IMD Weather Forecast: ವಾಯುಭಾರ ಕುಸಿತ, ಫೆ.4 ರತನಕ ವ್ಯಾಪಕ ಮಳೆ, ಶೀತ ಅಲೆ ಮುನ್ಸೂಚನೆ
ಹಿಂಗಾರು ಮಳೆಯು ಜನವರಿ ತಿಂಗಳಲ್ಲಿ ದೇಶಾದ್ಯಂತ ನಿರೀಕ್ಷಿತ ಮಟ್ಟದಲ್ಲಿ ದಾಖಲಾಗಿಲ್ಲ. ಇದೀಗ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಉತ್ತರ ಭಾರತದ ಭೂ ಮೇಲ್ಮೈನಲ್ಲೂ ಸ್ಟ್ರಫ್ ಇದೆ ಎನ್ನಲಾಗಿದೆ. ಇವುಗಳ ಕಾರಣದಿಂದ ಬೇಸಿಗೆ ವೇಳೆಯು ವಿವಿಧ ಭಾಗಗಳಲ್ಲಿ ಫೆಬ್ರವರಿ 1 ರಿಂದ ಫೆಬ್ರವರಿ 04ರವರೆಗೆ ವ್ಯಾಪಕ ಮಳೆ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಮಳೆ ಆಗಲಿದೆ ಎಂಬ ಮಾಹಿತಿ ಇಲ್ಲಿದೆ.
ಜನವರಿ 1 ರಿಂದ ಜನವರಿ 30 ರವರೆಗೆ ದೇಶದಲ್ಲಿ ಮಳೆ ಕೊರತೆ ಆಗಿದೆ. ನಿರೀಕ್ಷೆಗಿಂತ ಶೇಕಡಾ 72ರಷ್ಟು ಮಳೆ ಕೊರತೆ ಆಗಿದೆ. ಆದರೆ ದೇಶದ ಪೂರ್ವ ರಾಜಸ್ಥಾನದಲ್ಲಿ ಶೇಕಡಾ 23 ಅಧಿಕ ಮಳೆ ದಾಖಲಾಗಿದೆ. ಇದೇ ಫೆಬ್ರವರಿ 1 ಮತ್ತು 4 ರ ನಡುವೆ ವಾಯುವ್ಯ ಭಾರತ ಮತ್ತು ಪಶ್ಚಿಮ ಹಿಮಾಲಯದ ಮೇಲೆ ಸಾಕಷ್ಟು ಬದಲಾವಣೆ ಆಗಲಿವೆ. ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆ, ಹಿಮಪಾತ ಸಂಭವಿಸಲಿದೆ. ಕೆಲವೆಡೆ ಮಂಜಿನ ವಾತಾವರಣವೂ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಗುಡುಗು ಮಿಂಚು ಸಹಿತ ವ್ಯಾಪಕ ಮಳೆ
ಇಂದು ಶನಿವಾರ ಪಂಜಾಬ್ ರಾಜ್ಯದ ಒಂದೆರಡು ಕಡೆಗಳಲ್ಲಿ ಚದುರಿದಂತೆ ಮಳೆ ಆಗುತ್ತಿದೆ. ಉತ್ತರ ಹರಿಯಾಣದ ಮೇಲೂ ಹವಾಮಾನ ವೈಪರಿತ್ಯದ ಪ್ರಭಾವ ಉಂಟಾಗಲಿದೆ. ಮಳೆ ಹರಿಯಾಣ, ಪಂಜಾಬ್‌ಗೆ ಮಾತ್ರ ಸಿಮೀತವಾಗದೇ ವಿವಿಧ ರಾಜ್ಯಗಳಿಗೆ ವಿಸ್ತರಣೆಆಗಲಿದೆ. ಮುಂದಿನ ಫೆಬ್ರವರಿ 3 ಮತ್ತು 4 ರಂದು ಹರಿಯಾಣ, ಪಂಜಾಬ್, ದೆಹಲಿ ಹಾಗೂ ಪಶ್ಚಿಮ ಉತ್ತರ ಪ್ರದೇಶ ಸೇರಿದಂತೆ ಉತ್ತರದ ಕೆಲವು ಭಾಗಗಳಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಫೆಬ್ರವರಿ 4ರ ತನಕ ಹಿಮಪಾತ
