ಹೊಸ 'ರಾಗಾ': ಎಐಸಿಸಿ ಅಧ್ಯಕ್ಷರ ಎಲೆಕ್ಷನ್ ಬರಲಿ ಮುಂದೆ ನೋಡೋಣ
ನವದೆಹಲಿ, ಸೆಪ್ಟೆಂಬರ್ 09: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮುಂದಿನ ಸಾರಥಿ ಆಯ್ಕೆ ವಿಚಾರದಲ್ಲಿ ತಾವು ಭವಿಷ್ಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆಯುವ ಸಂದರ್ಭದಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಮತ್ತೊಮ್ಮೆ ಕಾಂಗ್ರೆಸ್ ಚುಕ್ಕಾಣಿ ಹಿಡಿಯಬೇಕೇ ಬೇಡವೇ ಎಂಬ ವಿಷಯದಲ್ಲಿ ನಾನು ತೀರಾ ಸ್ಪಷ್ಟವಾಗಿದ್ದೇನೆ. ಇದರಲ್ಲಿ ನನಗೆ ಯಾವುದೇ ರೀತಿ ಗೊಂದಲಗಳಿಲ್ಲ ಎಂದರು.
"ಎಐಸಿಸಿ ಅಧ್ಯಕ್ಷರ ಆಯ್ಕೆಗೆ ಚುನಾವಣೆಯನ್ನು ನಡೆಸುವ ಸಂದರ್ಭದಲ್ಲಿ ನನ್ನ ತೀರ್ಮಾನ ಏನು ಎಂಬುದನ್ನು ಹೇಳುತ್ತೇನೆ. ನಾನು ಪಕ್ಷದ ಅಧ್ಯಕ್ಷನಾಗಬೇಕೇ, ಬೇಡವೇ ಎಂಬುದು ಅಂದು ಸ್ಪಷ್ಟವಾಗುತ್ತದೆ, ದಯವಿಟ್ಟು ಅಲ್ಲಿಯವರೆಗೂ ಕಾದುನೋಡಿ," ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಹುಲ್ ಗಾಂಧಿ ರಾಜೀನಾಮೆ ಹಿಂದಿನ ಇತಿಹಾಸ
ಕಳೆದ 2019ರಲ್ಲಿ ನಡೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿತ್ತು. ಈ ಸೋಲಿನ ಹೊಣೆಯನ್ನು ಹೊತ್ತು ಅಂದು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ತದನಂತರದಲ್ಲಿ ಎಐಸಿಸಿ ಅಧ್ಯಕ್ಷರು ಯಾರಾಗಬೇಕು ಎಂಬುದರ ಬಗ್ಗೆ ಕಾಂಗ್ರೆಸ್ ಆಂತರಿಕ ವಲಯದಲ್ಲಿಯೇ ತೀವ್ರ ತಿಕ್ಕಾಟಕ್ಕೆ ಕಾರಣವಾಗಿತ್ತು.
ಕಾಂಗ್ರೆಸ್ ಆಂತರಿಕ ವಲಯದ ಗೊಂದಲಗಳ ಮಧ್ಯೆ ಸೋನಿಯಾ ಗಾಂಧಿಯವರೇ ಹಂಗಾಮಿ ಅಧ್ಯಕ್ಷರಾಗಿ ಕಾಂಗ್ರೆಸ್ ಚುಕ್ಕಾಣಿ ಹಿಡಿದುಕೊಂಡರು. ಅದಾಗ್ಯೂ, ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೊಬ್ಬ ಪ್ರಬಲ ಸಾರಥಿ ಅಗತ್ಯವಿದೆ. ಹೀಗಾಗಿಯೇ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ವಿಷಯ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.

