'ನಿನ್ನನ್ನು ಎಕೆ-47ನಿಂದ ಉಡಾಯಿಸುವೆ...': ಸಲ್ಮಾನ್ ಖಾನ್ ಬಳಿಕ ಸಂಜಯ್ ರಾವತ್‌ಗೂ ಬಂತು ಜೀವ ಬೆದರಿಕೆ ಸಂದೇಶ
ಮುಂಬೈ ಏಪ್ರಿಲ್ 1: ಬಾಲಿವುಡ್ ನಟ ಸಲ್ಮಾನ್ ಖಾನ್ ಆದ ಬಳಿಕ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್ ಅವರಿಗೆ ಜೀವ ಬೆದರಿಕೆ ಸಂದೇಶ ಬಂದಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಸಂದೇಶ ಬಂದಿದೆ ಎಂದು ಸಂಜಯ್ ರಾವತ್ ಪೊಲೀಸ್ ದೂರು ದಾಖಲಿಸಿದ್ದಾರೆ.
ಸಂದೇಶದಲ್ಲಿ ಆರೋಪಿಗಳು ದೆಹಲಿಯಲ್ಲಿ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರಂತೆಯೇ ಸಂಜಯ್ ರಾವತ್ ಅವರನ್ನು ಹಿಂದೂ ವಿರೋಧಿ ಎಂದು ಕರೆದಿದ್ದಾರೆ.
"ತು ದೆಹಲಿ ಮೆ ಮಿಲ್, ತುಜೆ ಎಕೆ-47 ಸೆ ಉಡಾ ದುಂಗಾ. ತೇರಾ ಭಿ ಮೂಸ್ ವಾಲಾ ಹೋ ಜಾಯೇಗಾ. (ನನ್ನನ್ನು ದೆಹಲಿಯಲ್ಲಿ ಭೇಟಿ ಮಾಡು. ಎಕೆ-47 ನಿಂದ ಗುಂಡು ಹಾರಿಸುತ್ತೇನೆ. ನೀನು ಮೂಸ್ ವಾಲಾ ಅವರಂತೆಯೇ ಹತ್ಯೆಗೀಡಾಗುವೆ)" ಎಂದು ಬೆದರಿಕೆ ಸಂದೇಶ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಸಂಜಯ್ ರಾವತ್‌ಗೆ ಜೀವ ಬೆದರಿಕೆ
ಸಂಜಯ್ ರಾವತ್ ಮತ್ತು ಸಲ್ಮಾನ್ ಖಾನ್ ಅವರನ್ನು ಕೊಲ್ಲಲಾಗುವುದು ಎಂದು ಶಂಕಿತರು ತಿಳಿಸಿದ್ದಾರೆ. ಸಂದೇಶದ ಕೊನೆಯಲ್ಲಿ "ಸಲ್ಮಾನ್ ಔರ್ ತು ಫಿಕ್ಸ್ (ಸಲ್ಮಾನ್ ಖಾನ್ ಹಾಗೂ ಸಂಜಯ್ ರಾವತ್ ಫಿಕ್ಸ್)" ಎಂದು ಬರೆಯಲಾಗಿದೆ. ಪುಣೆ ಪೊಲೀಸರು ಶುಕ್ರವಾರ ರಾತ್ರಿ ಶಂಕಿತನನ್ನು ಬಂಧಿಸಿ ಮುಂಬೈ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಜಯ್ ರಾವತ್, ಪೊಲೀಸ್ ಠಾಣೆಯಲ್ಲೂ ಅದೇ ರೀತಿ ತಮ್ಮ ಮೇಲೆ ಹಲ್ಲೆಗೆ ಯತ್ನ ನಡೆದಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ, ಪತ್ರಾ ಚಾಲ್ ಭೂ ಹಗರಣ ಪ್ರಕರಣದಲ್ಲಿ ಸಂಜಯ್ ರಾವತ್ ಅವರನ್ನು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.

