Tirupati Rain: ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಧರೆಗಿಳಿದ ವರುಣ: ನೀರಿನ ದಾಹ ನೀಗಿಸಿದ ಮಳೆರಾಯ- 2 ದಿನ ಮಳೆ!
ಕರ್ನಾಟಕದಲ್ಲಿ ಮಳೆ ಅಬ್ಬರ ಮುಂದುವರೆದಂತೆ ಆಂಧ್ರಪ್ರದೇಶದ ತಿರುಪತಿಯಲ್ಲೂ ವರುಣನ ಅರ್ಭಟ ಜೋರಾಗಿದೆ. ಕಳೆದ ಕೆಲ ದಿನಗಳಿಂದ ತಿರುಪತಿಯಲ್ಲೂ ಧಾರಾಕಾರವಾಗಿ ಮಳೆಯಾಗುತ್ತಿದೆ. ನೆಲ್ಲೂರು ಮತ್ತು ತಿರುಪತಿ ಜಿಲ್ಲೆಗಳಲ್ಲಿ ಅಧಿಕ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಆದರೆ ತಿರುಪತಿಯಲ್ಲಿ ದೊಡ್ಡ ತಲೆ ನೋವಾಗಿದ್ದ ನೀರಿನ ಸಮಸ್ಯೆಯಿಂದ ಕೊಂಚ ಪರಿಹಾರ ಸಿಕ್ಕಂತಾಗಿದೆ.
ಹೌದು.. ನಿರಂತರವಾಗಿ ಸುರಿಯುತ್ತಿರುವ ಮಳೆ ತಿರುಪತಿಗೆ ಬರುವ ಭಕ್ತರಿಗೆ ಸಾಕಷ್ಟು ತೊಂದರೆಯನ್ನುಂಟು ಮಾಡಿದೆ. ಸತತ ಎರಡನೇ ದಿನವೂ ತಿರುಪತಿಯಲ್ಲಿ ಭಾರೀ ಮಳೆಯಾಗುತ್ತಿದ್ದು ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ರಸ್ತೆಗಳು, ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮಳೆ ಅದೆಷ್ಟೇ ಕಿರಿಕಿರಿಯನ್ನುಂಟು ಮಾಡಿದರೂ ತಿರುಪತಿಯಲ್ಲಿದ್ದ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದ ಟಿಟಿಡಿ ಕೊಂಚ ನಿಟ್ಟುಸಿರು ಬಿಟ್ಟಿದೆ.

ತಿರುಪತಿಯಲ್ಲಿ ನೀರಿನ ದಾಹ ನೀಗಿಸಿದ ವರುಣ
ನಿರಂತರ ಮಳೆಯಿಂದಾಗಿ ನಗರ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ತಿರುಪತಿ ಮತ್ತು ನೆಲ್ಲೂರು ನಗರಗಳಲ್ಲಿ ಹಲವಾರು ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ನಿವಾಸಿಗಳು ಮೊಣಕಾಲು ಆಳದ ನೀರಿನಲ್ಲಿ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಅಧಿಕಾರಿಗಳು ಶೀಘ್ರವಾಗಿ ಸ್ಪಂದಿಸಿ ತಗ್ಗು ಪ್ರದೇಶಗಳಿಂದ ನೀರನ್ನು ಹೊರ ಹಾಕುವ ಮೂಲಕ ಸಾರ್ವಜನಿಕರಿಗೆ ಸ್ವಲ್ಪ ಪರಿಹಾರ ಒದಗಿಸಿದ್ದಾರೆ. ನಿರಂತರ ಮಳೆಯೀಮದಾಗಿ ಏಳು ಬೆಟ್ಟದ ಒಡೆಯನ ಭೇಟಿ ಭಕ್ತರಿಗೆ ಸವಾಲಾಗಿದ್ದರೂ, ತಿರುಪತಿಯಲ್ಲಿದ್ದ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಇದು ಟಿಟಿಡಿಗೆ ಸಂತಸ ತಂದಿದೆ. ಈ ನಡುವೆ ಭಾರೀ ಮಳೆಗೆ ತಿರುಪತಿಯ ವಾತಾವರಣವೇ ಬದಲಾಗಿದೆ. ಇದರಿಂದಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸೂಚನೆ ನೀಡಲಾಗಿದೆ.
ಹವಮಾನದಲ್ಲಿ ದಿಢೀರ್ ಬದಲಾವಣೆ
ಹೌದು... ಚಳಿಯ ಗಾಳಿಯಿಂದಾಗಿ ನಗರದ ತಾಪಮಾನ ಗಣನೀಯವಾಗಿ ಕುಸಿದಿದೆ. ಹವಮಾನ ಬದಲಾವಣೆಯಿಂದಾಗಿ ಹಿರಿಯ ನಾಗರಿಕರು, ಮಕ್ಕಳು ಮನೆಯೊಳಗೆ ಇರಲು ಸೂಚನೆ ನೀಡಲಾಗಿದೆ. ಸೋಮವಾರ ಮಧ್ಯರಾತ್ರಿಯಿಂದ ಆರಂಭವಾದ ಮಳೆಯು ಇಂದಿನವರೆಗೂ ಸುರಿಯುತ್ತಿದೆ. ಇದರಿಂದಾಗಿ ಯಾತ್ರಾರ್ಥಿಗಳಿಗೆ ತೊಂದರೆಯಾಗಿದೆ. ಅನೇಕ ಭಕ್ತರು ಮಳೆಯ ಆರ್ಭಟವನ್ನು ತಪ್ಪಿಸಲು ಅಂಗಡಿಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ.

