CM Change : ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸೋತರೆ ಕರ್ನಾಟಕದಲ್ಲಿ ಸಿ.ಎಂ ಚೇಂಜ್, ಸಂಪುಟ ಸರ್ಜರಿ ?!
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಹಾಗೂ ಮಹಾಯುತಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ. ಆದರೆ, ಮತದಾನೋತ್ತರ ಸಮೀಕ್ಷೆ (ಎಕ್ಸಿಟ್ ಪೋಲ್)ಗಳೆಲ್ಲವೂ ಬಹುತೇಕ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ. ಈ ರೀತಿ ಆದರೆ, ಕಾಂಗ್ರೆಸ್ ಮತ್ತೆ ನೆಲಕಚ್ಚಲಿದ್ದು, ಕರ್ನಾಟಕ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಸೇರಿದಂತೆ ಸಚಿವ ಸಂಪುಟಕ್ಕೆ ಮುಂದಿನ ದಿನಗಳಲ್ಲಿ ಸರ್ಜರಿ ಆಗಲಿದೆಯೇ ಎನ್ನಲಾಗುತ್ತಿದೆ. ಅದಕ್ಕೆ ಕಾರಣವೂ ಇದೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಮೊದ ಮೊದಲು ದಟ್ಟವಾಗಿತ್ತು. ಆದರೆ, ಕೊನೆ ಕೊನೆಯಲ್ಲಿ ಮಹಾರಾಷ್ಟ್ರದ ರಾಜಕೀಯ ಚಿತ್ರಣವೇ ಬದಲಾಗಿ ಹೋಗಿದೆ. ಈಗಾಗಲೇ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್‌ಗೆ ಜಾರ್ಖಂಡ್ ಹಾಗೂ ಮಹಾರಾಷ್ಟ್ರ ಚುನಾವಣೆಯಲ್ಲಿ ಅಧಿಕಾರಕ್ಕೆ ಹೇರುವುದು ತುಂಬಾ ಮುಖ್ಯವಾಗಿದೆ. ಹರಿಯಾಣದಲ್ಲಿ ಗೆಲ್ಲುವ ಪಂದ್ಯವನ್ನು ಕ್ಯಾಚ್ ಕೈ ಬಿಟ್ಟು ಸೋತಂತೆ ಕಾಂಗ್ರೆಸ್ ಸೋತಿತ್ತು. ಆದರೆ, ಆ ಸೋಲಿನ ಬೆನ್ನಲ್ಲೇ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬೇಕಾದ ಪೂರ್ವ ಸಿದ್ಧತೆಯನ್ನು ಕಾಂಗ್ರೆಸ್ ಮಾಡಿಕೊಳ್ಳಲಿಲ್ಲ ಎನ್ನುವ ಮಾತಿದೆ.