ಈ ನಿರೀಕ್ಷಿತ ಮಳೆಯು ಕಳೆದೊಂದು ವಾರದಿಂದ ಶುಷ್ಕ ವಾತಾವರಣ ಎದುರಿಸುತ್ತಿದ್ದ ರಾಜ್ಯಗಳಿಗೆ ತಂಪೆರಡಲಿದೆ. ಒಣಹವೆಗೆ ಕೊಂಚ ಪರಿಹಾರ ಒದಗಿಸಲಿದೆ. ಮುಂದಿನ ಫೆಬ್ರವರಿ 4ರ ತನಕ ಹಿಮಾಲಯ ಪಶ್ಚಿಮ ಭಾಗದಲ್ಲಿ ಸಾಧಾರಣದಿಂದ ಭಾರೀ ಪ್ರಮಾಣದಲ್ಲಿ ಹಿಮಪಾತ ಸುರಿಯುವ ಸಾಧ್ಯತೆ ಇದೆ. ಮೂರು ದಿನಗಳು ಮಾತ್ರ ವ್ಯಾಪಕ ಹಿಮಪಾತದಿಂದ ಕೂಡಿರಲಿದ್ದು, ಅತ್ಯಧಿಕ ಹಿಮಪಾತ ಬೀಳುವ ನಿರೀಕ್ಷೆ ಇದೆ. ಇದು ಸಹ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
ದೇಶದ ವಾಯುವ್ಯ ಹಾಗೂ ಮಧ್ಯ ಭಾರತದ ಪ್ರದೇಶಗಳಲ್ಲಿ ಫೆಬ್ರವರಿ 4 ರತನಕ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಅಂದರೆ ಇಲ್ಲೆಲ್ಲ ಚಳಿ ಹೆಚ್ಚಾಗಿರಲಿದ್ದು, ಮಂಜಿನ ವಾತಾವರಣ ಉಂಟಾಗಲಿದೆ. ಈಗಾಗಲೇ ದೆಹಲಿ ವಿಮಾನಗಳ ಸಂಚಾರದ ಮೇಲೂ ಮಂಜಿನ ವಾತಾವರಣ ಪರಿಣಾಮ ಬೀರಿದೆ. ಪ್ರಯಾಣಿಕರಿಗೆ ದೆಹಲಿ ಏರ್‌ಪೋರ್ಟ್ ಗಂಟೆ ಗಂಟೆಗೂ ಎಚ್ಚರಿಕೆ ಸಂದೇಶ ರವಾನಿಸುತ್ತಿದೆ.

ಏಕಕಾಲಕ್ಕೆ ಬೇಸಿಗೆ, ಶೀತ, ಮಳೆ ವಾತಾವರಣ
ಹಿಮಪಾತ ಪರ್ವತ ಪ್ರದೇಶಗಳಿಂದ ಬೀಸುವ ಗಾಳಿ ಶೀತದ ಅಲೆ ಹೊತ್ತು ತರಲಿದೆ. ಗಾಳಿ ಬೀಸುವ ದಿಕ್ಕಿನಲ್ಲಿ ಚಳಿ ಹೆಚ್ಚಳ, ಮಂಜು ಕವಿಯಲಿದೆ. ತಾಪಮಾನ ಇಳಿಕೆ ಆಗಲಿದೆ. ಇನ್ನೂ ದೆಹಲಿ, ರಾಜಸ್ಥಾನ, ಪಂಜಾಬ್, ಹರಿಯಾಣ, ಗುಜರಾತ್, ಪಶ್ಚಿಮ ಮಧ್ಯಪ್ರದೇಶ ಹಾಗು ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಶೀತ ಅಲೆ ಮುಂದುವರಿಯಲಿದೆ. ಈ ಮೂಲಕ ಭಾರತವು ಕೆಲವು ಪ್ರದೇಶಗಳಲ್ಲಿ ಒಣಹವೆ, ಶುಷ್ಕ ವಾತಾವರಣ ಮತ್ತು ಮಳೆಗೆ ಏಕಕಾಲಕ್ಕೆ ಸಾಕ್ಷಿಯಾಗುತ್ತಿದೆ.
ಜನವರಿಯಲ್ಲಿ ಮಳೆ ಕೊರತೆ ಕಂಡು ಒಂದಷ್ಟು ಪ್ರದೇಶಗಳಲ್ಲಿ ಈ ಮಳೆ ಮುನ್ಸೂಚನೆ ಕೊಂಚ ಪರಿಹಾರ ತರಬಹುದು. ಕಾದ ನೆಲಕ್ಕೆ ತಂಪೆರೆಯಬಹುದು. ಬರಗಾಲ ಪೀಡಿತ, ಮಳೆ ಕೊರತೆ ಕಂಡ ಪ್ರದೇಶಗಳಲ್ಲಿ ರೈತರಿಗೆ ಬಿತ್ತನಗೆ ಈ ಮಳೆ ಅವಕಾಶ ನೀಡುವ ಸಾಧ್ಯತೆ ಇದೆ. ಹಾಲಿ ಬೆಳೆದ ಬೆಳೆಗಳ ಬೆಳವಣಿಗೆಗೆ ಈ ಮಳೆ ಪೂರಕವಾಗಬಹುದು ಎಂದು ಊಹಿಸಲಾಗಿದೆ.












Click it and Unblock the Notifications