ಬಿಜೆಪಿ ವಿರುದ್ಧ ಸಂಜಯ್ ರಾವತ್ ಆಕ್ರೋಶ
"ಈ ಸರ್ಕಾರ (ಏಕನಾಥ್ ಶಿಂಧೆ) ಅಧಿಕಾರಕ್ಕೆ ಬಂದ ನಂತರ, ನಮ್ಮ ಪಾಳೆಯದ ನಾಯಕರ ಭದ್ರತೆಯನ್ನು ಕೆಳಗಿಳಿಸಲಾಯಿತು. ನಾನು ಈ ಬಗ್ಗೆ ಎಂದಿಗೂ ಪತ್ರ ಬರೆದಿಲ್ಲ. ಆದರೆ ಪದೇ ಪದೇ ಸಿಎಂ ಪುತ್ರ ಗೂಂಡಾಗಳೊಂದಿಗೆ ನಮ್ಮ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ನಾವು ಈ ಬಗ್ಗೆ ತಿಳಿಸಿದಾಗ ಗೃಹ ಸಚಿವಾಲಯ ಇದನ್ನು ನಿರ್ಲಕ್ಷಿಸುತ್ತದೆ'' ಎಂದು ರಾಜ್ಯಸಭಾ ಸಂಸದ ಹೇಳಿದರು.
"ಇದರ ಹಿಂದೆ ಯಾರಿದ್ದಾರೆನ್ನುವ ಸತ್ಯ ನಮಗೆ ತಿಳಿದಿದೆ. ಬೆದರಿಕೆಯ ಬಗ್ಗೆ ನಾನು ಪೊಲೀಸರಿಗೆ ತಿಳಿಸಿದ್ದೇನೆ. ನಾನು ಯಾರಿಗೂ ಹೆದರುವುದಿಲ್ಲ. ನಾನು ಜೈಲಿನಲ್ಲಿದ್ದಾಗ ನನಗೆ ಇದೇ ರೀತಿಯ ಬೆದರಿಕೆಗಳು ಬಂದವು. ಆದರೆ ಗೃಹ ಸಚಿವರು ಏನು ಮಾಡಿದರು? ಏನೂ ಮಾಡಲಿಲಿಲ್ಲ" ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಸಿಧು ಮೂಸ್ ಹತ್ಯೆ ಆರೋಪಿ ಲಾರೆನ್ಸ್ ಬಿಷ್ಣೋಯ್
ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಭದ್ರತೆಯನ್ನು ಹಿಂಪಡೆದ ನಂತರ ಕಳೆದ ವರ್ಷ ಮೇ ತಿಂಗಳಲ್ಲಿ ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್, ಸಿಧು ಮೂಸ್ ವಾಲಾ ಕೊಲೆಯ ಹೊಣೆ ಹೊತ್ತುಕೊಂಡಿದ್ದರು.

ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ
ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ವಿರುದ್ಧ ಹತ್ತಾರು ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ, ಬಿಷ್ಣೋಯ್ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಜೈಲಿನಿಂದ ಹೊಸ ಬೆದರಿಕೆಗಳನ್ನು ಹಾಕಿದ್ದರು. ಅವರ ಸಮುದಾಯ ಕೃಷ್ಣಮೃಗ ಹತ್ಯೆ ಪ್ರಕರಣದ ಬಗ್ಗೆ ನಟನ ಮೇಲೆ ಕೋಪಗೊಂಡಿದೆ ಮತ್ತು ನಟ ಅವರನ್ನು ಅವಮಾನಿಸಿದ್ದಾರೆ ಎಂದು ಸೇಡಿಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಜೈಲಿನಿಂದ ಟಿವಿ ಚಾನೆಲ್‌ನೊಂದಿಗಿನ ಸಂಭಾಷಣೆಯಲ್ಲಿ ಬಿಷ್ಣೋಯ್, 'ತಮ್ಮ ಅಂತಿಮ ಗುರಿ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು' ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಕೃಷ್ಣಮೃಗದ ವಿಚಾರದಲ್ಲಿ ನನಗೆ ಬಾಲ್ಯದಿಂದಲೂ ಸಲ್ಮಾನ್ ಮೇಲೆ ಕೋಪವಿತ್ತು. ನನ್ನ ಸಮುದಾಯದವರಿಗೆ ಹಣವನ್ನೂ ನೀಡಿದ್ದರು ಎಂದು ಅವರು ಹೇಳಿದ್ದಾರೆ.
1998 ರಲ್ಲಿ ಚಲನಚಿತ್ರವೊಂದರ ಚಿತ್ರೀಕರಣದ ಸಮಯದಲ್ಲಿ, ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಟಬು ಮತ್ತು ಸೋನಾಲಿ ಬೇಂದ್ರೆ ಜೊತೆಗೆ ರಾಜಸ್ಥಾನದ ಕಂಕಣಿ ಗ್ರಾಮದಲ್ಲಿ ಎರಡು ಕೃಷ್ಣಮೃಗಗಳನ್ನು ಶೂಟ್ ಮಾಡಿದ ಆರೋಪ ಹೊರಿಸಲಾಗಿತ್ತು.












Click it and Unblock the Notifications