ಶಾಲೆಗಳಿಗೆ ರಜೆ ಘೋಷಣೆ
ಹವಾಮಾನ ವೈಪರೀತ್ಯಕ್ಕೆ ಸ್ಪಂದಿಸಿ ನೆಲ್ಲೂರು, ತಿರುಪತಿ, ಚಿತ್ತೂರು, ಅನ್ನಮಯ್ಯ ಜಿಲ್ಲೆಗಳಲ್ಲಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಹೆಚ್ಚುವರಿ ದಿನ ರಜೆಯನ್ನು ಜಿಲ್ಲಾಡಳಿತ ಘೋಷಣೆ ಮಾಡಿದೆ. ಈ ನಡುವೆ ಹವಾಮಾನ ಇಲಾಖೆಯು ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆಯನ್ನು ವಹಿಸಿದ್ದಾರೆ.
ಎಲ್ಲೆಲ್ಲಿ ಎಷ್ಟು ಮಳೆ?
ನೆಲ್ಲೂರು ಜಿಲ್ಲೆಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 160 ಕುಟುಂಬಗಳನ್ನು ಆತ್ಮಕೂರ್ ಮತ್ತು ಅನಂತಸಾಗರಂ ಮಂಡಲಗಳ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 80 ಮಿ.ಮೀ ಮಳೆಯಾಗಿದ್ದು, ಇನ್ನೂ ಕೆಲವು ಸ್ಥಳಗಳಲ್ಲಿ 100 ಮಿ.ಮೀ.ಗೂ ಅಧಿಕ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಒ.ಆನಂದ್ ವರದಿ ನೀಡಿದ್ದಾರೆ. ಈವರೆಗೂ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯ ವರದಿಯಾಗಿಲ್ಲ. ಆದರೆ ಹೆಚ್ಚಿನ ಮಳೆಯ ನಿರೀಕ್ಷೆಯಿರುವುದರಿಂದ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಅನಗತ್ಯ ಪ್ರಯಾಣ ತಪ್ಪಿಸಲು ಸೂಚನೆ
ತಿರುಪತಿಯಲ್ಲಿ ಜಿಲ್ಲಾಧಿಕಾರಿ ಡಾ.ಎಸ್.ವೆಂಕಟೇಶ್ವರ್ ಅವರು ಮಾತನಾಡಿ, ಮಳೆಯಿಂದಾಗಿ ನಿವಾಸಿಗಳು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ಮತ್ತು ಜಲಾವೃತ ರಸ್ತೆಗಳನ್ನು ದಾಟುವುದನ್ನು ತಪ್ಪಿಸಬೇಕು. ಯಾವುದೇ ಸಂಭಾವ್ಯ ಸಂದರ್ಭಗಳನ್ನು ನಿರ್ವಹಿಸಲು ತುರ್ತು ತಂಡಗಳು ಸ್ಟ್ಯಾಂಡ್‌ಬೈನಲ್ಲಿವೆ. ಚಿತ್ತೂರು ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಗುರುವಾರದವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿರುವುದರಿಂದ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಲ್ಲದೆ ರೈತರಿಗೂ ತಮ್ಮ ಬೆಳೆಗಳಿಗೆ ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದರು.

ತಗ್ಗು ಪ್ರದೇಶಗಳ ಮೇಲ್ವಿಚಾರಣೆ ಡ್ರೋನ್ ಬಳಕೆ
ಅನ್ನಮಯ್ಯ ಜಿಲ್ಲೆಯ ತಗ್ಗು ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು ಅಧಿಕಾರಿಗಳು ಡ್ರೋನ್‌ಗಳನ್ನು ಬಳಸುತ್ತಿದ್ದಾರೆ. ವಿಶೇಷವಾಗಿ ರಾಜಂಪೇಟೆ ವಿಭಾಗದ ರೈಲ್ವೆ ಕೋಡೂರಿನಲ್ಲಿ ಅಕ್ಟೋಬರ್ 14 ರಿಂದ ಹೆಚ್ಚು ಮಳೆಯಾಗಿದೆ. ಡ್ರೋನ್‌ಗಳು ದುರ್ಬಲ ಸ್ಥಳಗಳ ನೈಜ-ಚಿತ್ರಗಳನ್ನು ಸೆರೆಹಿಡಿಯುತ್ತಿರುವುದರಿಂದ ಮೇಲ್ವಿಚಾರಣೆಗೆ ಅನುಕೂಲವಾಗಿದೆ.
ತುರ್ತು ಪರಿಸ್ಥಿತಿ ಸಂಪರ್ಕಿಸಿ
ತುರ್ತು ಪರಿಸ್ಥಿತಿಗಳಿಗಾಗಿ ತಿರುಪತಿಯ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ 0877-2236007, ಗುಡೂರು ಉಪ ಕಲೆಕ್ಟರ್ ಕಚೇರಿ 8624252807, ಸುಳ್ಳೂರುಪೇಟೆ ಆರ್‌ಡಿಒ ಕಚೇರಿ 8623295345 ಅಥವಾ ತಿರುಪತಿ ಆರ್‌ಡಿಒ ಕಚೇರಿ 7032157040 ಕ್ಕೆ ಸಂಪರ್ಕಿಸಬಹುದು, ಅನ್ನಮಯ್ಯ ಜಿಲ್ಲೆಯ ನಿವಾಸಿಗಳು ರಾಯಚೋಟಿ ನಿಯಂತ್ರಣ ಕೊಠಡಿ ನಂಬರ್ 08561-293006 ಗೆ ಸಂಪರ್ಕಿಸಬಹುದು ಮತ್ತು ನೆಲ್ಲೂರು ನಿವಾಸಿಗಳು ಸಹಾಯಕ್ಕಾಗಿ 0861-2331261, 7995576699, ಅಥವಾ 1077 ಗೆ ಡಯಲ್ ಮಾಡಬಹುದು.












Click it and Unblock the Notifications