ರಾಹುಲ್ ರ್‍ಯಾಲಿಯಲ್ಲಿ ಭಾರೀ ಜನಸ್ತೋಮ, ಕಾಲ್ತುಳಿತ: ಮುಗಿಯಿತಾ ಮೋದಿ ಹವಾ?
ಭಾನುವಾರ ಉತ್ತರ ಪ್ರದೇಶದ ಫುಲ್‌ಪುರದಲ್ಲಿ ನಡೆದ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಚುನಾವಣಾ ರ್‍ಯಾಲಿಯಲ್ಲಿ ಭಾರಿ ಜನಸ್ತೋಮ ಸೇರಿತ್ತು. ನೆರೆದಿರುವ ಜನರನ್ನು ನಿಯಂತ್ರಿಸಲು ಪೊಲೀಸರು, ಭದ್ರತಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಪಡಿಲ ಮಹಾದೇವ್‌ನಲ್ಲಿ ನಡೆದ ಇಂಡಿಯಾ ಒಕ್ಕೂಟದ ರ್‍ಯಾಲಿಯಲ್ಲಿ ಉಭಯ ಪಕ್ಷಗಳಿಂದ ಭಾರಿ ಬೆಂಬಲಿಗರು ಸೇರಿದ್ದರು, ಜನ ವೇದಿಕೆ ಮೇಲೆ ಬರಲಿ ಬ್ಯಾರಿಕೇಡ್‌ಗಳನ್ನು ಮುರಿದ ಕಾರಣ, ಗೊಂದಲದ ವಾತಾವರಣ ಉಂಟಾಗಿತ್ತು, ಸಮಾಧಾನದಿಂದ ಇರುವಂತೆ ರಾಹುಲ್ ಗಾಂಧಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.

ಬೆಂಬಲಿಗರನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದ್ದಂತೆ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ರ್‍ಯಾಲಿಯನ್ನು ಅರ್ಧಕ್ಕೆ ಬಿಟ್ಟು ಹೊರಟರು.
ಹೆಚ್ಚುತ್ತಿದೆಯಾ ರಾಹುಲ್ ಜನಪ್ರಿಯತೆ?
ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಕಷ್ಟ ಪಡುತ್ತಿದೆ ಎನ್ನುವುದು ಗೊತ್ತಿರುವ ವಿಚಾರವೇ, ಕಾಂಗ್ರೆಸ್ ಅಸ್ತಿತ್ವವೇ ಇರುವುದಿಲ್ಲ ಎನ್ನುವ ಹೊತ್ತಿನಲ್ಲಿ 'ಭಾರತ್ ಜೋಡೊ ಯಾತ್ರೆ' ಮೂಲಕ ರಾಹುಲ್ ಗಾಂಧಿ ದೇಶಾದ್ಯಂತ ಸಂಚರಿಸಿ, ಪಕ್ಷಕ್ಕೆ, ಕಾರ್ಯಕರ್ತರಿಗೆ ಶಕ್ತಿ ತುಂಬಿದರು.
ಕಾಂಗ್ರೆಸ್ ಕತೆ ಮುಗಿಯಿತು ಎನ್ನುವಾಗಲೇ ಕರ್ನಾಟಕ, ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಇದು ಪಕ್ಷಕ್ಕೆ ಮತ್ತಷ್ಟು ಬಲ ಕೊಟ್ಟಿದೆ.
ಲೋಕಸಭಾ ಚುನಾವಣೆಯಲ್ಲಿ 'ಇಂಡಿಯಾ' ಒಕ್ಕೂಟದ ಹೆಸರಿನಲ್ಲಿ ವಿಪಕ್ಷಗಳು ಒಂದಾಗಿದ್ದು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಹೋರಾಡುತ್ತಿದೆ. ಅದಕ್ಕೆ ತಕ್ಕಂತೆ ಈಗ ರಾಹುಲ್ ಗಾಂಧಿ ಹೋದಲ್ಲೆಲ್ಲಾ ಹೆಚ್ಚಿನ ಜನ ಸೇರುತ್ತಿರುವುದು ಕಾಂಗ್ರೆಸ್, ಇಂಡಿಯಾ ಒಕ್ಕೂಟದ ಆತ್ಮವಿಶ್ವಾಸ ಹೆಚ್ಚಿಸಿದೆ.
ಉತ್ತರ ಪ್ರದೇಶದಲ್ಲಿ ನೆರೆದ ಜನಸ್ತೋಮ ನೋಡಿದಾಗ ಬಿಜೆಪಿಗೂ ಕೂಡ ಸಣ್ಣ ಆತಂಕ ಶುರುವಾಗಿರುವುದು ಸುಳ್ಳಲ್ಲ. ಈ ಬಾರಿ 400 ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ಕನಸು ಕಾಣುತ್ತಿದ್ದ ಬಿಜೆಪಿಗೆ ಅದು ಸುಲಭವಲ್ಲ ಎಂದು ನಿಧಾನವಾಗಿ ಅರಿವಾಗುತ್ತಿದೆ. ಭಾಷಣದಲ್ಲಿ ಮೋದಿ 400 ಸ್ಥಾನ ಗೆಲ್ಲುತ್ತೇವೆ ಎಂದರೂ, ಅದು ಸಾಧ್ಯವಾಗುವುದು ಕಷ್ಟ ಎನ್ನುವುದು ಅವರಿಗೂ ಗೊತ್ತಿದೆ.
ಮೋದಿ ಜನಪ್ರಿಯತೆ ಕುಸಿಯಿತಾ?
ನರೇಂದ್ರ ಮೋದಿ ಅವರ ಜನಪ್ರಿಯತೆ ಕಡಿಮೆಯಾಗಿದೆಯಾ ಎನ್ನುವ ಅನುಮಾನ ಕೂಡ ಶುರುವಾಗಿದೆ. ನರೇಂದ್ರ ಮೋದಿ ಅವರ ಅಬ್ಬರದ ಭಾಷಣ ಪ್ರಚಾರದ ನಡುವೆಯೂ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ.
ಉತ್ತರ ಭಾರತದಲ್ಲಿ ಮೋದಿ ಜನಪ್ರಿಯತೆ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಆಗಿಲ್ಲವಾದರೂ, ದಕ್ಷಿಣ ಭಾರರದಲ್ಲಿ ಮೋದಿ ಮ್ಯಾಜಿಕ್ ನಡೆಯುತ್ತಿಲ್ಲ ಎನ್ನುವುದು ಕೂಡ ಒಪ್ಪಿಕೊಳ್ಳಬೇಕಾದ ಸತ್ಯ.
2014 ಮತ್ತು 2019 ರ ಲೋಕಸಭಾ ಚುನಾವಣೆಯಂತೆ ಬಿಜೆಪಿಗೆ ಈ ಬಾರಿ ಗೆಲುವು ಸುಲಭವಾಗಿ ಸಿಗುವುದಿಲ್ಲ ಎನ್ನುವದಂತೂ ಸತ್ಯ, ಆದರೂ ಮತದಾರ ಕೊನೆ ಕ್ಷಣದವರೆಗೂ ಗುಟ್ಟು ಬಿಟ್ಟುಕೊಟ್ಟಿಲ್ಲ, ಜೂನ್ 4 ರಂದು ದೇಶದ ಜನರ ಒಲವು ಯಾರ ಕಡೆಗೆ ಇದೆ ಎನ್ನುವುದು ಗೊತ್ತಾಗಲಿದೆ.












Click it and Unblock the Notifications