ರಾಹುಲ್ ಗಾಂಧಿ ಹೊರತೂ, ಕಾಂಗ್ರೆಸ್ಸಿಗೆ ಗತಿಯಿಲ್ಲವೇ?
ಕಾಂಗ್ರೆಸ್ ಪಾಲಿಗೆ ರಾಹುಲ್ ಗಾಂಧಿಯನ್ನು ಬಿಟ್ಟರೆ ಬೇರೆ ಗತಿಯಿಲ್ಲ ಎಂಬ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಏಕೆಂದರೆ ಪ್ಯಾನ್ ಇಂಡಿಯಾ ನಾಯಕರ ಪಟ್ಟಿಯಲ್ಲಿ ರಾಹುಲ್ ಗಾಂಧಿಯ ಹೊರತಾಗಿ ಮತ್ತೊಬ್ಬ ನಾಯಕರು ಇಲ್ಲ. ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ವ್ಯಕಪಡಿಸಿರುವ ಅಭಿಪ್ರಾಯವನ್ನೇ ಪಕ್ಷದ ಬಹುತೇಕ ನಾಯಕರು ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರ ಭಾವನೆಗಳು ಒಂದೇ ರೀತಿಯಾಗಿದ್ದು, ರಾಹುಲ್ ಗಾಂಧಿಗೆ ಪಟ್ಟ ಕಟ್ಟಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಶೇ.100ರಷ್ಟು ರಾಹುಲ್ ಗಾಂಧಿಯೇ ಚುಕ್ಕಾಣಿ ಹಿಡಿಯುವುದು ಪಕ್ಕಾ ಎಂಬ ಅಭಿಪ್ರಾಯವನ್ನು ಸಲ್ಮಾನ್ ಖುರ್ಷಿದ್ ಮಂಡಿಸಿದ್ದಾರೆ.

ಎಐಸಿಸಿ ಆಂತರಿಕ ಮೂಲಗಳ ಅಭಿಪ್ರಾಯವೇನು?
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಹಲವು ನಾಯಕರು ರಾಹುಲ್ ಗಾಂಧಿಯನ್ನು ಪಕ್ಷದ ಮುಖ್ಯಸ್ಥರಾಗಿ ಅಧಿಕಾರಕ್ಕೆ ಮರಳುವಂತೆ ಸಾರ್ವಜನಿಕವಾಗಿ ಉತ್ತೇಜಿಸುತ್ತಿದ್ದಾರೆ. ಆದರೆ, ಈ ವಿಚಾರದಲ್ಲಿ ಅನಿಶ್ಚಿತತೆ ಮತ್ತು ಗೌಪ್ಯತೆ ಮುಂದುವರಿದಿದೆ. ರಾಹುಲ್ ಗಾಂಧಿಯು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರಾಗುವುದಿಲ್ಲ ಎಂಬ ತಮ್ಮ ನಿಲುವನ್ನು ಮುಂದುವರಿಸುತ್ತಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳೇ ಹೇಳುತ್ತಿವೆ. ಬುಧವಾರ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ಬಗ್ಗೆ ವರದಿಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ ಮತ್ತು ಪಕ್ಷದ ಆಡಳಿತವನ್ನು ಮತ್ತೆ ವಹಿಸಿಕೊಳ್ಳಲು ರಾಹುಲ್ ಗಾಂಧಿಯನ್ನು ಮನವೊಲಿಸಲು ಕೊನೆಯ ಕ್ಷಣದವರೆಗೂ ಪ್ರಯತ್ನಿಸಲಾಗುವುದು ಎಂದು ಹೇಳಿದರು

ಕಾಂಗ್ರೆಸ್ಸಿನಲ್ಲಿ ಜಿ-23 ಎಂಬ ಬಂಡಾಯ ನಾಯಕರ ಟೀಮ್
2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಸತತ ಎರಡನೇ ಬಾರಿ ಸೋಲು ಕಂಡ ನಂತರದಲ್ಲಿ ಅದರ ಹೊಣೆ ಹೊತ್ತುಕೊಂಡು ರಾಹುಲ್ ಗಾಂಧಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಹಂಗಾಮಿ ಅಧ್ಯಕ್ಷರಾಗಿ ಪಕ್ಷದ ಆಡಳಿತವನ್ನು ಸೋನಿಯಾ ಗಾಂಧಿ ವಹಿಸಿಕೊಂಡಿದ್ದರು. ಇದರ ಮಧ್ಯೆ ಕಾಂಗ್ರೆಸ್ ನಾಯಕತ್ವದ ಬಗ್ಗೆ ಜಿ-23 ನಾಯಕರು ಬಂಡಾಯದ ಬಾವುಟ ಹಾರಿಸಿದರು. ಇದರಿಂದ ಒಂದು ಹಂತದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸ್ವತಃ ಸೋನಿಯಾ ಗಾಂಧಿಯವರೇ ಮುಂದಾಗಿದ್ದರೂ, ಅವರನ್ನು ಮುಂದುವರಿಸಲು ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು.












Click it and Unblock the Notifications