35ರಿಂದ 40 ರುಪಾಯಿಗೆ ಲೀಟರ್ ಪೆಟ್ರೋಲ್ ನೀಡುತ್ತೇನೆ: ರಾಮ್ ದೇವ್
ನವದೆಹಲಿ, ಸೆಪ್ಟೆಂಬರ್ 17: "ಬೆಲೆ ಏರಿಕೆಯನ್ನು ನಿಯಂತ್ರಿಸದಿದ್ದರೆ ನರೇಂದ್ರ ಮೋದಿ ಸರಕಾರಕ್ಕೆ ಇದೇ ದುಬಾರಿಯಾಗಿ ಪರಿಣಮಿಸಲಿದೆ" ಎಂದು ಯೋಗಗುರು ರಾಮದೇವ್ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ಪರವಾಗಿ ಚುನಾವಣೆ ಪ್ರಚಾರ ಮಾಡುವುದಿಲ್ಲ ಎಂದು ಸಹ ಹೇಳಿದ್ದಾರೆ.
ಅಷ್ಟೇ ಅಲ್ಲ, ಒಂದು ವೇಳೆ ತಮಗೆ ಅವಕಾಶ ನೀಡಿದ್ದರೆ ಈಗ ಪೆಟ್ರೋಲ್-ಡೀಸೆಲ್ ಸಿಗುತ್ತಿರುವ ಅರ್ಧ ಬೆಲೆಗೆ ಮಾರಾಟ ಮಾಡಿರುತ್ತಿದ್ದೆ ಎಂದು ಸಹ ಹೇಳಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ರಾಮ್ ದೇವ್ ಪ್ರಚಾರ ಮಾಡಿದ್ದರು. ಅದರ ಮರು ವರ್ಷ ಅವರನ್ನು ಹರಿಯಾಣದ ರಾಯಭಾರಿಯಾಗಿ ಮಾಡಲಾಯಿತು.
ಸಂಪುಟ ದರ್ಜೆ ಸ್ಥಾನ ಮಾನ ನೀಡಿ, ಬಾಬಾ ರಾಮ್ ದೇವ್ ಹರಿಯಾಣಕ್ಕೆ ಭೇಟಿ ನೀಡಿದಾಗೆಲ್ಲ ಸಚಿವರು ಬಳಸುವಂಥ ಕಾರು, ಭದ್ರತಾ ಸಿಬ್ಬಂದಿ ಇತ್ಯಾದಿ ಸವಲತ್ತುಗಳನ್ನು ನೀಡಲಾಗಿತ್ತು. ನೀವು ಮುಂದೆ ಬಿಜೆಪಿ ಪರವಾಗಿ ಪ್ರಚಾರ ಮಾಡಬಹುದಾ ಎಂದು ಪ್ರಶ್ನಿಸಿದ್ದಕ್ಕೆ, ನಾನು ಯಾಕೆ ಪ್ರಚಾರ ಮಾಡಲಿ ಎಂದು ಮರು ಪ್ರಶ್ನೆ ಮಾಡಿದ್ದಾರೆ.

ರಾಜಕಾರಣದಿಂದ ಸಂಪೂರ್ಣ ವಿಮುಖನಾಗಿದ್ದೇನೆ
ನಾನು ಬಹಳ ನಿಧಾನವಾಗಿ ರಾಜಕಾರಣದಿಂದ ದೂರ ಉಳಿಯುತ್ತಿದ್ದೇನೆ ಎಂದು 52 ವರ್ಷದ ರಾಮ್ ದೇವ್ ಉತ್ತರ ನೀಡಿದ್ದಾರೆ. "ನಾನು ರಾಜಕಾರಣದಿಂದ ಪೂರ್ತಿಯಾಗಿ ವಿಮುಖನಾಗಿದ್ದೇನೆ. ನಾನು ಎಲ್ಲ ಪಕ್ಷದೊಂದಿಗೆ ಇದ್ದೇನೆ ಮತ್ತು ಯಾವ ಪಕ್ಷದ ಜತೆಗೂ ಇಲ್ಲ" ಎಂದು ಅವರು ಉತ್ತರಿಸಿದ್ದಾರೆ.

ಪ್ರಧಾನಿಯನ್ನು ಟೀಕಿಸುವುದು ಜನರ ಮೂಲಭೂತ ಹಕ್ಕು
ತಮ್ಮ ಈ ನಿರ್ಧಾರಕ್ಕೆ ಯಾವುದೇ ಕಾರಣ ನೀಡದ ರಾಮ್ ದೇವ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದು ಜನರ ಮೂಲಭೂತ ಹಕ್ಕು. ಆದರೆ ಪ್ರಧಾನಮಂತ್ರಿ ಸ್ವಚ್ಛ ಭಾರತ ಅಭಿಯಾನದಂಥ ಒಳ್ಳೆ ಕೆಲಸ ಮಾಡಿದ್ದಾರೆ. ಹಗರಣ ಇಲ್ಲದ ಆಡಳಿತ ನೀಡಿದ್ದಾರೆ ಎಂದು ಕೂಡ ಅವರು ಹೇಳಿದ್ದಾರೆ.

ಶ್ರೀಮಂತರ ಮೇಲೆ ತೆರಿಗೆ ವಿಧಿಸಬಹುದು
ಪೆಟ್ರೋಲ್-ಡೀಸೆಲ್ ಗೆ ಕೂಡ ಸರಕಾರ ಜಿಎಸ್ ಟಿ ಅನ್ವಯಿಸಬೇಕು. ಆದಾಯ ಕಳೆದುಕೊಳ್ಳುವುದನ್ನು ಈ ದೇಶದಲ್ಲಿ ತಡೆಯುವುದಕ್ಕೆ ಸಾಧ್ಯವಿಲ್ಲ. ಆದರೆ ಶ್ರೀಮಂತರ ಮೇಲೆ ತೆರಿಗೆ ಹೇರಬಹುದು. ಇನ್ನು ಶೇ 28 ರಷ್ಟು ಜಿಎಸ್ ಟಿ ಹಾಕುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಅವಕಾಶ ನೀಡಿದರೆ 35ರಿಂದ 40 ರುಪಾಯಿಗೆ ಪೆಟ್ರೋಲ್
ಪತಂಜಲಿ ಆಯುರ್ವೇದ ರೂಪಿಸಿದವರಿಗೆ ಅಗ್ಗದ ಬೆಲೆಗೆ ಜನರಿಗೆ ಪೆಟ್ರೋಲ್ ನೀಡುವ ಉದ್ದೇಶ ಇದೆಯಾ ಎಂದು ಪ್ರಶ್ನಿಸಿದ್ದಕ್ಕೆ, ಒಂದು ವೇಳೆ ಸರಕಾರ ನನಗೆ ಅವಕಾಶ ನೀಡಿದರು ಮತ್ತು ತೆರಿಗೆಯಲ್ಲಿ ಸ್ವಲ್ಪ ಮಟ್ಟಿಗೆ ವಿನಾಯಿತಿ ನೀಡಿದರೆ ಭಾರತದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು 35ರಿಂದ 40 ರುಪಾಯಿಗೆ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.












Click it and Unblock the Notifications