IAS Tukaram Mundhe: ಆಸ್ಪತ್ರೆಗಳ ದುಬಾರಿ ಬಿಲ್; ರೋಗಿಗಳ ಜೇಬಿಗೆ ಕತ್ತರಿ ಹಾಕುವ ವಿಷಯ ರಿವೀಲ್ ಮಾಡಿದ ತುಕಾರಾಮ್ ಮುಂಡೆ!
IAS Tukaram Mundhe: ಆಹಾರ ಮತ್ತು ಆರೋಗ್ಯ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಿರುವ ಮಹಾರಾಷ್ಟ್ರದ ಐಎಎಸ್ ಅಧಿಕಾರಿ ತುಕಾರಾಮ್ ಮುಂಡೆ (Tukaram Mundhe) ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಮಹಾರಾಷ್ಟ್ರದ ಮುಂಬೈನಂತಹ ನಗರಗಳಲ್ಲಿರು ಆಸ್ಪತ್ರೆಗಳ ದುಬಾರಿ ಬಿಲ್ನ ಬಗ್ಗೆ ಮಾತನಾಡಿದ್ದಾರೆ. ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಆಯುಕ್ತರಾಗಿರುವ ತುಕಾರಾಮ್ ಅವರು ಮಹಾರಾಷ್ಟ್ರದಲ್ಲಿ ಜಾರಿ ಮಾಡಿದ ಹಲವು ಪ್ರಮುಖ ನಿರ್ಧಾರಗಳಿಂದ ದೇಶದಾದ್ಯಂತ ಸುದ್ದಿಯಲ್ಲಿದ್ದಾರೆ.
ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಹಾಗೂ ಬಣ್ಣಗಳನ್ನು ಬಳಸುವ ವಿರುದ್ಧ ದೊಡ್ಡ ಮಟ್ಟದಲ್ಲಿ ಅಭಿಯಾನ ನಡೆಸಿದ್ದರು. ತುಕಾರಾಮ್ ಅವರು ದೊಡ್ಡ ಹಾಗೂ ಪ್ರತಿಷ್ಠಿತ ಹೋಟೆಲ್ಗಳ ಆಹಾರ ಪರಿಶೀಲನೆ ಹಾಗೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ದೇಶದಾದ್ಯಂತ ಸುದ್ದಿಯಲ್ಲಿದ್ದಾರೆ. ಇದೀಗ ಅವರು ಆಸ್ಪತ್ರೆಗಳ ಬಿಲ್ ವಿಚಾರವಾಗಿಯೂ ಮಾತನಾಡಿದ್ದಾರೆ.

ಆಸ್ಪತ್ರೆಯ ಬಿಲ್ನಲ್ಲಿ ಹೆಚ್ಚು ಹಣ ಖರ್ಚಾಗುವ ಭಾಗವು ಆಸ್ಪತ್ರೆಗೆ ಬರುವ ಮೊದಲೇ ಆರಂಭವಾಗುತ್ತದೆ. ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗುವ ರೋಗಿಗೆ ನೀಡುವ ವೈದ್ಯಕೀಯ ವಸ್ತುಗಳ ಬೆಲೆ ನಿಜವಾದ ವೆಚ್ಚವೇ ಅಥವಾ ಆಸ್ಪತ್ರೆಗೆ ತಲುಪುವ ಮೊದಲೇ ನಿಗದಿಪಡಿಸಿದ ಹೆಚ್ಚುವರಿ ಬೆಲೆಯೇ ಎನ್ನುವುದು ತಿಳಿಯುವುದಿಲ್ಲ. ಈ ಬಗ್ಗೆ ಸರಿಯಾದ ಮಾಹಿತಿ ಸಿಗದಿರುವುದು ಸಾರ್ವಜನಿಕ ಆರೋಗ್ಯದ ಪ್ರಮುಖ ಸಮಸ್ಯೆಯಾಗಿದೆ ಎಂದು ಐಎಎಸ್ ಅಧಿಕಾರಿ ತುಕಾರಾಮ್ ಮುಂಡೆ ಅವರು ಹೇಳಿದ್ದಾರೆ.
