‘ವಿಶ್ವಗುರು’ ಭಾರತ: G20 ಶೃಂಗಸಭೆ ಮೂಲಕ ಮತ್ತೆ ಸಾಬೀತು!
ಶ್ರೀನಗರ: ಭಾರತ 'ವಿಶ್ವಗುರು' ಎಂದು ಕರೆಸಿಕೊಳ್ಳುತ್ತಿದೆ, ಅದರಲ್ಲೂ ಕಳೆದ 75 ವರ್ಷದಿಂದ ಜಾಗತಿಕವಾಗಿ ಭಾರತದ ಸ್ಥಾನಮಾನ ಏರುತ್ತಲೇ ಸಾಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, G20 ಶೃಂಗಸಭೆಯ ಮೂಲಕ ತನ್ನ ಪವರ್ ತೋರಿಸುತ್ತಿದೆ. ಅದರಲ್ಲೂ ಭಾರತದ ಕಿರೀಟ ಕಾಶ್ಮೀರದಲ್ಲಿ ಆರಂಭವಾಗಿರುವ ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆ ಶತ್ರುಗಳ ನಿದ್ದೆಗೆಡಿಸಿದೆ.
ಪಾಕಿಸ್ತಾನಕ್ಕೆ ಹೇಗಾದರೂ ಭಾರತದ ಹೆಸರು ಕೆಡಿಸುವ ಹುಚ್ಚು. ಈ ಕಾರಣಕ್ಕೆ G20 ಸಭೆ ಕಾಶ್ಮೀರದ ಹೃದಯ ಭಾಗದಲ್ಲಿ ಆಯೋಜನೆ ಆಗಿರುವುದಕ್ಕೆ ನಾನಾ ಕುತಂತ್ರ ಮಾಡಿತ್ತು ಪಾಕ್. ಪಾಕಿಸ್ತಾನದ ಮಾತು ಕೇಳಿ ಕೆಲವು ರಾಷ್ಟ್ರಗಳು ಜಿ20 ಕಾಶ್ಮೀರದ ಸಭೆಯಿಂದ ದೂರ ಉಳಿದಿವೆ ಎಂಬ ಆರೋಪವೂ ಇದೆ. ಈ ಹೊತ್ತಲ್ಲೇ ಭಾರತ ಕೂಡ ಖಡಕ್ ತಿರುಗೇಟು ನೀಡುತ್ತಿದೆ. ಬೆಳಗ್ಗೆಯಷ್ಟೇ ಚೀನಾ ಚಕ್ಕರ್ ಹಾಕಿದ ಬಗ್ಗೆ ಖಡಕ್ ಮಾತು ಹೇಳಿತ್ತು ಭಾರತ, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 'ವಿಶ್ವಗುರು' ಎಂಬುದನ್ನ ಸಾಬೀತು ಮಾಡುತ್ತಿದೆ.

'ವಿಶ್ವಗುರು' ಭಾರತಕ್ಕೆ ಹೆಚ್ಚಿನ ಹೊಣೆ?
ಹೌದು ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹಲವು ಮಾಹಿತಿ ಹಂಚಿಕೊಂಡಿದ್ದಾರೆ. ಈ ವೇಳೆ, 'ಆರ್ಥಿಕತೆ ಹಾಗೂ ಪರಿಸರ ಮತ್ತು ಸಮಾಜವನ್ನು ಕೇಂದ್ರವಾಗಿಸಿ ಜಾಗತಿಕ ಹೊಣೆ ಹೊರಲು ಭಾರತ ಸನ್ನದ್ಧವಾಗಿದೆ' ಎಂದಿದ್ದಾರೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್. ಇನ್ನು ಈ ಮೂಲಕ ಪಾಕಿಸ್ತಾನ ಸೇರಿದಂತೆ ಭಾರತದ ಶತ್ರು ರಾಷ್ಟ್ರಗಳಿಗೆ ಪರೋಕ್ಷ ಸಂದೇಶ ರವಾನೆಯಾಗಿದೆ. ಹಾಗೇ ನಮ್ಮ ತಂಟೆಗೆ ಬಂದರೆ ನಾವು ಎಷ್ಟು ಬಲಾಢ್ಯರು ಎಂಬುದನ್ನ ಕೂಡ ಭಾರತ ಜಗತ್ತಿಗೇ ತೋರಿಸುತ್ತಿದೆ.
