ನನ್ನನ್ನು ತುಳಿಯಲು ಬಿಜೆಪಿಯಿಂದ ಸಿಬಿಐ ದುರ್ಬಳಕೆ - ಲಾಲು
ಪಾಟ್ನಾ, ಜುಲೈ 7: ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ ಆರ್.ಜೆ.ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ತಮ್ಮ ಮುಂದೆ ಶರಣಾಗಬೇಕು ಎಂಬ ಕಾರಣಕ್ಕೆ ಕೇಸರಿ ಪಾಳಯ ಮತ್ತು ಅದರ ಮಾತೃ ಸಂಸ್ಥೆ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಹರಿಹಾಯ್ದಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಅವರು ನರೇಂದ್ರ ಮೋದಿ ಸರಕಾರದ ವಿರುದ್ಧ ನಾನು ವಿಪಕ್ಷಗಳನ್ನು ಒಗ್ಗೂಡಿಸುತ್ತಿದ್ದೆ. ಈ ಕಾರಣಕ್ಕೆ ನನ್ನ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ.

"ಇದೆಲ್ಲಾ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ. ನಮ್ಮನ್ನು ತುಳಿದು ನಾವು ಬಿಜೆಪಿ ಮುಂದೆ ಮಂಡಿಯೂರಬೇಕು ಎಂಬುದು ಅವರ ಉದ್ದೇಶವಾಗಿದೆ," ಎಂದು ಲಾಲೂ ಹೇಳಿದ್ದಾರೆ.
ಇನ್ನು ಇಂದು ಮುಂಜಾನೆ ಲಾಲೂ ಪ್ರಸಾದ್ ಯಾದವ್ ಹಾಗೂ ಮತ್ತಿತರರರ ಮೇಲೆ ಸಿಬಿಐ ಕೇಸನ್ನು ದಾಖಲಿಸಿತ್ತು. 2006ರಲ್ಲಿ ರೈಲು ಮಂತ್ರಿಯಾಗಿದ್ದಾಗ ರಾಂಚಿ ಮತ್ತು ಪುರಿಯಲ್ಲಿ ಹೋಟೆಲ್ ಟೆಂಡರ್ ವಿಷಯದಲ್ಲಿ ನಡೆಸಲಾಗಿದ್ದ ಅಕ್ರಮಗಳಿಗೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲೂ ಪ್ರಸಾದ್ ಯಾದವ್, ಅವರ ಪತ್ನಿ ರಾಬ್ಡಿ ದೇವಿ, ಅವರಿಬ್ಬರ ಮಗ ತೇಜಸ್ವಿ, ಭಾರತೀಯ ರೈಲ್ವೆಯ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ನ ಮಾಜಿ ನಿರ್ದೇಶಕ ಪಿಕೆ ಗೋಯೆಲ್, ಲಾಲೂ ಅವರ ಅತ್ಯಾಪ್ತ ಪ್ರೇಮ್ ಚಂದ್ ಗುಪ್ತಾ ಅವರ ಪತ್ನಿ ಸರಳಾ ಗುಪ್ತಾ ಅವರ ಮೇಲೆ ಕೇಸನ್ನು ಹಾಕಲಾಗಿದೆ.












Click it and Unblock the Notifications