IAS Tukaram Mundhe: ಆಸ್ಪತ್ರೆಗಳಲ್ಲಿ ಹಲವು ಪಟ್ಟು ದುಬಾರಿ ಬಿಲ್
ಮುಖ್ಯವಾಗಿ ಅವರು ಮಾಹಾರಾಷ್ಟ್ರ ಆಸ್ಪತ್ರೆಗಳು ಹಾಗೂ ಮುಂಬೈ, ಪುಣೆಯಂತಹ ನಗರಗಳಲ್ಲಿರುವ ಆಸ್ಪತ್ರೆಗಳಲ್ಲಿ ಆಗುತ್ತಿರುವ ವೆಚ್ಚದ ಬಗ್ಗೆ ಮಾತನಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಆಸ್ಪತ್ರೆಗಳಲ್ಲಿ ಬಳಸುವ ವೈದ್ಯಕೀಯ ವಸ್ತುಗಳ ಬೆಲೆ ವಿಚಾರವಾಗಿ ನಡೆಸಿದ ಸಮೀಕ್ಷೆಯಲ್ಲಿ, ಹಲವು ವಸ್ತುಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ ಎಂದು ತುಕಾರಾಮ್ ಅವರು ಹೇಳಿದ್ದಾರೆ. ಈ ವಿಚಾರವು ಗಂಭೀರ ಚರ್ಚೆಗೆ ಕಾರಣವಾಗಿದೆ.
ಅಲ್ಲದೆ ಮುಂದುವರಿದು 11.05 ರೂಪಾಯಿಗೆ ಖರೀದಿಸುವ IV ಇನ್ಫ್ಯೂಷನ್ ಸೆಟ್ನ 325 ರೂಪಾಯಿ ಆಗಿತ್ತು. ಅಂದರೆ, ಅದರ ಮೇಲೆ ಶೇ.2,841ರಷ್ಟು ಹೆಚ್ಚುವರಿ ಬೆಲೆ ನಿಗದಿಪಡಿಸಲಾಗಿತ್ತು. 6.75 ರೂಪಾಯಿಗೆ ಖರೀದಿ ಮಾಡುವ ಸಿರಿಂಜ್ನ ಬೆಲೆ 57.20 ರೂಪಾಯಿ ಆಗಿತ್ತು. 29.41 ರೂ.ಕ್ಕೆ ಖರೀದಿಸಿದ ಕ್ಯಾತಿಟರ್ನ 310 ರೂ. ಆಗಿತ್ತು. ಇದು ಎಲ್ಲವು ಮೂಲ ಬೆಲೆಗಿಂತಲೂ ಹಲವು ಪಟ್ಟು ದುಬಾರಿ ಆಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇವು ರೋಗಿಗಳು ಆಯ್ಕೆ ಮಾಡಿಕೊಂಡು ಖರೀದಿಸುವ ವಸ್ತುಗಳಲ್ಲ. ಆಸ್ಪತ್ರೆಗೆ ದಾಖಲಾದಾಗ ರೋಗಿಗಳಿಗೆ ಬೆಲೆಗಳನ್ನು ಹೋಲಿಸಲು ಅಥವಾ ಕಡಿಮೆ ಬೆಲೆಯ ಪರ್ಯಾಯಗಳನ್ನು ಹುಡುಕಲು ಅವಕಾಶ ಇರುವುದಿಲ್ಲ. ಪ್ಯಾಕೆಟ್ನಲ್ಲಿರುವ ಎಂಆರ್ಪಿಯ ಬಗ್ಗೆ ಪ್ರಶ್ನಿಸುವ ಸಾಧ್ಯತೆಯೂ ಕಡಿಮೆ. ಈ MRPಯನ್ನು ಸಾಮಾನ್ಯವಾಗಿ ತಯಾರಕರು ಮತ್ತು ವಿತರಕರು ಮೊದಲೇ ನಿಗದಿಪಡಿಸುತ್ತಾರೆ. ಆದರೆ, ಅದು ನಿಜವಾದ ಖರೀದಿ ಬೆಲೆಗಿಂತ ತುಂಬಾ ಹೆಚ್ಚಿರಬಹುದು.
