ಮಳೆ ಬಂದರೆ ಸೋರುತ್ತಿದ್ದ ಸರ್ಕಾರಿ ಶಾಲೆಗೀಗ ಹೈಟೆಕ್ ಸ್ಪರ್ಶ: ಇದು ಝೀರೋ ಗ್ರಾವಿಟಿ ತಂಡದ ಅದ್ಭುತ ಸಾಧನೆ
ಶಾಲೆಯೆಂದರೆ ಮಕ್ಕಳ ಪಾಲಿಗೆ ಎರಡನೇ ಮನೆ ಇದ್ದಂತೆ. ಆದರೆ ಆ ಮನೆಯೇ ಕುಸಿದು ಬೀಳುವ ಹಂತದಲ್ಲಿದ್ದರೆ, ಹೆಂಚುಗಳು ಒಡೆದು ಮಳೆ ನೀರು ತರಗತಿಯೊಳಗೆ ಸೋರುತ್ತಿದ್ದರೆ ಅಲ್ಲಿ ಕಲಿಯುವ ಮಕ್ಕಳ ಮನಸ್ಥಿತಿ ಹೇಗಿರಬಹುದು? ಇಂತಹದ್ದೇ ಸ್ಥಿತಿಯಲ್ಲಿದ್ದ ಮಹಾರಾಷ್ಟ್ರದ ಶಾಲೆಯೊಂದಕ್ಕೆ ಯುವಕರ ತಂಡವೊಂದು ಜೀವಕಳೆ ತುಂಬಿದೆ.
ಹೌದು, ಪಾಳುಬಿದ್ದ ಕಟ್ಟಡವನ್ನ ಮತ್ತೆ ಒಂದೊಳ್ಳೆ ಕಲಿಕಾ ಕೇಂದ್ರವಾಗಿ ಪರಿವರ್ತಿಸಿರುವ ಈ ಕಥೆ ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಫೂರ್ತಿ ಎನ್ನಬಹುದು.

ನಾಗ್ಪುರದ ಸಿವಿಲ್ ಲೈನ್ಸ್‌ನಲ್ಲಿರುವ ಗಾರ್ಡಿನರ್ ಹೈಸ್ಕೂಲ್ 1933ರಲ್ಲಿ ನಿರ್ಮಾಣವಾದ ಅತ್ಯಂತ ಹಳೆಯ ಶಾಲೆಯಾಗಿತ್ತು. ವರ್ಷಗಳು ಉರುಳಿದಂತೆ ಕಟ್ಟಡದ ಸ್ಥಿತಿ ಹದಗೆಟ್ಟಿತ್ತು. ಆಸ್ಥಾ ಕೊಹ್ಲೆ ಹಾಗೂ ಯೋಗೇಶ್ವರಿ ಚಾಮತ್ ಎಂಬ ವಿದ್ಯಾರ್ಥಿನಿಯರು ಹೇಳುವಂತೆ, ಮಳೆಗಾಲ ಬಂತೆಂದರೆ ತರಗತಿಯೊಳಗೆಲ್ಲಾ ನೀರು ಸೋರುತ್ತಿತ್ತು. ಗೋಡೆಯ ಪ್ಲಾಸ್ಟರ್ ಕಿತ್ತುಬರುತ್ತಿತ್ತು, ಹೆಂಚುಗಳು ಕೆಳಗೆ ಬೀಳುತ್ತಿದ್ದವು.
