India Rain Forecast: ಭಾರತದ ಉತ್ತರ ರಾಜ್ಯಗಳಲ್ಲಿ ಭಾರಿ ಮಳೆ ಸಂಭವ, ಹವಾಮಾನ ವರದಿ
ಬೆಂಗಳೂರು, ಆಗಸ್ಟ್ 13: ಮುಂಗಾರು ಮಳೆ ಭಾರತದ ವಿವಿಧೆಡೆ ಮುಂದುವರಿದಿದದ್ದು, ಮುಂದಿನ 48 ಗಂಟೆಗಳಲ್ಲಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಧಾರಾಕಾರ ಮಳೆ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಇಂದು ಭಾನುವಾರ ಆಗಸ್ಟ್ 13ರಂದು ಹಾಗೂ ನಾಳೆ ಮತ್ತು 14 ರಂದು ವಾಯುವ್ಯ ಉತ್ತರ ಪ್ರದೇಶ ಹಾಗೂ ಪೂರ್ವ ಉತ್ತರ ಪ್ರದೇಶದಲ್ಲಿ ಮುಂಗಾರು ತೀವ್ರಗೊಳ್ಳುವ ಸಾಧ್ಯತೆಗಳು ದಟ್ಟವಾಗಿದೆ. ರಾಷ್ಟ್ರೀಯ ರಾಜಧಾನಿ ನವದೆಹಲಿ ಸೇರಿದಂತೆ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದೆಹಲಿ ಎನ್‌ಸಿಆರ್ ನಲ್ಲಿ ಮುಂದಿನ 2-3 ದಿನಗಳಲ್ಲಿ ಯಾವುದೇ ರೀತಿಯ ಭಾರೀ ಮಳೆಯ ಚಟುವಟಿಕೆಯ ಸಾಧ್ಯತೆಯಿಲ್ಲ. ಆದರೆ ಆಗಸ್ಟ್ 14 ಮತ್ತು 15 ರಂದು ಪ್ರತ್ಯೇಕ ಸ್ಥಳಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಇಲ್ಲವೇ ತುಂತು ಮಳೆ ದರ್ಶನವಾಗಬಹುದು ಎನ್ನಲಾಗಿದೆ.
ನವದೆಹಲಿ, ನೋಯ್ಡಾದ ಮೇಲೆ ವಿವಿಧ ಪ್ರತ್ಯೇಕ ಕಡೆಗಳಲ್ಲಿ ಗುಡುಗು ಸಹಿತ ಹಗುರ ಮಳೆ ಯಾಗುವ ಸಂಭವವಿದೆ. ಮುಂದಿನ ಎರಡು ದಿನಗಳಲ್ಲಿ ಗುರುಗ್ರಾಮ್, ಗಾಜಿಯಾಬಾದ್ ಮತ್ತು ಫರಿದಾಬಾದ್ ನಲ್ಲಿ ಅಧಿಕ ಮಳೆ ಸಾದ್ಯತೆಗಳು ಇವೆ.
ಮುಂದಿನ 48 ಗಂಟೆಗಳಲ್ಲಿ ಮಳೆ ಏರಿಕೆ ಸಂಭವ
ಇನ್ನೂ ಭಾರತದಲ್ಲಿ ಈಗಾಗಲೇ ತೀವ್ರ ಮಳೆ ಕಂಡ ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದ ಗುಡ್ಡಗಾಡು ರಾಜ್ಯಗಳಲ್ಲಿ ಮುಂಗಾರು ಹೆಚ್ಚು ಸಕ್ರಿಯವಾಗುವ ಲಕ್ಷಣಗಳು ಇವೆ. ಈ ಕಾರಣದಿಂದ ಇನ್ನೂ ಒಂದೆರಡು ವಾರಗಳ ಕಾಲ ಇಲ್ಲಿ ಧಾರಾಕಾರ ಮಳೆ ಬೀಳಲಿದೆ. ಮುಂದಿನ 2-3 ದಿನಗಳ ಕಾಲ ಇಲ್ಲಿನ ಮಳೆಯಲ್ಲಿ ಏರಿಕೆ ಕಂಡು ಬರಲಿದೆ ಎಂದು ಐಎಂಡಿ ಹೇಳಿದೆ.