ಕಾಶ್ಮೀರ ವಿಷಯದಲ್ಲಿ ಖಡಕ್ ಮಾತು!
'ರಮಣೀಯ ತಾಣ ಶ್ರೀನಗರದಲ್ಲಿ ನಾವು ಭೇಟಿಯಾಗುತ್ತಿರುವ ಹೊತ್ತಿನಲ್ಲಿ, ಎಲ್ಲರೂ ಜಗತ್ತಿನ ಭಾಗ ಎಂಬುದನ್ನ ಅರಿತುಕೊಳ್ಳಬೇಕು. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತದ ನಿಲುವು ಈ ವಿಷಯದಲ್ಲಿ ಸ್ಪಷ್ಟವಾಗಿದೆ' ಎನ್ನುವ ಮೂಲಕ ಪಾಕಿಸ್ತಾನದ ರಾಜಕಾರಣಿಗಳಿಗೆ, ಪಾಕಿಸ್ತಾನದ ಸೇನೆಗೆ ಹಾಗೂ ಪಾಕಿಸ್ತಾನ ಬೆಳೆಸುತ್ತಿರುವ ಉಗ್ರರಿಗೆ ಸರಿಯಾದ ವಾರ್ನಿಂಗ್ ರವಾನಿಸಲಾಗಿದೆ. ಕಾಶ್ಮೀರ ಎಂದೆಂದಿಗೂ ಭಾರತದ್ದೇ, ಇದು ಭಾರತದ ಕಿರೀಟವಾಗಿ ಉಳಿಯಲಿದೆ ಎಂಬ ಸಂದೇಶ ಪಾಕಿಸ್ತಾನಕ್ಕೆ ರವಾನೆಯಾಗಿದೆ.

ಬೆಳಗ್ಗೆಯಷ್ಟೇ ಚೀನಾಗೂ ತಿರುಗೇಟು!
ಭಾರತದ ಕಿರೀಟ ಕಾಶ್ಮೀರದಲ್ಲಿ ನಡೆಯುತ್ತಿರುವ ಜಿ20 ಸಭೆಗೆ ಚೀನಾ ಚಕ್ಕರ್ ಹಾಕಿದ್ದು, ಈ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಖಡಕ್ ಆಗಿ ರಿಯಾಕ್ಷನ್ ನೀಡಿದ್ದರು. ಶ್ರೀನಗರದ G20 ಸಭೆಯಲ್ಲಿ ಚೀನಾ ಭಾಗವಹಿಸದೇ ಇರುವುದು ನಮಗೆ ಯಾವುದೇ ವ್ಯತ್ಯಾಸ ಉಂಟುಮಾಡಿಲ್ಲ. ಈ ನಡೆಯಿಂದ ಚೀನಾಗೆ ನಷ್ಟವಾಗಿದೆಯೇ ಹೊರತು, ಭಾರತಕ್ಕೆ ಅಲ್ಲ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಎಂದಿದ್ದರು. ಇದೀಗ ಭಾರತ ಜಾಗತಿಕ ನಾಯಕತ್ವವನ್ನ ವಹಿಸಿಕೊಳ್ಳುವ ಬಗ್ಗೆಯೂ ಚರ್ಚೆಯಾಗಿರುವುದು ಭಾರತದ ಶಕ್ತಿಯನ್ನ ಜಗತ್ತಿಗೇ ಮನದಟ್ಟು ಮಾಡಲಾಗಿದೆ.
ನೋ ಟೆನ್ಷನ್.. ಕೂಲ್..!
ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಯಿಂದ ಚೀನಾ, ಸೌದಿ, ಟರ್ಕಿ ಎಸ್ಕೇಪ್ ಆಗಿವೆ. ಕಾಶ್ಮೀರದಲ್ಲಿ ಈ ಸಭೆ ನಡೆಯುತ್ತಿರುವ ಕಾರಣ ನಾನು ಬರಲ್ಲ ಅಂತಾ ಚೀನಾ ಹೇಳಿದ್ದರೆ, ಟರ್ಕಿ ಪರೋಕ್ಷವಾಗಿ ಇದೇ ಮಾತನ್ನ ತಿಳಿಸಿದೆ. ಸೌದಿ ಅರೇಬಿಯಾ ಯಾವ ರಿಯಾಕ್ಷನ್ ನೀಡದೆ ಚಕ್ಕರ್ ಹಾಕಿದೆ. ಪಾಕ್ ನಾಯಕರ ಮನ ಒಲಿಸಲು ಈ ರಾಷ್ಟ್ರಗಳು ಪ್ರಯತ್ನಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಆದರೆ ಭಾರತಕ್ಕೆ ಇದರಿಂದ ನಷ್ಟವಿಲ್ಲ ಎಂಬ ಸಂದೇಶ ಕೇಂದ್ರ ಸರ್ಕಾರದಿಂದ ಸಿಕ್ಕಿದೆ.

ಕಣಿವೆ ರಾಜ್ಯ ಎಂದಿಗೂ ನಮ್ಮದು!
ಜಮ್ಮು & ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ 2019ರಲ್ಲಿ ಕೇಂದ್ರ ಸರ್ಕಾರ ರದ್ದುಪಡಿಸಿತು. ಆ ಬಳಿಕ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಕಾರ್ಯಕ್ರಮ ಇದು. ಚೀನಾ, ಸೌದಿ ಅರೇಬಿಯಾ & ಟರ್ಕಿ ಹೊರತುಪಡಿಸಿ ಪಾಕಿಸ್ತಾನ & ಚೀನಾ ವಿರೋಧದ ನಡುವೆಯೂ ಜಿ20ಗೆ ಒಕ್ಕೂಟದ ಬಹುತೇಕ ಎಲ್ಲಾ ದೇಶಗಳು ಸಭೆಗೆ ಹಾಜರಾಗಿವೆ. ಈ ಮೂಲಕ ಪಾಕ್ ಎಷ್ಟೇ ಪ್ರಯತ್ನಿಸಿದ್ರೂ ಭಾರತದ ಶಕ್ತಿಯನ್ನ ಜಾಗತಿಕ ಮಟ್ಟದಲ್ಲಿ ಕುಗ್ಗಿಸಲು ಆಗಿಲ್ಲ.
G20 ಸದಸ್ಯ ರಾಷ್ಟ್ರಗಳು ಯಾರು?
ಜಗತ್ತಿನ ಅತ್ಯಂತ ಶಕ್ತಿಶಾಲಿ ಒಕ್ಕೂಟಗಳ ಪೈಕಿ ಜಿ20 ಗುಂಪು ಕೂಡ ಒಂದು. ಭಾರತ ಸೇರಿದಂತೆ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೊನೇಷ್ಯಾ, ಇಟಲಿ, ಜಪಾನ್, ಸೌತ್ ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಇಂಗ್ಲೆಂಡ್, ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಜಿ20 ಭಾಗವಾಗಿವೆ. ಈ ಪೈಕಿ ಸೌದಿ ಅರೇಬಿಯಾ, ಚೀನಾ, ಟರ್ಕಿ ಕಾಶ್ಮೀರದ ಜಿ20 ಸಭೆಗೆ ಚಕ್ಕರ್ ಹಾಕಿದ್ದಾರೆ.