ಇಷ್ಟೇ ಇಲ್ಲದೇ ಒಮ್ಮೆ ಮಕ್ಕಳು ಆಟವಾಡುತ್ತಿದ್ದಾಗ ಗೋಡೆಯ ಇಟ್ಟಿಗೆಯೊಂದು ಕೆಳಗೆ ಬಿದ್ದಿತಂತೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿರಲಿಲ್ಲ. ಶಾಲೆಯ ಆಡಳಿತ ಮಂಡಳಿಯು ಕಟ್ಟಡದ ಸುರಕ್ಷತೆಯ ಬಗ್ಗೆ ತೀವ್ರ ಆತಂಕದಲ್ಲಿತ್ತು. ಆದರೆ, ಒಂದು ಬೇಸಿಗೆ ರಜೆ ಈ ಶಾಲೆಯ ಅದೃಷ್ಟವನ್ನೇ ಬದಲಾಯಿಸಿತು. ರಜೆ ಮುಗಿದು ಶಾಲೆಗೆ ಮರಳಿದ ಮಕ್ಕಳಿಗೆ ಅಲ್ಲಿ ಅಚ್ಚರಿಯೊಂದು ಕಾದಿತ್ತು.
ಝೀರೋ ಗ್ರಾವಿಟಿ ಸಂಸ್ಥೆಯ ಕೈಚಳಕ
ಈ ಶಾಲೆಯ ಬದಲಾವಣೆಯ ಹಿಂದಿರುವ ಶಕ್ತಿ ಝೀರೋ ಗ್ರಾವಿಟಿ ಎಂಬ ಯುವಕರ ತಂಡ. ಡಾ. ಶ್ರೀಕಾಂತ್ ಜಿಚ್ಕರ್ ಫೌಂಡೇಶನ್ ಅಡಿಯಲ್ಲಿ ಮೈತ್ರಿ ಜಿಚ್ಕರ್ ಅವರು 2008ರಲ್ಲಿ ಈ ಸಂಸ್ಥೆಯನ್ನ ಹುಟ್ಟುಹಾಕಿದರು. 2010-11ರ ಸುಮಾರಿಗೆ ಮೈತ್ರಿ ಅವರು ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾಗ, ಮಳೆ ನೀರು ಬೀಳದ ಜಾಗದಲ್ಲಿ ಮಕ್ಕಳು ಗುಂಪಾಗಿ ಕುಳಿತಿರುವುದನ್ನ ಕಂಡರು. ಆಗ ಬಡತನದ ಕಾರಣಕ್ಕೆ ಮಗುವೊಂದು ತಾನು ಬರೆದಿದ್ದನ್ನು ಅಳಿಸಿ ಮತ್ತೆ ಅದೇ ಪುಸ್ತಕದಲ್ಲಿ ಬರೆಯುತ್ತಿರುವುದನ್ನು ನೋಡಿದಾಗ ಅವರಿಗೆ ಬೇಸರವಾಗಿತ್ತು.
ಬಡತನದ ಹಿನ್ನೆಲೆಯಿಂದ ಬಂದ ಮಾತ್ರಕ್ಕೆ ಆ ಮಕ್ಕಳು ಇಂತಹ ವ್ಯವಸ್ಥೆಯಲ್ಲಿ ಕಲಿಯಬಾರದು ಎಂದು ನಿರ್ಧರಿಸಿದ ಅವರು, 2013ರಲ್ಲಿ ಹ್ಯಾಪಿ ಸ್ಕೂಲ್ ಪ್ರಾಜೆಕ್ಟ್ ಆರಂಭಿಸಿದರು.
ಹ್ಯಾಪಿ ಸ್ಕೂಲ್ ಪ್ರಾಜೆಕ್ಟ್ ಮೂಲಕ ಶಾಲೆಯ ಅಭಿವೃದ್ಧಿ
ಕೇವಲ ಶಾಲೆಗೆ ಸುಣ್ಣ-ಬಣ್ಣ ಬಳಿಯುವುದು ಮಾತ್ರವಲ್ಲದೆ, ಇಡೀ ಕಟ್ಟಡವನ್ನ ಒಂದು ಕಲಿಕಾ ಸಾಧನವನ್ನಾಗಿ ಪರಿವರ್ತಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಗಾರ್ಡಿನರ್ ಹೈಸ್ಕೂಲ್‌ನಲ್ಲಿ ಮೊದಲು ಕಟ್ಟಡದ ಸುರಕ್ಷತೆಗೆ ಒತ್ತು ನೀಡಲಾಯಿತು. ಸೋರುತ್ತಿದ್ದ ಛಾವಣಿಯನ್ನ ಸರಿಪಡಿಸಿ, ಸುರಕ್ಷಿತವಾದ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.
ತರಗತಿಯ ಗೋಡೆಗಳ ಮೇಲೆ ವಿಜ್ಞಾನದ ಪರಿಕಲ್ಪನೆಗಳು, ಸೌರವ್ಯೂಹದ ಚಿತ್ರಗಳು ಮತ್ತು ಗಣಿತದ ಸೂತ್ರಗಳನ್ನ ಆಕರ್ಷಕವಾಗಿ ಬಿಡಿಸಲಾಯಿತು. ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ನೀಡಲು ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯವನ್ನ ನಿರ್ಮಿಸಲಾಯಿತು. ಶಾಲೆಯಲ್ಲಿ ಓದುವ ವಾತಾವರಣವನ್ನ ನಿರ್ಮಿಸಲು ಸುಸಜ್ಜಿತವಾದ ಗ್ರಂಥಾಲಯವನ್ನ ಸಹ ಅಭಿವೃದ್ಧಿಪಡಿಸಲಾಗುತ್ತಿದೆ.
ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಮೂಡಿದ ಹೊಸ ಭರವಸೆ
ಶಾಲೆಯ ಈ ಬದಲಾವಣೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಹೊಸ ಹುರುಪು ಮೂಡಿಸಿದೆ. ಮೊದಲೆಲ್ಲಾ ಗೋಡೆಗಳ ಮೇಲೆ ಗೀಚುತ್ತಿದ್ದ ಮಕ್ಕಳು, ಇದೀಗ ಆ ಗೋಡೆಗಳನ್ನ ತಮ್ಮ ಕಲಿಕೆಯ ಭಾಗವೆಂದು ಭಾವಿಸಿ ಅದನ್ನು ರಕ್ಷಿಸಲು ಮುಂದಾಗುತ್ತಿದ್ದಾರೆ.
ಶಾಲೆಯ ಪ್ರಾಂಶುಪಾಲರಾದ ಶ್ವೇತಾ ಧಲ್ವಾಲೆ ಅವರ ಪ್ರಕಾರ, ಶಾಲೆಯ ನವೀಕರಣದ ನಂತರ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಾಗಿದ್ದು, ಕಲಿಕಾ ವಾತಾವರಣ ಕೂಡ ತುಂಬ ಚನ್ನಾಗಿದೆ. ಕೇವಲ ಭೌತಿಕ ಬದಲಾವಣೆ ಮಾತ್ರವಲ್ಲದೆ, ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಇದು ಸಕಾರಾತ್ಮಕ ಪರಿಣಾಮ ಬೀರಿದೆ.
ಝೀರೋ ಗ್ರಾವಿಟಿ ಸಂಸ್ಥೆಯು ಇಲ್ಲಿಯವರೆಗೆ 150ಕ್ಕೂ ಹೆಚ್ಚು ಶಾಲೆಗಳನ್ನು ನವೀಕರಿಸಿದ್ದು, 1,000ಕ್ಕೂ ಹೆಚ್ಚು ಶಾಲೆಗಳು ಇವರ ಸೇವೆಗಾಗಿ ಕಾಯುತ್ತಿವೆ. ಸಮಾಜವು ನಮ್ಮ ಬಗ್ಗೆ ಕಾಳಜಿ ವಹಿಸುತ್ತದೆ, ನಮಗೂ ಬೆಲೆಯಿದೆ ಎಂಬ ಭಾವನೆ ಮಕ್ಕಳಲ್ಲಿ ಮೂಡಬೇಕು ಎಂಬುದೇ ಮೈತ್ರಿ ಜಿಚ್ಕರ್ ಅವರ ಮುಖ್ಯ ಆಶಯ.


Click it and Unblock the Notifications