ಐಎಂಡಿ ದೈನಂದಿನ ಹವಾಮಾನ ಮುನ್ಸೂಚನೆ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ ಇಂದಿನಿಂದ ಆಗಸ್ಟ್14 ರವರೆಗೆ ಭಾರೀ ಮಳೆಯಾಗಲಿದೆ. ಉತ್ತರಾಖಂಡ ರಾಜ್ಯಗಳ ಹಲವು ಪ್ರದೇಶಗಳು ಇಂದಿನಿಂದ ಆಗಸ್ಟ್ 16 ರವರೆಗೆ ಅತ್ಯಧಿಕ ಮಳೆಯ ವಾತಾವರಣಕ್ಕೆ ಸಾಕ್ಷಿಯಾಗಲಿವೆ. ಸದರಿ ಆಗಸ್ಟ್ ತಿಂಗಳಲ್ಲಿ ದೇಶದ ಕೆಲವು ರಾಜ್ಯಗಳಲ್ಲಿ ಹೆಚ್ಚು ಮಳೆ ದಾಖಲಾಗುವ ನಿರೀಕ್ಷೆ ಇದೆ.
ಭಾರೀ ಮಳೆಯ ಪ್ರಯುಕ್ತ ಆಗಸ್ಟ್ 13 ಮತ್ತು 14 ರಂದು ಹವಾಮಾನ ಇಲಾಖೆಯು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಕ್ಕೆ 'ರೆಡ್ ಅಲರ್ಟ್' ನೀಡಿದೆ. ಸೂಕ್ಷ್ಮ ವಲಯಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಇಲ್ಲಿನ ತಗ್ಗ ಪ್ರದೇಶಗಳಲ್ಲಿ ಭಾರಿ ಮಳೆಗೆ ಜಾಲವೃತ ಆತಂಕ ಎದುರಾಗಿದೆ.
ಈಶಾನ್ಯ ಭಾರತದ ಹವಾಮಾನ ವರದಿ
ಮೇಘಾಲಯದಲ್ಲಿ ವರುಣಾರ್ಭಟಕ್ಕೆ ಜನರು ತತ್ತರಿಸಿದ್ದಾರೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಮತ್ತು ಮೇಘಾಲಯದಲ್ಲಿ ಮುಂದಿನ ಆಗಸ್ಟ್ 15ರ ತನಕ ಹಾಗೂ ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಆಗಸ್ಟ್ 16 ರಂದು ಭಾರೀ ಮಳೆ ಆಗಲಿದೆ ಎಂದು ಐಎಂಡಿ ಖಚಿತಪಡಿಸಿದೆ.
ಐಎಂಡಿ ಹವಾಮಾನ ವರದಿಯಲ್ಲಿ ತಿಳಿಸಿರುವಂತೆ ದೇಶದ ಪಶ್ಚಿಮ ಮತ್ತು ದಕ್ಷಿಣ ಭಾರತದ ಮುಂಗಾರು ಮಳೆ ದುರ್ಬಲಗೊಂಡಿದೆ. ಆದ್ದರಿಂದ ಮಹಾರಾಷ್ಟ್ರ, ತಮಿಳುನಾಡು, ಕೇರಳ ಮತ್ತು ಪ್ರದೇಶದ ಇತರ ರಾಜ್ಯಗಳಲ್ಲಿ ಮಳೆ ಸುರಿಯುವಿಕೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಒಂದೆರಡು ಕಡೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ತುಂತುರು ಮಳೆ ಬಿದ್ದಿದೆ ಎಂದು ತಿಳಿಸಿದೆ.












Click it and Unblock the Notifications