ಅರುಣಾಚಲ ಸಭೆಗೂ ಚೀನಾ ಬಂದಿರಲಿಲ್ಲ
ಈ ಹಿಂದೆ ಅರುಣಾಚಲ ಸಭೆಯಿಂದ ದೂರವಾಗಿದ್ದ ಚೀನಾ, 22ರಿಂದ 25ರ ವರೆಗೆ ನಡೆಯಲಿರುವ ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಯಿಂದಲೂ ದೂರ ಉಳಿಯಲು ನಿರ್ಧರಿಸಿದೆ. ಈ ಸಭೆ ಕಾಶ್ಮೀರದಲ್ಲಿ ನಡೆಯುತ್ತಿರುವ ಕಾರಣ ಪಾಕಿಸ್ತಾನದ ಜೊತೆಗಿನ ಸಂಬಂಧ ಹಾಳಾಗಬಾರದು ಅಂತಾ ಚೀನಾ ಇಂತಹ ನಿರ್ಧಾರ ಕೈಂಡಿದೆ ಎನ್ನುವ ಮಾತು ಕೇಳಿಬಂದಿದೆ. ಮಾರ್ಚ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದ ಜಿ20 ಸಭೆಯಿಂದಲೂ ಚೀನಾ ಹಿಂದೆ ಸರಿದಿತ್ತು. ಈಗ ನೋಡಿದರೆ ಚೀನಾ, ಸೌದಿ ಅರೇಬಿಯಾ ಮತ್ತು ಟರ್ಕಿ ಎಸ್ಕೇಪ್ ಆಗಿವೆ.
ಕಣಿವೆ ರಾಜ್ಯದಲ್ಲಿ ಭಾರಿ ಭದ್ರತೆ
ಇದೀಗ ಕಣಿವೆ ರಾಜ್ಯದಲ್ಲಿ ಜಿ20ಯ ಪ್ರಮುಖ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರಿ ಭದ್ರತೆ ಕೈಗೊಂಡು ಎಲ್ಲೆಲ್ಲೂ ಯೋಧರನ್ನ ನಿಯೋಜಿಸಲಾಗಿದೆ. ಗಡಿ ಭಾಗದಲ್ಲೂ ಹೀಗೆ ಹದ್ದಿನ ಕಣ್ಣಿಟ್ಟಿರುವ ಸೇನೆ, ಅಲರ್ಟ್ ಆಗಿದೆ. ಜಗತ್ತಿನ ವಿವಿಧ ದೇಶಗಳಿಂದ ಅತಿಥಿಗಳು ಆಗಮಿಸಿರುವ ಹಿನ್ನೆಲೆ ಹದ್ದಿನ ಕಣ್ಣಿಟ್ಟು ಕಣಿವೆ ರಾಜ್ಯನ ಕಾಯಲಾಗುತ್ತಿದೆ. ಹಾಗೇ ಇದರ ಜೊತೆಗೆ ಸ್ಥಳೀಯ ಪ್ರವಾಸಿ ಸ್ಥಳಗಳನ್ನ ಬೇರೆ ಬೇರೆ ದೇಶಗಳ ಅತಿಥಿಗಳಿಗೆ ಪರಿಚಯ ಮಾಡಿಸಲಾಗುತ್ತಿದೆ.
ಕಾಶ್ಮೀರಕ್ಕೆ ಬಂದಿದೆ ಹೊಸ ಕಳೆ!
ಅಂದಹಾಗೆ ಇಂದಿನಿಂದ 25ರ ವರೆಗೂ ನಡೆಯಲಿರುವ ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಗಾಗಿ ಕಾಶ್ಮೀರ ಸಿದ್ಧಗೊಂಡು ಕಂಗೊಳಿಸುತ್ತಿದೆ. ಜಿ20 ಒಕ್ಕೂಟದ ಸದಸ್ಯ ರಾಷ್ಟ್ರಗಳ ಅತಿಥಿ ಪಡೆ ಕೂಡ ಕಾಶ್ಮೀರದ ಸೌಂದರ್ಯ ಸವಿಯುತ್ತಿದ್ದು, ಕಣಿವೆ ರಾಜ್ಯದ ಮೇಲಿನ ಭಾರತದ ಪವರ್ ಏನು ಅನ್ನೋದು ಜಗತ್ತಿಗೇ ಇಂದು ಗೊತ್ತಾಗುತ್ತಿದೆ. ಹಾಗೇ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನ ಪರಿಚಯಿಸುವ ಕೆಲಸ ಕೂಡ ನಡೆಯುತ್ತಿದೆ.












Click it and Unblock the Notifications