ಮೇ 23ರಿಂದ ಅಪ್ಪಳಿಸಲಿದೆ ಮತ್ತೊಂದು ಚಂಡಮಾರುತ "ಯಾಸ್"
ನವದೆಹಲಿ, ಮೇ 18: ಗುಜರಾತ್ ಹಾಗೂ ಮಹಾರಾಷ್ಟ್ರ ಒಳಗೊಂಡಂತೆ ಹಲವು ರಾಜ್ಯಗಳಲ್ಲಿ ತೌಕ್ತೆ ಚಂಡಮಾರುತ ಆರ್ಭಟ ತೋರಿರುವ ಬೆನ್ನಲ್ಲೇ ಮತ್ತೊಂದು ಚಂಡಮಾರುತ ಅಪ್ಪಳಿಸುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಲಿರುವ ಈ ಚಂಡಮಾರುತ ದೇಶದ ಪೂರ್ವ ಹಾಗೂ ದಕ್ಷಿಣ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸಲಿದೆ ಎಂದು ಮುನ್ಸೂಚನೆ ನೀಡಿದೆ. ಮುಂದೆ ಓದಿ...

ಮೇ 23ರಿಂದ ಚಂಡಮಾರುತದ ಪ್ರಭಾವ
ಮೇ 23ರ ಸುಮಾರಿಗೆ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಲಿರುವ ಚಂಡಮಾರುತಕ್ಕೆ ಯಾಸ್ ಎಂದು ಹೆಸರಿಡಲಾಗಿದೆ. ಈ ಚಂಡಮಾರುತದ ಕುರಿತು ಹವಾಮಾನ ಇಲಾಖೆ ಚಂಡ ಮಾರುತ ವಿಭಾಗದ ಮುಖ್ಯಸ್ಥೆ ಸುನೀತಾ ದೇವಿ ಮಾಹಿತಿ ನೀಡಿದ್ದು, "ಮುಂದಿನ ವಾರ ಬಂಗಾಳ ಕೊಲ್ಲಿಯಲ್ಲಿ ಒತ್ತಡ ನಿರ್ಮಾಣವಾಗಬಹುದು. ಇದು ತೀವ್ರಗೊಳ್ಳುವ ಸಾಧ್ಯತೆಯ ಎಚ್ಚರಿಕೆ ನೀಡಲಾಗಿದೆ" ಎಂದಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಚಂಡಮಾರುತ ಸೃಷ್ಟಿಯಾಗಬಹುದು ಎಂದು ಇಲಾಖೆ ಹೇಳಿದೆ. ಈ ಚಂಡಮಾರುಕ್ಕೆ ಹೆಸರನ್ನು ಒಮನ್ ದೇಶ "ಯಾಸ್" ಎಂದು ಹೆಸರಿಸಿದೆ. ಇಂದಿನಿಂದ ತೌಕ್ತೆ ದುರ್ಬಲವಾಗಲಿದ್ದು, ಮೇ 23 ರಿಂದ 25ರ ನಡುವೆ ಯಾಸ್ ಚಂಡಮಾರುತ ಸೃಷ್ಟಿಯಾಗುವುದಾಗಿ ಇಲಾಖೆ ತಿಳಿಸಿದೆ.

ತೌಕ್ತೆಯಿಂದ ಹಲವು ರಾಜ್ಯಗಳಲ್ಲಿ ಹಾನಿ
ತೌಕ್ತೆ ಚಂಡಮಾರುತ ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಸಾಕಷ್ಟು ಹಾನಿಗೆ ಕಾರಣವಾಗಿದೆ. ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿಯೂ ಹಾನಿಯಾಗಿದೆ. ಚಂಡಮಾರುತದಿಂದ ಎರಡು ರಾಜ್ಯಗಳಲ್ಲಿ ಒಟ್ಟು 33 ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ನೂರಾರು ಮನೆಗಳು ನೆಲಸಮಗೊಂಡಿವೆ. ಇಂದಿನಿಂದ ತೌಕ್ತೆ ದುರ್ಬಲವಾಗಲಿದೆ ಎಂದು ತಿಳಿದುಬಂದಿದೆ.
Recommended Video

ಹಲವು ರಾಜ್ಯಗಳಲ್ಲಿ ಮಳೆ ಮುನ್ಸೂಚನೆ
"ಚಂಡಮಾರುತದ ಕನಿಷ್ಠ ಸ್ಥಿತಿಯಾದ 'ಡಿಪ್ರೆಶನ್' ಹಂತದಲ್ಲಿದ್ದು, ತೌಕ್ತೆ ಚಂಡಮಾರುತ ದುರ್ಬಲವಾಗಿದೆ, ಬುಧವಾರ ಬೆಳಗ್ಗೆ ದಕ್ಷಿಣ ರಾಜಸ್ಥಾನ ಹಾಗೂ ಗುಜರಾತ್ ಗಡಿಭಾಗವನ್ನು ಕೇಂದ್ರೀಕರಿಸಿದೆ" ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಗುಜರಾತ್‌ನಲ್ಲಿ ಇದರ ಪರಿಣಾಮವಾಗಿ ಮಳೆ ಮುಂದುವರಿದಿದೆ. ಇನ್ನೂ ಹಲವು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ. ರಾಜಸ್ಥಾನ, ಉತ್ತರಾಖಂಡ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಹಾಗೂ ದೆಹಲಿಯಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.












Click it and Unblock the Notifications