ಇದರಿಂದಾಗಿ, ಈ ವೆಚ್ಚವನ್ನು ಭರಿಸುವ ರೋಗಿಗಳು ಅಥವಾ ಅವರ ಕುಟುಂಬಗಳಿಗೆ ವಸ್ತುಗಳ ನಿಜವಾದ ಬೆಲೆ ಎಷ್ಟು ಎಂಬುದನ್ನು ತಿಳಿದುಕೊಳ್ಳಲು ಅಗತ್ಯವಾದ ಮಾಹಿತಿ ಸಿಗುವುದಿಲ್ಲ ಎಂದೂ ಮಹಾರಾಷ್ಟ್ರದ ಐಎಎಸ್ ಅಧಿಕಾರಿ ತುಕಾರಾಮ್ ಮುಂಡೆ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ನಿಯಂತ್ರಣದ ಕೊರತೆ ವ್ಯವಸ್ಥೆಯಲ್ಲೇ ಇದೆ: ನಿಗದಿತ ಔಷಧಿಗಳನ್ನು ಔಷಧಗಳ (ಬೆಲೆ ನಿಯಂತ್ರಣ) ಆದೇಶ, 2013 ರ ಅಡಿಯಲ್ಲಿ ಮಿತಿಗೊಳಿಸಲಾಗಿದೆ. ಹೆಚ್ಚಿನ ವೈದ್ಯಕೀಯ ಸಾಧನಗಳು ಮತ್ತು ವೈದ್ಯಕೀಯ ಬಳಕೆಯ ವಸ್ತುಗಳ ಬೆಲೆ ಮತ್ತು ಅದರ ಸುತ್ತಲಿನ ಮಾಹಿತಿ ಎರಡನ್ನೂ ಸಂಪೂರ್ಣವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿಲ್ಲ.
ಇನ್ನು ಮುಂದುವರಿದು ಈ ಸಂಶೋಧನೆಗಳನ್ನು ಪರಿಶೀಲಿಸಿ, ಔಷಧೀಯ ಇಲಾಖೆ ಮತ್ತು NPPAಗೆ ಕೆಲವು ಶಿಫಾರಸುಗಳನ್ನು ಮಾಡಲಾಗುತ್ತದೆ. ವ್ಯಾಪಾರಿಗಳು ಖರೀದಿಸುವ ಬೆಲೆ ಮತ್ತು ವಸ್ತುವಿನ MRP ನಡುವೆ ಎಷ್ಟು ವ್ಯತ್ಯಾಸ ಇರಬಹುದು ಎಂಬುದಕ್ಕೆ ಸ್ಪಷ್ಟ ನಿಯಮಗಳನ್ನು ರೂಪಿಸುವಂತೆ ಸೂಚಿಸಲಾಗಿದೆ. ಇದು ಬೆಲೆಯಲ್ಲಿನ ವ್ಯತ್ಯಾಸವನ್ನು ಮಾತ್ರವಲ್ಲ, ರೋಗಿಗಳಿಗೆ ಸರಿಯಾದ ಮಾಹಿತಿ ಸಿಗದಿರುವ ಸಮಸ್ಯೆಯನ್ನೂ ಪರಿಹರಿಸುವ ಒಂದು ಹೆಜ್ಜೆಯಾಗಿದೆ ಎಂದೂ ಐಎಎಸ್ ಅಧಿಕಾರಿ ತುಕಾರಾಮ್ ಮುಂಡೆ ಅವರು ಹೇಳಿದ್ದಾರೆ. ಈ ಟ್ವೀಟ್ ಬೆನ್ನಲ್ಲೇ ಆಸ್ಪತ್ರೆಗಳ ಬಿಲ್ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ.


Click it and Unblock the Notifications
