IMD Weather Forecast: ಚಳಿ ನಡುವೆಯೂ ಈ ಭಾಗಗಳಲ್ಲಿ ಮುಂದಿನ 4 ದಿನ ಭೀಕರ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಚಳಿ ಆವರಿಸಿದೆ. ಈ ನಡುವೆಯೇ ಹಲವೆಡೆ ರಣಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ ನಾಲ್ಕು ದಿನ ಈ ಭಾಗಗಳಲ್ಲಿ ರಣಭೀಕರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂಬರುವ ದಿನಗಳಲ್ಲಿ ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ತಾಪಮಾನವು ಎರಡರಿಂದ ನಾಲ್ಕು ಡಿಗ್ರಿ ಸೆಲ್ಸಿಯಸ್ ಕಡಿಮೆ ಆಗುವ ಸಾಧ್ಯತೆಯಿದೆ. ಗುಡ್ಡಗಾಡು ರಾಜ್ಯಗಳಲ್ಲಿ ನಿರಂತರ ಹಿಮಪಾತ ಪರಿಣಾಮ ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹವಾಮಾನ ಪರಿಸ್ಥಿತಿಗಳು ಬದಲಾಗುವ ಸಾಧ್ಯತೆಯಿದೆ.

ಈ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಶೀತಗಾಳಿ ಪ್ರಮಾಣ ಹೆಚ್ಚಾಗಲಿದ್ದು, ಮಂಜು ಮುಸುಕಿದ ವಾತಾವರಣ ಇರಲಿದೆ. ಇದರಿಂದ ಅನಾನುಕೂಲಗಳು ಸಂಭವಿಸುವ ಸಾಧ್ಯತೆಯಿದೆ. ಇದರ ಹೊರತಾಗಿ, ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಲ್ಲೂ ಸಹ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಮುನ್ಸೂಚನೆ ನೀಡಿದೆ.
ಪಂಜಾಬ್, ಬಿಹಾರ, ಪೂರ್ವ ಉತ್ತರ ಪ್ರದೇಶ ಮತ್ತು ಪಶ್ಚಿಮ ಮಧ್ಯಪ್ರದೇಶಗಳಲ್ಲಿ ವಿಶೇಷವಾಗಿ ಮುಂಜಾನೆ ವೇಳೆ ದಟ್ಟವಾದ ಮಂಜಿನ ವಾತಾವರಣ ಮುಂದುವರೆದಿದೆ. ಇದರಿಂದ ಜನರು ಬೆಚ್ಚಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಮುಂದಿನ ದಿನಗಳಲ್ಲಿ ಚಳಿ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ಮಧ್ಯ ಭಾರತದ ಮಹಾರಾಷ್ಟ್ರ ಮತ್ತು ಗುಜರಾತ್ ಸೇರಿದಂತೆ ಇತರ ಭಾಗಗಳಲ್ಲಿ ಮುಂದಿನ 2-3 ದಿನಗಳಲ್ಲಿ ತಾಪಮಾನ ತುಸು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಇನ್ನೂ ಶೀತಗಾಳಿಯು ಉತ್ತರ ಭಾರತದ ಹಲವು ರಾಜ್ಯಗಳ ನಿವಾಸಿಗಳಿಗೆ ಅನಾನುಕೂಲತೆಯನ್ನು ಉಂಟುಮಾಡುವ ಸಾಧ್ಯತೆಯಿದೆ. ಬೆಳಗಿನ ವೇಳೆ ದಟ್ಟ ಮಂಜಿನ ಜೊತೆ ಶೀತಗಾಳಿ ಪ್ರಮಾಣ ಹೆಚ್ಚಿರಲಿದ್ದು, ಈ ಸಮಯದಲ್ಲಿ ತಮ್ಮ ಪ್ರವಾಸ ಕೈಗೊಳ್ಳುವುದನ್ನು ನಿಲ್ಲಿಸುವುದು ಉತ್ತಮ ಎಂದು ಸಲಹೆ ನೀಡಿದೆ.
ದಕ್ಷಿಣ ಭಾರತದ ಹವಾಮಾನ ವಿವರ: ತಮಿಳುನಾಡು, ಕೇರಳ ಮತ್ತು ಕರ್ನಾಟಕ ಸೇರಿದಂತೆ ಹಲವಾರು ದಕ್ಷಿಣ ರಾಜ್ಯಗಳಲ್ಲಿ ಮುಂದಿನ ಮೂರ್ನಾಲ್ಕು ದಿನಗಳವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ. ಅದರಲ್ಲೂ ಕರಾವಳಿ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಜೊತೆಗೆ ಬಿರುಗಾಳಿ ಬೀಸಲಿದೆ. ಇನ್ನೂ ಭಾರೀ ಮಳೆಯಿಂದಾಗಿ ಕರ್ನಾಟಕದ ಬೆಂಗಳೂರು ಮತ್ತು ತಮಿಳುನಾಡಿನ ಚೆನ್ನೈ ಸೇರಿದಂತೆ ಹಲವಾರು ಪ್ರಮುಖ ನಗರಗಳಲ್ಲಿ ಜಲಾವೃತವಾಗುವ ಸಾಧ್ಯತೆಯಿದೆ. ಇದು ವಾಹನ ಸವಾರರಿಗೆ ಅಡೆತಡೆ ಉಂಟುಮಾಡುವ ಸಾಧ್ಯತೆಯಿರುತ್ತದೆ ಎಂದು ಎಚ್ಚರಿಕೆ ನಿಡಿದೆ.
ಭಾರೀ ಮಳೆ ವೇಳೆ ಮೀನುಗಾರರು ಸಮುದ್ರದ ತೀರಗಳಿಂದ ದೂರು ಇರುವುದು ಒಳಿತು ಎಂದು ಸಲಹೆ ನೀಡಿದೆ. ಇದೇ ವೇಳೆ ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಾಂನಂತಹ ಈಶಾನ್ಯ ರಾಜ್ಯಗಳ ಹಲವಾರು ಭಾಗಗಳಲ್ಲಿಯೂ ಸಹ ಹಗುರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications