53 ಎನ್‌ಸಿಪಿ ಶಾಸಕರಲ್ಲಿ ಪಕ್ಷ ಬಿಟ್ಟವರು ಎಷ್ಟು ಜನ? ಹೇಗಿದೆ ಮಹಾರಾಷ್ಟ್ರ ಸರ್ಕಾರದ ಹೊಸ ಲೆಕ್ಕಾಚಾರ?
ಮುಂಬೈ: ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಈಗ ಇಡೀ ದೇಶದ ಕೇಂದ್ರ ಬಿಂದುವಾಗಿದೆ. ಅಜಿತ್ ಪವಾರ್ ಮಹಾರಾಷ್ಟ್ರ ನೂತನ ಉಪಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದು, ಪ್ರಮಾಣ ವಚನ ಕೂಡ ಸ್ವೀಕರಿಸಿದ್ದಾರೆ. ಇನ್ನು ಅಜಿತ್ ಪವಾರ್ ಜೊತೆಗೆ 13 ಎನ್‌ಸಿಪಿ ಶಾಸಕರು ಮಾತ್ರ ಹೋಗಬಹುದು ಎಂದು ಅಂದಾಜು ಮಾಡಲಾಗಿತ್ತು. ಆದ್ರೆ ಲೆಕ್ಕಾಚಾರ ಉಲ್ಟಾ ಆಗೋಗಿದ್ದು, ಎನ್‌ಸಿಪಿ ನಾಯಕರಿಗೆ ಸಿಡಿಲು ಬಡಿದಂತಾಗಿದೆ.
ಶರದ್ ಪವಾರ್ ಸಂಬಂಧಿಯೂ ಆಗಿದ್ದ ಅಜಿತ್ ಪವಾರ್ ತಮ್ಮ ಮಾತೃ ಪಕ್ಷ ಎನ್‌ಸಿಪಿಗೆ ಮತ್ತೊಮ್ಮೆ ಗುಡ್‌ಬೈ ಹೇಳಿದ್ದಾರೆ. ಈ ಹಿಂದೆ ಮಹಾರಾಷ್ಟ್ರದಲ್ಲಿ ರಾಜಕೀಯ ಅಲ್ಲೋಲ, ಕಲ್ಲೋಲ ಉಂಟಾದ ಸಂದರ್ಭದಲ್ಲೂ ಬಿಜೆಪಿ ಜೊತೆಗೆ ಕೈಜೋಡಿಸಲು ಅಜಿತ್ ಪವಾರ್ ಮುಂದಾಗಿದ್ದರು. ಈಗ ಅಂತಿಮವಾಗಿ ಎನ್‌ಸಿಪಿ ಪಕ್ಷದಿಂದ ಹೊರಗೆ ಕಾಲಿಟ್ಟಿದ್ದಾರೆ. ಇದು ಶರದ್ ಪವಾರ್‌ಗೆ ಆಘಾತ ನೀಡಿದ್ದರೆ, ಪಕ್ಷದ ನಾಯಕರಿಗೂ ಸಿಡಿಲು ಬಡಿದಿದೆ. ಇನ್ನೇನು ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾದ ಹೊತ್ತಲ್ಲೇ ಶಾಕ್ ಸಿಕ್ಕಿದೆ. ಆದ್ರೆ ಇದೀಗ ಅಜಿತ್ ಪವಾರ್ ಜೊತೆ ಹೊರ ಬಂದಿರುವ ಎನ್‌ಸಿಪಿ ಶಾಸಕರ ಸಂಖ್ಯೆ ಎಷ್ಟು ಗೊತ್ತಾ? ಮುಂದೆ ಓದಿ (ajit pawar).

53 ಶಾಸಕರಲ್ಲಿ 40 ಶಾಸಕರು ಎಸ್ಕೇಪ್?
ಹೌದು, ಬರೋಬ್ಬರಿ 40 ಶಾಸಕರು ದಿಢೀರ್ ಎನ್‌ಸಿಪಿ ಪಕ್ಷಕ್ಕೆ ಗುಡ್‌ಬೈ ಹೇಳುತ್ತಿದ್ದಾರಂತೆ. ಈ ಲೆಕ್ಕಾಚಾರ ಹೇಳಿರುವುದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರು. ಮಹಾರಾಷ್ಟ್ರದ ಎನ್‌ಸಿಪಿ ಪಕ್ಷದ 40 ಶಾಸಕರು ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆಂದು ಈಗ ಮಹಾರಾಷ್ಟ್ರದ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ್ ಬವಾಂಕುಲೆ ಹೇಳಿದ್ದಾರೆ. ಅಂದಹಾಗೆ ಅಜಿತ್ ಜೊತೆ ಶರದ್ ಪವಾರ್ ಬಣದ ಒಟ್ಟು 8 ಶಾಸಕರು ಶಿವಸೇನಾ & ಬಿಜೆಪಿ ನೇತೃತ್ವದ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣ ಸ್ವೀಕಾರದ ವೇಳೆ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜಭವನದಲ್ಲಿ ಉಪಸ್ಥಿತರಿದ್ದರು. ಈ ನಡುವೆ 53 ಎನ್‌ಸಿಪಿ ಶಾಸಕರಲ್ಲಿ 40 ಶಾಸಕರು ದಿಢೀರ್ ಪಕ್ಷಬಿಟ್ಟು ಎಸ್ಕೇಪ್ ಆಗುತ್ತಿರುವ ವಿಚಾರ ಸಂಚಲನ ಸೃಷ್ಟಿಸಿದೆ.
