ತೊಂದು ಪೋಸ್ಟ್ ಹಂಚಿಕೊಳ್ಳಲಾಗಿದೆ.

ಉತ್ತರ ಭಾರತೀಯರು ಕನ್ನಡ ಕಲಿಯಲು ಇಚ್ಛಿಸದಿದ್ದರೆ, ಅವರಿಗೆ ಪ್ರವಾಸಿಗರಾಗಿ ಮಾತ್ರವೇ ಬೆಂಗಳೂರು ಭೇಟಿಗೆ ಸರ್ಕಾರ ಅವಕಾಶ ನೀಡಬೇಕು. ಈ ಸಂಬಂಧ ಇನ್ನರ್ ಲೈನ್ ಪರ್ಮಿಟ್ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಈ ಪೋಸ್ಟ್ ಅನ್ನು 25 ಸಾವಿರಕ್ಕೂ ಹೆಚ್ಚು ಜನರಿಗೆ ತಲುಪಿದೆ. ಹತ್ತಾರು ಕಾಮೆಂಟುಗಳು ಬಂದಿವೆ. ಹಿಂದಿನಿಂದಲೂ ಪರಭಾಷಿಗರು ಕನ್ನಡವನ್ನು ಅಷ್ಟಕಷ್ಟ ಎಂಬಂತೆ ಭಾವಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಬಸವನಗುಡಿ ಅಂಚೆ ಕಚೇರಿಯಲ್ಲಿ ಮೂರು ಮಂದಿ ಅಧಿಕಾರಿಗಳು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದಕ್ಷರ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಸಾರ್ವಜನಿಕರು ಕಚೇರಿಯಲ್ಲಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಪದೇ ಪದೆ ಕನ್ನಡಿಗರನ್ನು ಕೆಣಕುವ ಕನ್ನಡೇತರರು
ಬೆಂಗಳೂರಿನಲ್ಲಿರುವ ಉತ್ತರ ಭಾರತೀಯರಲ್ಲಿ ಕೆಲವರು ತಮಗೆ ಕನ್ನಡ ಭಾಷೆ ಬರದಿದ್ದರೂ ಕನ್ನಡದ ಬಗ್ಗೆ ಕಿಂಚಿತ್ತು ಗೌರವ ಕೊಡುವುದಿಲ್ಲ. ಅಲ್ಲದೇ ತಾವು ನಗರಕ್ಕೆ ಬಂದಿದ್ದಕ್ಕೆ ಬೆಂಗಳೂರು ಬೆಳೆದಿದೆ. ಇಲ್ಲವಾದರೆ ನಿಮ್ಮ ಪರಿಸ್ಥಿತಿ ಹೇಗಿರುತ್ತಿತ್ತೋ ಏನೋ ಎಂದೆಲ್ಲ ವಿಡಿಯೋ ಮಾಡಿ ಕನ್ನಡಿಗರನ್ನು ಕೆಣಕಿದ್ದನ್ನು ನೋಡಿದ್ದೇವೆ.
ಕೆ.ಆರ್.ಪುರಂ ವ್ಯಾಪ್ತಿಯಲ್ಲಿ ತೆಲುಗು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬ್ಯಾನರ್‌ನಲ್ಲಿ ತೆಲುಗು ಮತ್ತು ಆಂಗ್ಲ ಭಾಷೆ ಇದೆ. ಕಾರ್ಯಕ್ರಮ ಮಾಡಲು ಕನ್ನಡಿಗರ ಜಾಗಬೇಕು. ಆದರೆ ಕನ್ನಡಕ್ಕೆ ಸ್ಥಾನ ನೀಡದೇ ಅಪಮಾನ ಮಾಡಿದ್ದಾರೆ. ಈ ಕುರಿತು ಮಾಹಿತಿ ದೊರೆಯುತ್ತಿದ್ದಂತೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸ್ಥಳಕ್ಕೆ ಬಂದು ಬ್ಯಾನರ್ ತೆಗೆದು ಎಚ್ಚರಿಕೆ ನೀಡಿದೆ.
ಇಂತಹ ಪ್ರಕರಣಗಳು ಮತ್ತಷ್ಟು ನಡೆಯಲು, ಪರಭಾಷಿಗರ ಹಾವಳಿ ನಿಯಂತ್ರಿಸುವ ಜೊತೆಗೆ ಕನ್ನಡ ನೆಲದಲ್ಲಿ ಈ ಭಾಷೆಯ ಅಸ್ಮಿತೆ ಉಳಿಯಲು, ಭಾಷೆಗೆ ಗೌರವ ಕುಂದಲು ಬಿಡದೇ ಸರ್ಕಾರ ಸೂಕ್ತ ಕ್ರಮ ವಹಿಸಬೇಕು ಎಂಬ ಆಗ್ರಹಗಳು, ಅಭಿಯಾನಗಳು ಮುಂದುವರಿದಿವೆ.
Photo credit: X @Paarmatma












Click it and Unblock the Notifications