Breaking News: ರಾಜೀನಾಮೆ ಘೋಷಣೆ ಮಾಡಿದ ಸಿಎಂ ಅರವಿಂದ ಕೇಜ್ರಿವಾಲ್
ನವದೆಹಲಿ, ಸೆಪ್ಟೆಂಬರ್ 15: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಎಎಪಿ ಪಕ್ಷದ ನಾಯಕ, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜೀನಾಮೆ ಘೋಷಣೆ ಮಾಡಿದರು. ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಎರಡು ದಿನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ ಕೇಜ್ರಿವಾಲ್ ರಾಜೀನಾಮೆ ನೀಡುವ ಕುರಿತು ಘೋಷಿಸಿದ್ದಾರೆ.
ಭಾನುವಾರ ದೆಹಲಿಯ ಆಮ್ ಆದ್ಮಿ ಪಕ್ಷದ ಕಛೇರಿಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಅರವಿಂದ ಕೇಜ್ರಿವಾಲ್ ರಾಜೀನಾಮೆ ಘೋಷಣೆ ಮಾಡಿದರು. "ಎರಡು ದಿನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಜನರು ತಮ್ಮ ತೀರ್ಪು ನೀಡುವ ತನಕ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲಾರೆ" ಎಂದು ಅರವಿಂದ ಕೇಜ್ರಿವಾಲ್ ಹೇಳಿದರು.

"ಆರೋಪ ಹೊತ್ತುಕೊಂಡು ಕುರ್ಚಿಯಲ್ಲಿ ಕೂರುವುದಿಲ್ಲ. ಅಗ್ನಿಪರೀಕ್ಷೆಗೆ ಸಿದ್ದವಾಗಿದ್ದೇವೆ. ಮನೀಶ್ ಸಿಸೋಡಿಯಾ ಸೇರಿದಂತೆ ಎಲ್ಲರೂ ಚುನಾವಣೆಗೆ ಹೋಗುತ್ತೇವೆ. ಆಮ್ ಆದ್ಮಿ ಪಕ್ಷ ಮತ್ತು ನಾವು ಅರ್ಹತೆ ಹೊಂದಿದ್ದರೆ ಮಾತ್ರ ಮತ ನೀಡಿ, ಜನರ ತೀರ್ಪನ್ನು ನಾವು ಗೌರವಿಸುತ್ತೇವೆ" ಎಂದು ಅರವಿಂದ ಕೇಜ್ರಿವಾಲ್ ಘೋಷಣೆ ಮಾಡಿದರು.
"ಎಎಪಿ ಪಕ್ಷ ಮತ್ತು ನನ್ನ ಭವಿಷ್ಯವನ್ನು ಜನರು ತೀರ್ಮಾನ ಮಾಡುತ್ತಾರೆ. ನಾವು ಪ್ರಾಮಾಣಿಕರಾಗಿ ಇದ್ದರೆ ಮಾತ್ರ ಮತ ನೀಡಿ. ಎರಡು ದಿನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ" ಎಂದು ಅರವಿಂದ ಕೇಜ್ರಿವಾಲ್ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು. ತಿಹಾರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಅರವಿಂದ ಕೇಜ್ರಿವಾಲ್ ಭಾನುವಾರ ಕಾರ್ಯಕರ್ತರನ್ನು ಭೇಟಿಯಾಗಿದ್ದರು. ಆಗ ಈ ಮಹತ್ವದ ಘೋಷಣೆ ಮಾಡಿದ್ದಾರೆ.
"ಜನರು ತಮ್ಮ ತೀರ್ಪು ನೀಡುವ ತನಕ ನಾನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರುವುದಿಲ್ಲ. ನಾನು ದೆಹಲಿಯ ಪ್ರತಿ ಮನೆ, ಪ್ರತಿ ರಸ್ತೆಗೆ ಹೋಗಿ ಜನರನ್ನು ಭೇಟಿಯಾಗುತ್ತೇನೆ. ಅವರು ನೀಡುವ ತೀರ್ಮಾನದ ಮೇಲೆ ಎಎಪಿ ಮತ್ತು ನನ್ನ ಭವಿಷ್ಯ ಅಡಗಿದೆ" ಎಂದು ಅರವಿಂದ ಕೇಜ್ರಿವಾಲ್ ಹೇಳಿದರು. ಈ ಮೂಲಕ ಹೊಸ ಸಿಎಂ ಬರಲಿದ್ದಾರೆ ಎಂದು ಕೇಜ್ರಿವಾಲ್ ಸೂಚನೆ ಕೊಟ್ಟರು.
2020ರಲ್ಲಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 62 ಸ್ಥಾನಗಳಲ್ಲಿ ಜಯಗಳಿಸಿತ್ತು. ಫೆಬ್ರವರಿ 16ರಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ರಾಮ್ ಲೀಲಾ ಮೈದಾನದಲ್ಲಿ 3ನೇ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈಗ ಅವರು ರಾಜೀನಾಮೆ ನೀಡಿದರೆ ಹೊಸ ಮುಖ್ಯಮಂತ್ರಿ ಆಯ್ಕೆಯಾಗಬೇಕಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇಬ್ಬರೂ ಇಡಿ ಬಳಿಕ ಸಿಬಿಐನಿಂದ ಬಂಧನಕ್ಕೊಳಗಾಗಿದ್ದರು. ತಿಹಾರ್ ಜೈಲಿನಲ್ಲಿದ್ದರೂ ಸಹ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ.
ಶುಕ್ರವಾರ ಸುಪ್ರೀಂಕೋರ್ಟ್ ಕೇಜ್ರಿವಾಲ್‌ಗೆ ಜಾಮೀನು ನೀಡಿತ್ತು. ಆದರೆ ಮುಖ್ಯಮಂತ್ರಿ ಕಛೇರಿಗೆ ತೆರಳುವಂತಿಲ್ಲ. ಯಾವುದೇ ಕಡತಕ್ಕೆ ಸಹಿ ಹಾಕುವಂತಿಲ್ಲ ಎಂದು ಷರತ್ತುಗಳನ್ನು ವಿಧಿಸಿತ್ತು. ಮನೀಶ್ ಸಿಸೋಡಿಯಾ ಸಹ ಕೆಲವು ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡಿದ್ದರು.
2020ರಲ್ಲಿ ದೆಹಲಿಯಲ್ಲಿ ಸರ್ಕಾರ ರಚನೆ ಮಾಡಿ, ಮುಖ್ಯಮಂತ್ರಿಯಾದ ಅರವಿಂದ ಕೇಜ್ರಿವಾಲ್ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಹೊಸ ಮುಖ್ಯಮಂತ್ರಿಯ ಆಯ್ಕೆಗೆ ಮಂಗಳವಾರ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.












Click it and Unblock the Notifications