ಇದಕ್ಕೆ ತಕ್ಕಂತೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷಗಳಾದ ಶಿವಸೇನಾ (ಉದ್ಧವ್ ಠಾಕ್ರೆ) ಹಾಗೂ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್) ಬಣದಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ ಸಿಗಲಿಲ್ಲ. ಹೀಗಾಗಿ, ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಹೆಚ್ಚು ಸ್ಥಾನಗಳಲ್ಲಿ ಗೆಲುವುದು ಅನುಮಾನ ಅಂತಲೇ ಹೇಳಲಾಗುತ್ತಿದೆ. ಇನ್ನು ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ ಸೋತರೆ ಕರ್ನಾಟಕದ ಸಚಿವ ಸಂಪುಟ ಸಭೆಗೆ ಸರ್ಜರಿ ಫಿಕ್ಸ್ ಅಂತಲೇ ಹೇಳಲಾಗುತ್ತಿದೆ.
ಕರ್ನಾಟಕದ ಸಚಿವ ಸಂಪುಟ ಸಭೆಗೆ ಸರ್ಜರಿ ?
ದೇಶದ ಎಲ್ಲಾ ರಾಜ್ಯಗಳಲ್ಲಿ ನಿರಾಶದಾಯಕ ಪ್ರದರ್ಶನ ಹಾಗೂ ಸೋಲಿನ ನಂತರ ಕಾಂಗ್ರೆಸ್ ಪಕ್ಷಕ್ಕೆ ಆಶಾ ಕಿರಣದಂತೆ ಕಂಡಿದ್ದು ಕರ್ನಾಟಕ. ಕರ್ನಾಟಕದಲ್ಲಿ ಗೆದ್ದ ಮೇಲೆಯೇ ಕಾಂಗ್ರೆಸ್ ಹೊಸ ಹುರುಪಿನಿಂದ ಮೇಲೆದ್ದಿತ್ತು. ಆದರೆ, ಆ ಎಲ್ಲಾ ಉತ್ಸಾಹಗಳು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಮೂಲಕ ಅಂತ್ಯವಾಯಿತು. ಇದೀಗ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸೋತರೆ ಕರ್ನಾಟಕ ಸರ್ಕಾರದಲ್ಲಿ ಮಹತ್ವದ ಬದಲಾವಣೆಗಳು ನಡೆಯುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯದ ಪ್ರಕರಣಗಳಿಂದ ಸರ್ಕಾರಕ್ಕೆ ಮುಜುಗರ: ಇನ್ನು ಕರ್ನಾಟಕದ ಕೆಲವೊಂದು ಬೆಳವಣಿಗೆಗಳಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಮುಜುಗರವಾಗುತ್ತಿದೆ. ಅದರಲ್ಲಿ ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಮುಖವಾಗಿವೆ. ಇದಾದ ಮೇಲೆ ಹಳೇ ಹುಬ್ಬಳ್ಳಿ ಕೇಸ್ ವಾಪಸ್ ಪಡೆದಿದ್ದು, ವಕ್ಫ್ ಆಸ್ತಿ ವಿವಾದ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ರದ್ದು ವಿಚಾರ ಸೇರಿದಂತೆ ಹಲವು ವಿಷಯಗಳನ್ನು ವಿರೋಧ ಪಕ್ಷಗಳು ಸಮರ್ಥವಾಗಿ ಬಳಸಿಕೊಂಡಿವೆ.

ಪ್ರಧಾನಿ ನರೇಂದ್ರ ಮೋದಿ ಅವರೇ ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪ್ರಸ್ತಾಪಿಸಿದ್ದರು. ಇದರಿಂದ ಹರಿಯಾಣದಲ್ಲಿ ಕೊನೆಯ ಹಂತದಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿತ್ತು. ಆದರೆ, ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ಚುನಾವಣೆಯ ಬೆನ್ನಲ್ಲೇ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆಯೂ ನಡೆಯಲಿತ್ತು. ಈ ಕಾರಣಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆ ಇರಿಸಿತ್ತು.
ಚುನಾವಣೆ ಸಮಯದಲ್ಲಿ ಸಿ.ಎಂ ಬದಲಾವಣೆ ಅಥವಾ ಸಚಿವ ಸಂಪುಟ ಸರ್ಜರಿ ಮಾಡಿದರೆ ಎರಡನ್ನೂ ಏಕಕಾಲಕ್ಕೆ ನಿಭಾಯಿಸುವುದು ಹಾಗೂ ಚುನಾವಣೆ ನಡೆಯುವ ರಾಜ್ಯದ ಮತದಾರರಿಗೆ ತಪ್ಪು ಸಂದೇಶ ಹೋಗಲಿದೆ ಎನ್ನುವುದು ಕಾಂಗ್ರೆಸ್ ಹೈಕಮಾಂಡ್‌ನ ಲೆಕ್ಕಾಚಾರವಾಗಿತ್ತು. ಇದೀಗ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆ ಮುಗಿದಿದ್ದು, ನವೆಂಬರ್ 23ಕ್ಕೆ ಎರಡೂ ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
ಇನ್ನು ಕೆಲವೇ ತಿಂಗಳಲ್ಲಿ ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ಒಳಗೆ ಕರ್ನಾಟಕ ಹಾಗೂ ತೆಲಂಗಾಣ ಕಾಂಗ್ರೆಸ್‌ನಲ್ಲಿ ಕಾಂಗ್ರೆಸ್ ಹೈಕಮಾಂಡ್ ದೊಡ್ಡ ಸರ್ಜರಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ವಿಷಯ ಹಲವು ತಿಂಗಳಿನಿಂದ ಚರ್ಚೆಯಾಗುತ್ತಲ್ಲೇ ಇದೆ. ಇದೆಲ್ಲಕ್ಕೂ ಇಷ್ಟರಲ್ಲೇ ಉತ್ತರ ಸಿಗುವ ಸಾಧ್ಯತೆ ಇದೆ.












Click it and Unblock the Notifications