ಡಿಸಿಎಂ ಜೊತೆ ಸಿಎಂ ಸ್ಥಾನಕ್ಕೆ ಸ್ಕೆಚ್?
ಅಜಿತ್ ಹೀಗೆ ದಿಢೀರ್ ಪಕ್ಷ ಬಿಟ್ಟಿದ್ದು ಏಕೆ? ಕೇವಲ ಡಿಸಿಎಂ ಸ್ಥಾನಕ್ಕಾಗಿ ಪಕ್ಷ ಬಿಟ್ಟರಾ? ಇಲ್ಲ ಬೇರೆ ಏನಾದರೂ ರಣತಂತ್ರ ಇದೆಯಾ? ಹೀಗೆ ಸಾಲು ಸಾಲು ಪ್ರಶ್ನೆಗಳು ಇದೀಗ ಮಹಾರಾಷ್ಟ್ರ ರಾಜಕಾರಣವನ್ನ ಕಾಡುತ್ತಿದೆ. ಇದಕ್ಕೆಲ್ಲಾ ಒನ್‌ಲೈನ್ ಉತ್ತರವೆಂದರೆ ಅಧಿಕಾರ! ಯೆಸ್.. ಎನ್‌ಸಿಪಿ ಒಳಗೆ ಅಧಿಕಾರಕ್ಕಾಗಿ ಕಿತ್ತಾಟ ಶುರುವಾದಂತೆ ಕಾಣುತ್ತಿದೆ. ಅತ್ತ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಹಾಗೂ ಅಜಿತ್ ಪವಾರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು ಎಂಬ ಆರೋಪವಿತ್ತು. ಅದಕ್ಕೆ ಬಲ ನೀಡುವಂತೆ ಶರದ್ ಪಕ್ಷದ ಒಳಗೆ ಜಗಳ ಶುರುವಾಗಿತ್ತು. ಹಾಗೇ ಇನ್ನೊಂದ್ಕಡೆ ಈಗ ಪಕ್ಷ ಬಿಟ್ಟಿರುವ ಅಜಿತ್ ಪವಾರ್‌ಗೆ ಸಿಕ್ಕಿರುವ ಡಿಸಿಎಂ ಪಟ್ಟ ಮುಂದೆ ಸಿಎಂ ಪಟ್ಟವಾಗಿ ಪರಿವರ್ತನೆ ಆಗಲೂಬಹುದು.
ಬಿಜೆಪಿ ಲೆಕ್ಕಾಚಾರ ವರ್ಕೌಟ್ ಆಯ್ತಾ?
ಲೋಕಸಭೆಯ ಮೇಲೆ ಕಣ್ಣಿಟ್ಟಿರುವ ಮಹಾರಾಷ್ಟ್ರದ ಬಿಜೆಪಿ ನಾಯಕರಿಗೆ ಪ್ರಮುಖ ಎದುರಾಳಿ NCP. ಹೇಗೆಂದರೆ ಈಗಾಗಲೇ ಶಿವಸೇನೆ ಛಿದ್ರವಾಗಿದ್ದು, ತನ್ನ ಮತ್ತೊಬ್ಬ ಎದುರಾಳಿಗೆ ಠಕ್ಕರ್ ಕೊಡಲು ಸ್ಥಳೀಯ ಬಿಜೆಪಿ ನಾಯಕರು ತಂತ್ರ ಅನುಸರಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅದರಲ್ಲೂ ಲೋಕಸಭೆ ಚುನಾವಣೆ ನಡೆದು 5-6 ತಿಂಗಳ ಒಳಗೆ ಮಹಾರಾಷ್ಟ್ರ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ಇದೇ ಕಾರಣಕ್ಕೆ ಅಜಿತ್ ಪವಾರ್‌ಗೆ ಗಾಳ ಹಾಕಿದ್ದ ಸ್ಥಳೀಯ ಬಿಜೆಪಿ ನಾಯಕರು, ಈಗ ಡಿಸಿಎಂ ಸ್ಥಾನ ನೀಡಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಅಕಸ್ಮಾತ್ ಈ ರಣತಂತ್ರ ನಿಜವಾಗಿದ್ದೇ ಆದರೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗೆ ಗುರಿ ಇಟ್ಟಂತಾಗುತ್ತದೆ.












Click it and Unblock the Notifications